ಬಂಧಿತ ಆರೋಪಿಗಳಿಂದ 160 ಮೊಬೈಲ್‌ಗಳು ಹಾಗೂ 33 ಲ್ಯಾಪ್‌ಟಾಪ್‌ಗಳು ಸೇರಿ ಒಟ್ಟು .49 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ. 

ಬೆಂಗಳೂರು(ಜೂ.28): ರಾಜಧಾನಿಯಲ್ಲಿ ಸಾರ್ವಜನಿಕರಿಂದ ಮೊಬೈಲ್‌ ದೋಚುತ್ತಿದ್ದ ‘ತಮಿಳು’ ಹಾಗೂ ‘ಭದ್ರಾವತಿ’ ಗ್ಯಾಂಗ್‌ಗಳನ್ನು ಪ್ರತ್ಯೇಕವಾಗಿ ಮಡಿವಾಳ ಮತ್ತು ಮೈಕೋ ಲೇಔಟ್‌ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅಭಿಷೇಕ್‌, ಶ್ರೀನಿವಾಸ್‌, ಸಂತೋಷ್‌, ತಮಿಳುನಾಡಿನ ತಮಿಳು ಸೇಲ್ವಂ ಹಾಗೂ ಆತನ ಸಹಚರರಾದ ಲಕ್ಷ್ಮಣ್‌ ಮತ್ತು ಕಾರ್ತಿಕ್‌ ಬಂಧಿತರಾಗಿದ್ದು, ಆರೋಪಿಗಳಿಂದ 160 ಮೊಬೈಲ್‌ಗಳು ಹಾಗೂ 33 ಲ್ಯಾಪ್‌ಟಾಪ್‌ಗಳು ಸೇರಿ ಒಟ್ಟು .49 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಕೆಲ ದಿನಗಳಿಂದ ಆಗ್ನೇಯ ವಿಭಾಗದಲ್ಲಿ ಈ ಎರಡು ಗ್ಯಾಂಗ್‌ಗಳು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸುತ್ತಿದ್ದವು. ಈ ಬಗ್ಗೆ ತನಿಖೆ ನಡೆಸಿ ತಾಂತ್ರಿಕ ಮಾಹಿತಿ ಆಧರಿಸಿ ಕದ್ದ ಕಳವು ಮಾಲು ಮಾರಾಟಕ್ಕೆ ಯತ್ನಿಸಿದ್ದಾಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ತಿಳಿಸಿದ್ದಾರೆ.

ಬೆಂಗಳೂರು: ಗೂಗಲ್‌ನಲ್ಲಿ ಗೋಡೌನ್‌ ಗುರುತಿಸಿ ಕದಿಯುತ್ತಿದ್ದ ಖದೀಮರ ಬಂಧನ

ದೇವಾಲಯಗಳೇ ಭದ್ರಾವತಿ ಗ್ಯಾಂಗ್‌ ಟಾರ್ಗೆಟ್‌

ಭದ್ರಾವತಿ ತಾಲೂಕಿನ ಶ್ರೀನಿವಾಸ್‌ ವೃತ್ತಿಪರ ಕ್ರಿಮಿನಲ್‌ ಆಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಐದಾರು ವರ್ಷಗಳಿಂದ ಮೊಬೈಲ್‌ ಕಳ್ಳತನದಲ್ಲಿ ಭದ್ರಾವತಿ ತಂಡ ನಿರತವಾಗಿತ್ತು. ದೇವಾಲಯಗಳು ಹಾಗೂ ಬಸ್‌ ನಿಲ್ದಾಣ ಸೇರಿದಂತೆ ಜನಸಂದಣಿ ಪ್ರದೇಶಗಳಿಗೆ ತೆರಳಿ ಜನರಿಗೆ ಗೊತ್ತಾಗದಂತೆ ಆರೋಪಿಗಳು ಮೊಬೈಲ್‌ ಎಗರಿಸುತ್ತಿದ್ದರು. ಹೀಗೆ ಕದ್ದ ಮೊಬೈಲ್‌ಗಳನ್ನು ಕೇರಳ ಮೂಲದ ವ್ಯಕ್ತಿಗಳ ಮೂಲಕ ವಿಲೇವಾರಿ ಮಾಡಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲ ತಿಂಗಳ ಹಿಂದೆ ಭದ್ರಾವತಿ ಗ್ಯಾಂಗ್‌ ಅನ್ನು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬಂದು ಮತ್ತೆ ಆರೋಪಿಗಳು ತಮ್ಮ ಚಾಳಿ ಮುಂದುವರೆಸಿದ್ದರು. ದೇವಾಲಯಗಳೇ ಈ ಗ್ಯಾಂಗ್‌ನ ಟಾರ್ಗೆಟ್‌ ಆಗಿತ್ತು. ದುಬಾರಿ ಮೊಬೈಲ್‌ ಮೌಲ್ಯದ ಮೊಬೈಲ್‌ಗಳನ್ನು ಐದಾರು ಸಾವಿರ ರುಗೆ ಕೇರಳದ ವ್ಯಕ್ತಿಗಳಿಗೆ ಆರೋಪಿಗಳು ಮಾರುತ್ತಿದ್ದರು. ಬಳಿಕ ಕೇರಳದಲ್ಲಿ ಕಳವು ಮೊಬೈಲ್‌ಗಳು ಗ್ರಾಹಕರಿಗೆ ಮಾರಾಟವಾಗುತ್ತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರಾವತಿಯಿಂದ ಕಳ್ಳತನ ಸಲುವಾಗಿ ನಗರಕ್ಕೆ ಬಂದು ಕೃತ್ಯ ಎಸಗಿ ಆರೋಪಿಗಳು ಮರಳುತ್ತಿದ್ದರು. ಕೆಲ ದಿನಗಳ ಹಿಂದೆ ಮಾರುತಿ ನಗರದ ಬಳಿಕ ಕಳವು ಮಾಲು ಮಾರಾಟಕ್ಕೆ ಯತ್ನಿಸಿದ್ದಾಗ ಗ್ಯಾಂಗ್‌ ಸಿಕ್ಕಿತು. ಬಂಧಿತರಿಂದ 120 ವಿವಿಧ ಕಂಪನಿಗಳ .25 ಲಕ್ಷ ಮೌಲ್ಯದ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬೆಂಗಳೂರು: ಹಲ್ಲೆ ನಡೆಸಿ ನೇಪಾಳಕ್ಕೆ ಪರಾರಿ ಆಗಿದ್ದ ಉದ್ಯಮಿ ಪುತ್ರನ ಸೆರೆ

ಪಿಜಿಗಳಲ್ಲಿ ‘ತಮಿಳು ಗ್ಯಾಂಗ್‌’ ಹಾವಳಿ

ಪಿಜಿಗಳು ಹಾಗೂ ಹಾಸ್ಟೆಲ್‌ಗಳಿಗೆ ನುಗ್ಗಿ ನಿದ್ರೆ ಮಂಪರಿನಲ್ಲಿ ಬಾಗಿಲು ಹಾಕದೆ ಮಲಗಿದ್ದವರ ಕೋಣೆಗಳಿಗೆ ತೆರಳಿ ತಮಿಳು ಗ್ಯಾಂಗ್‌ ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ಗಳು ದೋಚುತ್ತಿತ್ತು. ಐಟಿ-ಬಿಟಿ ಕಂಪನಿಗಳಲ್ಲಿ ರಾತ್ರಿ ಪಾಳಿಯ ಮುಗಿಸಿ ನಸುಕಿನಲ್ಲಿ ಪಿಜಿಗೆ ಬಂದು ಉದ್ಯೋಗಿಗಳು ಮಲಗುತ್ತಿದ್ದರು. ಹೀಗಾಗಿ ಕೆಲವರು ತಮ್ಮ ಸ್ನೇಹಿತ ಮುಂಜಾನೆ ಬರುತ್ತಾನೆ ಎಂಬ ಕಾರಣಕ್ಕೆ ರೂಮ್‌ ಬಾಗಿಲು ಹಾಕದೆ ಮಲಗುತ್ತಿದ್ದರು. ಕೆಲವೊಬ್ಬರು ಶೂಗಳಲ್ಲಿ ರೂಮ್‌ ಕೀ ಇಟ್ಟು ಹೋಗುತ್ತಿದ್ದರು. ಇದನ್ನು ಬಳಸಿಕೊಂಡು ತಮಿಳು ಗ್ಯಾಂಗ್‌ ಕಳವು ಮಾಡುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಈ ಗ್ಯಾಂಗ್‌ಗೆ ವೃತ್ತಿಪರ ಕ್ರಿಮಿನಲ್‌ ತಮಿಳು ಸೆಲ್ವಂ ಲೀಡರ್‌ ಆಗಿದ್ದು, ಆತನ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಆತ ಜೈಲಿಗೆ ಸಹ ಹೋಗಿ ಬಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.