ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಶಂಕೆ: ಯುವಕರಿಬ್ಬರ ಶಂಕಾಸ್ಪದ ಸಾವು!
ಯುವಕರಿಬ್ಬರ ಶಂಕಾಸ್ಪದ ಸಾವು: ಡ್ರಗ್ ಸೇವನೆ ಶಂಕೆ| ಬರ್ತ್‌ಡೇ ಪಾರ್ಟಿಯಲ್ಲಿ ಅತಿಯಾಗಿ ಡ್ರಗ್ ಸೇವನೆ ಬಗ್ಗೆ ಅನುಮಾನ | ಓರ್ವ ಗಂಭೀರ, ಐವರಿಗೆ ಚಿಕಿತ್ಸೆ
ಬೆಂಗಳೂರು[ನ.20]: ವೈಯಾಲಿಕಾವಲ್‌ನ ಕೋದಂಡರಾಮಪುರದಲ್ಲಿ ಯುಕರಿಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಬರ್ತ್ ಡೇ ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವನೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಕೋದಂಡರಾಮಪುರದ ನಿವಾಸಿಗಳಾದ ಅಭಿಲಾಷ್ (23) ಹಾಗೂ ಗೋಪಿ (32) ಮೃತ ದುರ್ದೈವಿಗಳು. ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಉಳಿದ ಐದು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಯುವತಿಯರು ಸೇರಿ 11 ಮಂದಿಯಿಂದ ಗಾಂಜಾ ಪಾರ್ಟಿ? ಇಬ್ಬರು ಬಲಿ
ಆದರೆ ಮಾದಕ ದ್ರವ್ಯ ಸೇವನೆ ಬಗ್ಗೆ ವಿಚಾರವನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ತಳ್ಳಿ ಹಾಕಿದ್ದಾರೆ. ವಿಷ ಪೂರಿತ ಆಹಾರ ಸೇವನೆಯಿಂದ ಮೃತಪಟ್ಟಿರುವ ಶಂಕೆ ಇದೆ. ಮರಣೋತ್ತರ ಪರೀಕ್ಷೆಯಲ್ಲೂ ಇದೇ ಅಂಶ ಕಂಡು ಬಂದಿದೆ. ಎರಡು ದಿನಗಳ ಹಿಂದೆ ಪ್ರತ್ಯೇಕವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅವರು, ಮಂಗಳವಾರ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
"
ಆಹಾರದ ಬಗ್ಗೆ ತನಿಖೆ:
ಅಭಿಲಾಷ್, ಗೋಪಿ ಸೇರಿದಂತೆ ಎಂಟು ಮಂದಿ ಯುವಕರು ಎರಡು ದಿನಗಳ ಹಿಂದೆ ಕೋದಂಡರಾಮಪುರದಲ್ಲಿ ಬರ್ತ್ ಡೇ ಪಾರ್ಟಿ ಮಾಡಿದ್ದಾರೆ. ಪಾರ್ಟಿಯಲ್ಲಿ ಯುವಕರು ಮದ್ಯ ಹಾಗೂ ಮಾದಕ ದ್ರವ್ಯ ಸೇವನೆ ಮಾಡಿದ್ದು, ಅತಿಯಾಗಿ ಸೇವನೆ ಮಾಡಿದ್ದರು ಎನ್ನಲಾಗಿದೆ. ಅಸ್ವಸ್ಥಗೊಂಡ ಅಭಿಲಾಷ್ ಅವರು ಸುಗುಣ ಆಸ್ಪತ್ರೆಯಲ್ಲಿ ಹಾಗೂ ಗೋಪಿ ವೆಗ್ಗಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಇತ್ತೀಚೆಗೆ ವೈಯಾಲಿಕಾವಲ್ ಸಮೀಪ ನಡೆದ ಕಡಲೇ ಕಾಯಿ ಪರಿಷೆ ಹಾಗೂ ಕಾರ್ತಿಕ ಮಾಸದ ಮಹೋತ್ಸವದಲ್ಲಿ ಆಹಾರ ಸೇವನೆ ಅವರ ಆರೋಗ್ಯದ ಪರಿಣಾಮ ಬೀರಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಇಬ್ಬರ ಸಾವಿಗೂ ವಿಷ ಪೂರಿತ ಆಹಾರ ಸೇವನೆ ಕಾರಣ ಎಂದೂ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಈ ಸಂಬಂಧ ಮಾಹಿತಿ ಕಳುಹಿಸಲಾಗಿದ್ದು, ತಜ್ಞರ ವರದಿಗೆ ಕಾಯುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ
ಗೋಪಿ ಹಾಗೂ ಅಭಿಲಾಷ್ ಸಣ್ಣಪುಟ್ಟ ಕೆಲಸ ಮಾಡಿ ಕೊಂಡಿದ್ದು, ತಮ್ಮ ಕುಟುಂಬದ ಜತೆ ಕೋದಂಡರಾಮ ಪುರದಲ್ಲಿ ನೆಲೆಸಿದ್ದರು ಎಂದು ಮಾಹಿತಿ ನೀಡಿದರು. ಈ ಸಂಬಂಧ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.