ಬೆಂಗಳೂರು[ಡಿ.12]: ರಸ್ತೆಯಲ್ಲಿ ಮಹಿಳೆಯೊಬ್ಬರಿಂದ ಸರ ದೋಚಿ ಪರಾರಿಯಾಗುತ್ತಿದ್ದ ಕಿಡಿಗೇಡಿಗೆ ಆಟೋ ಗುದ್ದಿಸಿ ಚಾಲಕ ಸೆರೆ ಹಿಡಿದಿರುವ ಸಿನಿಮೀಯ ಶೈಲಿಯ ಘಟನೆ ಮಾರತ್ತಹಳ್ಳಿ ಸಮೀಪ ನಡೆದಿದೆ.

ಕೆ.ಜಿ.ಹಳ್ಳಿ ನಿವಾಸಿ ವಿಘ್ನೇಶ್‌ ಬಂಧಿತನಾಗಿದ್ದು, ಮಾರತ್ತಹಳ್ಳಿ ಸಮೀಪ ಭಾನುವಾರ ಬೆಳಗ್ಗೆ ಮಹಿಳೆಯೊಬ್ಬರಿಂದ ಸರ ಎಗರಿಸಿ ಆತ ತಪ್ಪಿಸಿಕೊಳ್ಳುವಾಗ ಈ ಘಟನೆ ನಡೆದಿದೆ. ಸರಗಳ್ಳನನ್ನು ಸೆರೆ ಹಿಡಿದ ಆಟೋ ಚಾಲಕ ಹನುಮಂತು ಅವರನ್ನು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಎಂ.ಎನ್‌.ಅನುಚೇತ್‌ ಹಾಗೂ ಮಾರತ್ತಹಳ್ಳಿ ಪೊಲೀಸರು ಅಭಿನಂದಿಸಿದ್ದಾರೆ.

ಬೈಕ್‌ಗೆ ಆಟೋ ಗುದ್ದಿಸಿ ಬಂಧನ

ಮಾರತ್ತಹಳ್ಳಿ ಮುಖ್ಯರಸ್ತೆಯಲ್ಲಿ ಬೆಳಗ್ಗೆ 8.30ರಲ್ಲಿ ಹನುಮಂತ ಅವರು, ಎಂದಿನಂತೆ ಬಾಡಿಗೆಗೆ ಆಟೋ ಓಡಿಸಿಕೊಂಡು ಹೋಗುತ್ತಿದ್ದರು. ಅದೇ ಹೊತ್ತಿಗೆ ಪಾದಚಾರಿ ಮಾರ್ಗದಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರಿಂದ ಸರ ಎಗರಿಸಿ ವಿಘ್ನೇಶ್‌ ಶರವೇಗದಲ್ಲಿ ಸ್ಕೂಟರ್‌ ಚಲಾಯಿಸಿ ಪರಾರಿಯಾಗುತ್ತಿದ್ದ. ಆಗ ರಕ್ಷಣೆಗೆ ಕೂಗಿಕೊಂಡಾಗ ಸಂತ್ರಸ್ತೆಗೆ ನೆರವಿಗೆ ಧಾವಿಸಿದ ಸಾರ್ವಜನಿಕರು, ಸರಗಳ್ಳನ ಬೆನ್ನಹತ್ತಿದ್ದಾರೆ. ಅದೇ ಸಮಯದಲ್ಲಿ ಹನುಮಂತು ಅವರು, ಆಟೋ ಮಿರರ್‌ನಲ್ಲಿ ಆರೋಪಿ ವೇಗದ ಬರುತ್ತಿದ್ದ ದೃಶ್ಯ ಗಮನಿಸಿದ್ದಾರೆ. ತಕ್ಷಣವೇ ಆತನ ಸ್ಕೂಟರ್‌ಗೆ ಆಟೋ ಗುದ್ದಿಸಿದ್ದಾರೆ. ಇದರಿಂದ ಕೆಳಗೆ ಬಿದ್ದ ಸರಗಳ್ಳನನ್ನು ಸಾರ್ವಜನಿಕರ ಸಹಕಾರದಲ್ಲಿ ಅವರು ಹಿಡಿದಿದ್ದಾರೆ. ತಕ್ಷಣವೇ ನಾಗರಿಕರು, ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಘಟನೆ ಕುರಿತು ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆ.ಜಿ.ಹಳ್ಳಿ ವಿಘ್ನೇಶ್‌, ಹೂ ಅಲಂಕಾರ ಕೆಲಸ ಮಾಡುತ್ತಿದ್ದ. ಹಣದಾಸೆಗೆ ಸರಗಳ್ಳತನ ಕೃತ್ಯಕ್ಕಿಳಿದ್ದು, ಇದೇ ಮೊದಲ ಬಾರಿಗೆ ಆತ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.