ವೈದ್ಯ ದಂಪತಿಯ ಆಯುಷ್ಮಾನ್ ಭಾರತ್ ದಂಧೆ ಪತ್ತೆ: ಆರೋಗ್ಯವಂತರನ್ನು ಹೋಟೆಲ್‌ನಲ್ಲಿ ಇರಿಸಿ ನಕಲಿ ಚಿಕಿತ್ಸೆ
ರೋಗ್ಯವಂತ ವ್ಯಕ್ತಿಗಳನ್ನು ಅನಾರೋಗ್ಯಪೀಡಿತರು ಎಂದು ತೋರಿಸಿ, ಆಯುಷ್ಮಾನ್ ಭಾರತ್ ಯೋಜನೆಯಡಿ ಲಭ್ಯವಿರುವ ವಿಮೆ ಹಣ ದೋಚುವ ದಂಧೆ ನಡೆಸುತ್ತಿದ್ದ ಮಧ್ಯಪ್ರದೇಶದ ಜಬಲ್ಪುರದ ವೈದ್ಯ ದಂಪತಿಯನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ.
ಭೋಪಾಲ್: ಆರೋಗ್ಯವಂತ ವ್ಯಕ್ತಿಗಳನ್ನು ಅನಾರೋಗ್ಯಪೀಡಿತರು ಎಂದು ತೋರಿಸಿ, ಆಯುಷ್ಮಾನ್ ಭಾರತ್ ಯೋಜನೆಯಡಿ ಲಭ್ಯವಿರುವ ವಿಮೆ ಹಣ ದೋಚುವ ದಂಧೆ ನಡೆಸುತ್ತಿದ್ದ ಮಧ್ಯಪ್ರದೇಶದ ಜಬಲ್ಪುರದ ವೈದ್ಯ ದಂಪತಿಯನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ. ಪ್ರಕರಣ ಸಂಬಂಧ ಡಾ. ಅಶ್ವಿನಿ ಪಾಠಕ್ ಮತ್ತು ಡಾ.ದುಹಿತಾ ಪಾಠಕ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ರೋಗಿಗಳನ್ನು ಇರಿಸಲಾಗಿದ್ದ ಆಸ್ಪತ್ರೆ ಪಕ್ಕದ ಹೋಟೆಲ್ ಅನ್ನೂ ಜಿಲ್ಲಾಡಳಿತ ಬಂದ್ ಮಾಡಿಸಿದೆ.
ಏನಿದು ಹಗರಣ?:
ಡಾ.ಅಶ್ವಿನಿ ಮತ್ತು ಡಾ.ದುಹಿತಾ ಜಬಲ್ಪುರದಲ್ಲಿ ಸೆಂಟ್ರಲ್ ಇಂಡಿಯಾ ಕಿಡ್ನಿ ಹಾಸ್ಪಿಟಲ್ ಎಂಬ ಆಸ್ಪತ್ರೆ ನಡೆಸುತ್ತಿದ್ದಾರೆ. ಇವರು ಆಯುಷ್ಮಾನ್ ಭಾರತ್ ವಿಮಾ ಕಾರ್ಡ್ ಹೊಂದಿರುವ 70 ಆರೋಗ್ಯವಂತ ಅಥವಾ ತೀರಾ ಕಮ್ಮಿ ಆರೋಗ್ಯ ಸಮಸ್ಯೆ ಇರುವ ಅಮಾಯಕರಿಗೆ ಬಿಡಿಗಾಸು ಹಣ ಕೊಟ್ಟು ಅವರನ್ನು ರೋಗಿಗಳೆಂದು ದಾಖಲೆ ಸೃಷ್ಟಿಸಿದ್ದರು. ಆದರೆ ಅವರನ್ನು ಆಸ್ಪತ್ರೆಗಳಲ್ಲಿ ಇಡುವ ಬದಲು ಆಸ್ಪತ್ರೆ ಪಕ್ಕದಲ್ಲೇ ಇರುವ, ಹಾಲಿ ಮುಚ್ಚಿರುವ ತಮ್ಮ ಪುತ್ರನ ಹೆಸರಿನಲ್ಲಿರುವ ವೇಗಾ ಎಂಬ ಹೋಟೆಲ್‌ನ ಕೊಠಡಿಗಳಲ್ಲಿ ಇರಿಸಿದ್ದರು.
ವೈದ್ಯನ ಮೇಲೆ ಸಿಎಂ ಪುತ್ರಿಯಿಂದ ಹಲ್ಲೆ: ಕ್ಷಮೆಯಾಚಿಸಿದ ಸಿಎಂ: ವೈದ್ಯರಿಂದ ಪ್ರತಿಭಟನೆ
ಹೀಗೆ ಕೆಲ ದಿನಗಳ ಕಾಲ ಇವರನ್ನು ಹೋಟೆಲ್‌ನಲ್ಲಿ ಇರಿಸಿ ಬಳಿಕ ಅವರಿಗೆ ಚಿಕಿತ್ಸೆ ನೀಡಿದ್ದಾಗಿ ಹೇಳಿ ಪ್ರತಿ ರೋಗಿಗೆ ಲಭ್ಯವಿರುವ ತಲಾ 5 ಲಕ್ಷ ರು.ವರೆಗಿನ ವಿಮಾ ಹಣ ದೋಚುವ ಸಂಚನ್ನು ವೈದ್ಯ ದಂಪತಿ ರೂಪಿಸಿದ್ದರು. ಇದಕ್ಕೆ ಪೂರಕವೆಂಬಂತೆ, ಆಸ್ಪತ್ರೆಯ ದಾಖಲೆಗಳಲ್ಲಿ ರೋಗಿಗಳಿಗೆ ಇರುವುದಾಗಿ ಹೇಳಿರುವ ಕಾಯಿಲೆಗೂ, ವಾಸ್ತವವಾಗಿ ಅವರಿಗೆ ಇರುವ ತೊಂದರೆಗೂ ಏನೂ ಸಾಮ್ಯತೆಯೇ ಇರಲಿಲ್ಲ.
ಇಂಥದ್ದೊಂದು ಹಗರಣದ ಸುಳಿವು ಪಡೆದ ಸ್ಥಳೀಯ ಪೊಲೀಸರು ಕಳೆದ ಶುಕ್ರವಾರ, ಜಿಲ್ಲಾ ಆರೋಗ್ಯ ಅಧಿಕಾರಿಗಳ ನೆರವಿನೊಂದಿಗೆ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಹೋಟೆಲ್‌ನ ಕೊಠಡಿಗಳಲ್ಲಿ ಒಂದೇ ಬೆಡ್ ಮೇಲೆ ಇಬ್ಬಿಬ್ಬರನ್ನು ಮಲಗಿಸಿ ಚಿಕಿತ್ಸೆ ನೀಡುತ್ತಿದ್ದ ವಿಷಯ ಕಂಡುಬಂದಿದೆ. ಪ್ರಾಥಮಿಕ ತನಿಖೆ ವೇಳೆ ವೈದ್ಯ ದಂಪತಿ ವಂಚನೆ ಎಸಗುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧವೂ ಭಾನುವಾರ ಪ್ರಕರಣ ದಾಖಲಿಸಿಕೊಂಡು, ವಶಕ್ಕೆ ಪಡೆಯಲಾಗಿದೆ.
ಬಡ್ಡಿ ಆಸೆ ತೋರಿಸಿ ಸಾವಿರಾರು ಜನರಿಗೆ ಪಂಗನಾಮ; ಕೋಟ್ಯಂತರ ರೂ. ಹಣದೊಂದಿಗೆ ಎಸ್ಕೆಪ್!
ಆದರೆ ತಮ್ಮ ಮೇಲಿನ ಆರೋಪವನ್ನು ವೈದ್ಯ ದಂಪತಿ ತಳ್ಳಿಹಾಕಿದ್ದಾರೆ. ಹೋಟೆಲ್ ಅನ್ನು ಕಾನೂನು ಬದ್ಧವಾಗಿಯೇ ಅನುಮತಿ ಪಡೆದು 100 ಬೆಡ್ ಸಾಮರ್ಥ್ಯದ ಆಸ್ಪತ್ರೆಯಾಗಿ ಪರಿವರ್ತಿಸಿದ್ದೇವೆ. ಜೊತೆಗೆ ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿರುವವರಿಂದ ಚಿಕಿತ್ಸೆ ನೀಡಿದ್ದಕ್ಕಾಗಿ ಒಂದೇ ಒಂದು ರುಪಾಯಿ ಕೂಡಾ ಪಡೆದುಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಇವರ ವಾದವನ್ನು ಜಿಲ್ಲಾಡಳಿತ ತಳ್ಳಿಹಾಕಿದೆ.
ಸರ್ಕಾರ ಬಡವರ ಆರೋಗ್ಯ ಹಾಗೂ ರಕ್ಷಣೆಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಆದರೆ ಇಂತಹ ವಂಚಕರಿಂದಾಗಿ ಈ ಅತ್ಯುತ್ತಮವಾದ ಆರೋಗ್ಯ ಸೌಲಭ್ಯಗಳು ತಲುಪಬೇಕಾದವರನ್ನು ತಲುಪದೇ ಅವರು ಅದೇ ಸಂಕಷ್ಟದಲ್ಲಿಯೇ ಬಳಲುವಂತೆ ಮಾಡುತ್ತಿದೆ.