Actor Chetan - Kantara Row: ದೈವಾರಾಧನೆ ಹಿಂದೂ ಸಂಪ್ರದಾಯವಲ್ಲವೆಂದು ಹೇಳಿಕೆ ನೀಡುವ ಮೂಲಕ ನಟ ಚೇತನ್‌ ಲಕ್ಷಾಂತರ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿ ಕೊಡಗು ಯುವಸೇನೆ ಮಡಿಕೇರಿಯಲ್ಲಿ ದೂರು ದಾಖಲಿಸಿದೆ. 

ಕೊಡಗು (ಅ. 22): ದೈವಾರಾಧನೆ ಹಿಂದೂ ಸಂಪ್ರದಾಯವಲ್ಲವೆಂದು ಹೇಳಿಕೆ ನೀಡುವ ಮೂಲಕ ನಟ ಚೇತನ್‌ (Actor Chetan) ಲಕ್ಷಾಂತರ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಮತ್ತು ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೊಡಗು ಯುವಸೇನೆ ಮಡಿಕೇರಿಯಲ್ಲಿ (Madikeri) ದೂರು ದಾಖಲಿಸಿದೆ. ಯುವಸೇನೆಯ ಜಿಲ್ಲಾ ಉಪಾಧ್ಯಕ್ಷ ನಡುಮುಟ್ಟು ಪ್ರವೀಣ್‌ ಅವರು ಡಿವೈಎಸ್ಪಿಗೆ ದೂರು ಸಲ್ಲಿಸಿ ಚೇತನ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ನಿರ್ದೇಶಕ ರಿಷಬ್‌ ಶೆಟ್ಟಿ ನಿರ್ದೇಶನದ ದೈವಾರಾಧನೆಯ ಕಥೆಯಾಧಾರಿತ ಕಾಂತಾರ ಚಿತ್ರ ಹಾದಿ ತಪ್ಪುತ್ತಿರುವ ಯುವ ಜನಾಂಗಕ್ಕೆ ಮಾರ್ಗದರ್ಶನ ಮಾಡುವಲ್ಲಿ ಯಶಸ್ವಿಯಾಗಿದೆ ಮತ್ತು ದೈವಶಕ್ತಿಯನ್ನು ಪ್ರತಿಬಿಂಬಿಸಿದೆ. ಚಿತ್ರ ಲಕ್ಷಾಂತರ ಭಕ್ತರ ಮನಸೂರೆಗೊಳ್ಳುತ್ತಿರುವ ಹೊತ್ತಿನಲ್ಲೇ ನಟ ಚೇತನ್‌ ದೈವಾರಾಧನೆಯ ಕುರಿತು ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪ್ರವೀಣ್‌ ಅಸಮಾಧಾನ ವ್ಯಕ್ತಪಡಿಸಿದರು. ಯವಸೇನೆಯ ಮುಖಂಡ ಕುಲೀಪ್‌ ಪೂಣಚ್ಚ ಕೂಡಾ ಚೇತನ್‌ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಹುಬ್ಬಳ್ಳಿ, ಉಡುಪಿಯಲ್ಲೂ ದೂರು: ದೇವೈರಾಧಕರು ಹಿಂದೂಗಳಲ್ಲ, ದೈವಾರಾಧನೆ ಹಿಂದೂ ಧರ್ಮದ ಭಾಗವಲ್ಲ ಎಂದಿರುವ ನಟ ಚೇತನ್‌ ಹೇಳಿಕೆಗೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಚೇತನ್‌ ಹೇಳಿಕೆ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದು ಹುಬ್ಬಳ್ಳಿ ಹಾಗೂ ಉಡುಪಿಯಲ್ಲೂ ನಟ ಚೇತನ್‌ ವಿರುದ್ಧ ಹಿಂದೂ ಜಾಗರಣ ವೇದಿಕೆ ದೂರು ನೀಡಿದ್ದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. 

ಕಾಂತಾರ ಬಗ್ಗೆ ವಿವಾದಾತ್ಮಕ ಹೇಳಿಕೆ: ನಟ ಚೇತನ್ 'ನಾಲಾಯಕ್': ಯತ್ನಾಳ್‌

ನಟ ಚೇತನ್‌ ವಿವಾದಾತ್ಮಕ ಹೇಳಿಕೆಗೆ ಖಂಡನೆ: ಕಾಂತಾರ ಚಿತ್ರದ ಬಗ್ಗೆ ನಟ ಚೇತನ್‌ ಅವರು ವಿವಾದಾತ್ಮಕ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ನಗರಾಧ್ಯಕ್ಷ ಜೋಗಿ ಮಂಜು ಖಂಡಿಸಿದ್ದಾರೆ. ರಿಷಬ್‌ ಶೆಟ್ಟಿನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರವು ದೇಶಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿದ್ದು, ನಟ ರಿಷಬ್‌ ಶೆಟ್ಟಿಭೂತ ಕೋಲ ದೈವರಾಧನೆ ಹಿಂದೂ ಸಂಸ್ಕೃತಿಯ ಒಂದು ಭಾಗ ಎಂದು ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ನಟ ಚೇತನ್‌ ತಮ್ಮದೇ ಶೈಲಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. 

ದೈವಾರಾಧನೆ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ ಎಂದಿರುವ ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗಾರಾಧನೆ, ಭೂತಾರಾಧನೆ, ದೈವಾರಾಧನೆ ತುಳುನಾಡಿನ ಮಣ್ಣಿನ ಸತ್ವ. ಇದರಲ್ಲಿ ಹುಳುಕನ್ನು ಹುಡುಕಿ ಸಮಾಜದಲ್ಲಿ ಓಡಕನ್ನು ಉಂಟುಮಾಡಲು ಪ್ರಯತ್ನ ಪಡುತ್ತಿರುವ ಚೇತನ್‌ ಎಂಬ ವ್ಯಕ್ತಿ ಮೊದಲು ತಮ್ಮನ್ನು ತಾವು ವೈದ್ಯರ ಬಳಿ ಪರೀಕ್ಷಿಸಿಕೊಳ್ಳಲಿ ಎಂದು ಅವರು ಕಿಡಿಕಾರಿದ್ದಾರೆ.