ಬೆಂಗಳೂರಿನ ದೊಡ್ಡನಾಗಮಂಗಲದ ಸಾಯಿ ಲೇಔಟ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆದಿದೆ. ಸ್ನೇಹಿತನ ಮನೆಯಲ್ಲಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು/ಪರಪ್ಪನ ಅಗ್ರಹಾರ (ಜು.09): ಬೆಂಗಳೂರು ನಗರದ ದೊಡ್ಡನಾಗಮಂಗಲದ ಸಾಯಿ ಲೇಔಟ್ ಪ್ರದೇಶದಲ್ಲಿ ನಡೆದ ಹೃದಯ ವಿದ್ರಾವಕ ಗ್ಯಾಂಗ್ ರೇಪ್ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ನೇಹಿತನ ಮನೆಗೆ ಭೇಟಿ ಹೋಗಿದ್ದ ಮಹಿಳೆಯ ಮೇಲೆ ಇಬ್ಬರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾ*ಚಾರ ಎಸಗಿದಿರುವ ವಿಷಯ ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣವಾಗಿ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ತೀವ್ರಗೊಂಡಿದೆ.
ಸ್ನೇಹಿತನ ಮನೆಯಲ್ಲಿ ನಡೆದ ದುರಂತ:
ಕಳೆದ ಮೂರು ದಿನಗಳ ಹಿಂದೆ ನಡೆದ ಈ ಘಟನೆಯು ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಾಯಿ ಲೇಔಟ್‌ನಲ್ಲಿ ನಡೆದಿದೆ. ಮಹಿಳೆ ತನ್ನ ಸ್ನೇಹಿತನ ಮನೆಯಲ್ಲಿ ಇರುವಾಗಲೇ ಇಬ್ಬರು ಶಂಕಿತರು ಆ ಮನೆಯೊಳಗೆ ಪ್ರವೇಶಿಸಿದ್ದರು. ಅವರು, ನೀವಿಬ್ಬರೂ ಇಲ್ಲಿ ವೇಶ್ಯಾವಾಟಿಕೆ ಮಾಡುತ್ತಿದ್ದೀರಿ ಎಂದು ದೂರು ನೀಡುವುದಾಗಿ ಹೆದರಿಸಿ ಮಹಿಳೆಯ ಮೇಲೆ ಅತ್ಯಾ*ಚಾರ ಎಸಗಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವೇಳೆ ತಾವು ಅತ್ಯಾ*ಚಾರ ಮಾಡುವುದನ್ನು ವಿಡಿಯೋ ಕೂಡ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.
ಅತ್ಯಾ*ಚಾರದ ಬಳಿಕ ಹಣಕ್ಕೆ ಒತ್ತಡ:
ದುಷ್ಕರ್ಮಿಗಳು ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡ ಬಳಿಕ ಹೀನ ಕೃತ್ಯವನ್ನು ಅಷ್ಟಕ್ಕೇ ನಿಲ್ಲಿಸದೆ ಮಹಿಳೆಗೆ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಮಹಿಳೆಯು ತನ್ನ ಸ್ನೇಹಿತೆ ಒಬ್ಬಳ ಬ್ಯಾಂಕ್ ಖಾತೆ ಮೂಲಕ ಆರೋಪಿಗಳ ಬೆಟ್ಟಿಂಗ್ ಆ್ಯಪ್ ಖಾತೆಗೆ ಹಣ ವರ್ಗಾಯಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಆರೋಪಿಗಳು ಇಬ್ಬರ ಮೊಬೈಲ್‌ಗಳು ಕಸಿದುಕೊಂಡು ಮನೆದಲ್ಲಿದ್ದ ಪ್ರಿಡ್ಜ್ ಹಾಗೂ ವಾಶಿಂಗ್ ಮೆಷಿನ್ ಸೇರಿ ಇತ್ಯಾದಿ ಬೆಲೆಬಾಳುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಟೋದಲ್ಲಿ ತುಂಬಿಕೊಂಡು ಹೊತ್ತೊಯ್ದಿದ್ದಾರೆ.
ತಡವಾಗಿ ಪ್ರಕರಣ ದಾಖಲು:
ಮಹಿಳೆಯ ದೂರಿನ ಅನ್ವಯ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧಾರ ಮಾಡಿಕೊಂಡು ಪೊಲೀಸರು ಆರೋಪಿಗಳನ್ನು ಗುರುತಿಸಿ 3 ಜನ ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ. ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ, ಎಲ್ಲಾ ಆರೋಪಿಗಳನ್ನು ಕಾನೂನುಬದ್ಧವಾಗಿ ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರು ಇಂತಹ ಅಪರಾಧಗಳ ಬಗ್ಗೆ ತಕ್ಷಣವೇ ದೂರಿನೊಂದಿಗೆ ಪೊಲೀಸರ ಸಹಾಯ ಪಡೆಯಬೇಕೆಂಬ ಜಾಗೃತಿ ಮೂಡಿಸಿದ್ದಾರೆ.
ಪರಪ್ಪನ ಅಗ್ರಹಾರ ಗ್ಯಾಂಗ್ ರೇಪ್ ಅಪ್ಡೇಟ್ಸ್:
ಸ್ನೇಹಿತನ ಮನೆಗೆ ಬಂದಿದ್ದಾಗ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಈ ಕಿರಾತಕರು ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದರು. ಕಳ್ಳತನಕ್ಕೆ ಬಂದಾಗ ಸ್ನೇಹಿತನೊಟ್ಟಿಗೆ ಇದ್ದ ಮಹಿಳೆಗೆ ಬ್ಲ್ಯಾಕ್ ಮೇಲ್ ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ. ನಂತರ ಮಹಿಳೆಯ ಬಳಿಯಿದ್ದ ಎಲ್ಲ ಹಣವನ್ನು ಕಿತ್ತುಕೊಂಡಿದ್ದಲ್ಲದೇ ಸಂತ್ರಸ್ತೆಯ ಸ್ನೇಹಿತೆ ಕಡೆಯಿಂದಲೂ ಹಣ ಹಾಕಿಸಿಕೊಂಡಿದ್ದಾರೆ. ನಂತರ ಅವರ ಮನೆಯಲ್ಲಿದ್ದ ವಸ್ತುಗಳನ್ನ ದೋಚಿದ್ದರು. ಇದೀಗ ಪೊಲೀಸರ ಅತಿಥಿಗಳಾಗಿ ವಿಚಾರಣೆಗೆ ಒಳಪಟ್ಟಿದ್ದಾರೆ. ಈ ಕಿರಾತಕರು ಇನ್ನೂ ಎಲ್ಲಿಯಾದರೂ ಇಂತಹ ಕೃತ್ಯಗಳನ್ನು ಎಸಗಿದ್ದಾರೆಯೇ ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
