ಬಿಹಾರ ಮೂಲದ ಅಜಯ್‌ ಕುಮಾರ್‌ ಸೆರೆ, ಮತ್ತೊಬ್ಬ ಆರೋಪಿ ಪತ್ತೆಗೆ ಬಲೆ, ತಾಯಿಗೆ ನೆರವು ನೀಡಿ ಮಗನಿಗೆ ಗಾಳ ಹಾಕಿದ

ಬೆಂಗಳೂರು(ಡಿ.18):  ನಗರದಲ್ಲಿ ಸ್ವಿಗ್ಗಿ ಹಾಗೂ ಝೋಮಾಟೋ ಫುಡ್‌ ಡೆಲವರಿ ಹುಡುಗರ ಸೋಗಿನಲ್ಲಿ ಗ್ರಾಹಕರಿಗೆ ಡ್ರಗ್ಸ್‌ ಪೂರೈಸುತ್ತಿದ್ದ ಕಿಡಿಗೇಡಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಅಜಯ್‌ ಕುಮಾರ್‌ ಬಂಧಿತನಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಪ್ರಮುಖ ಆರೋಪಿ ಅಖಿಲೇಶ್‌ ಪತ್ತೆಗೆ ತನಿಖೆ ನಡೆದಿದೆ. ಆರೋಪಿಯಿಂದ ಮೊಬೈಲ್‌, ಬೈಕ್‌ಗಳು ಹಾಗೂ ನಾಲ್ಕು ಲಕ್ಷ ರು. ಮೌಲ್ಯದ ಎಲ್‌ಎಸ್‌ಡಿ ಹಾಗೂ ಗಾಂಜಾ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ನಗರದಲ್ಲಿ ಬಿಹಾರ ಮೂಲದ ಈ ಇಬ್ಬರು ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಇನ್ಸ್‌ಪೆಕ್ಟರ್‌ ದೀಪಕ್‌ ನೇತೃತ್ವದ ತಂಡ ಬಂಧಿಸಿದೆ.

ಬಿಹಾರ ಮೂಲದ ಅಖಿಲೇಶ್‌ ವೃತ್ತಿಪರ ಡ್ರಗ್ಸ್‌ ಪೆಡ್ಲರ್‌ ಆಗಿದ್ದು, ಆನ್‌ಲೈನ್‌ನಲ್ಲೇ ಗ್ರಾಹಕರನ್ನು ಸಂಪರ್ಕಸಿ ಸಹಚರರ ಮುಖಾಂತರ ಗ್ರಾಹಕರಿಗೆ ಡ್ರಗ್ಸ್‌ ಪೂರೈಸುತ್ತಿದ್ದ. ಕೆಲ ತಿಂಗಳ ಹಿಂದೆ ಅಖಿಲೇಶ್‌ಗೆ ತನ್ನೂರಿನ ಪಕ್ಕದ ಅಜಯ್‌ ಪರಿಚಯವಾಗಿದೆ. ಆರು ತಿಂಗಳ ಹಿಂದೆ ಉದ್ಯೋಗ ಅರಸಿ ಬಿಹಾರದಿಂದ ನಗರಕ್ಕೆ ಬಂದಿದ್ದ ಅಜಯ್‌, ಕಾಡುಗೋಡಿ ಸಮೀಪ ನೆಲೆಸಿದ್ದ. ಬಳಿಕ ಸ್ವಿಗ್ಗಿ ಹಾಗೂ ಝೋಮಾಟೋ ಸಂಸ್ಥೆಯಲ್ಲಿ ಡೆಲವರಿ ಬಾಯ್‌ಯಾಗಿ ಆತ ಕೆಲಸ ಆರಂಭಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಬಾತ್ಮಿದಾರನ ಹತ್ಯೆಗೆ ರಸ್ತೆಯಲ್ಲೇ ಲಾಂಗ್‌ ಹಿಡಿದು ಪೆಡ್ಲರ್‌ ರೌಂಡ್ಸ್‌

ನೆರವು ನೆಪದಲ್ಲಿ ಗಾಳ ಹಾಕಿದ

ಹೀಗಿರುವಾಗ ಇತ್ತೀಚಿಗೆ ಅನಾರೋಗ್ಯ ಹಿನ್ನಲೆಯಲ್ಲಿ ಅಜಯ್‌ ತಾಯಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ ಅಖಿಲೇಶ್‌, ‘ತಾನು ಹೇಳಿದ ಕೆಲಸ ಮಾಡು. ನಿನಗೆ ಕೈ ತುಂಬಾ ಹಣ ಸಿಗಲಿದೆ. ನಿಮ್ಮ ತಾಯಿ ವೈದ್ಯಕೀಯ ವೆಚ್ಚವನ್ನು ನಾನೇ ಭರಿಸುತ್ತೇನೆ’ ಎಂದಿದ್ದ. ಈ ಮಾತು ನಂಬಿದ ಅಜಯ್‌, ಬಳಿಕ ಸ್ವಿಗ್ಗಿಯಲ್ಲಿ ಕೆಲಸ ತೊರೆದು ಡ್ರಗ್ಸ್‌ ಪೂರೈಕೆದಾರನಾದ. ಕಾಡುಗೋಡಿಯ ಅಜಯ್‌ ಮನೆಗೆ ತನ್ನ ಸಹಚರ ಮೂಲಕ ಡ್ರಗ್‌್ಸ ಅನ್ನು ಅಖಿಲೇಶ್‌ ತಲುಪಿಸುತ್ತಿದ್ದ. ಬಳಿಕ ಆತ ಹೇಳಿದ ಸ್ಥಳಕ್ಕೆ ಸ್ವಿಗ್ಗಿ ಡೆಲವರಿ ಬಾಯ್‌ ಹುಡುಗನ ವೇಷದಲ್ಲಿ ತೆರಳಿ ಗ್ರಾಹಕನಿಗೆ ಡ್ರಗ್ಸ್‌ ಕೊಟ್ಟು ಅಜಯ್‌ ಬರುತ್ತಿದ್ದ. ಈತನಿಗೆ ಮಾಸಿಕ 40 ಸಾವಿರ ರು ಸಂಬಳ ನೀಡುವುದಾಗಿ ಪೆಡ್ಲರ್‌ ಹೇಳಿದ್ದ. ಎರಡು ತಿಂಗಳ ಹಿಂದೆ ಸ್ವಿಗ್ಗಿ ಸಂಸ್ಥೆಯಲ್ಲಿ ಕೆಲಸ ತೊರೆದರು ಸಹ ಸಮವಸ್ತ್ರ ಮರಳಿಸದೆ ಅಜಯ್‌ ದಂಧೆ ಮುಂದುವರೆಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಗ್ರಾಹಕರ ಪರಿಚಯವಾಗಲಿ ಅಥವಾ ತನ್ನ ಮನೆ ಬಾಗಿಲಿಗೆ ಗ್ರಾಹಕರಿಗೆ ತಲುಪಿಸಲು ಡ್ರಗ್ಸ್‌ ತಂದು ಕೊಡುತ್ತಿದ್ದವನ ಬಗ್ಗೆಯಾಗಲಿ ಅಜಯ್‌ ಮಾಹಿತಿ ಇರಲಿಲ್ಲ. ಆನ್‌ಲೈನ್‌ಲ್ಲೇ ಸಂಪೂರ್ಣವಾಗಿ ಡ್ರಗ್ಸ್‌ ಡೀಲ್‌ ಮಾಡುತ್ತಿದ್ದ ಅಜಯ್‌, ತನ್ನ ಬಗ್ಗೆ ಮಾಹಿತಿ ಸಿಗದೆ ಗೌಪ್ಯತೆ ಕಾಪಾಡಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.