ಬೆಂಗಳೂರು[ಜ.01]: ಎಟಿಎಂ ಘಟಕವೊಂದರಲ್ಲಿ ಹಣ ತುಂಬಿದ್ದ ಯಂತ್ರ ಒಡೆದು ಕಿಡಿಗೇಡಿಗಳು .23 ಲಕ್ಷ ದೋಚಿರುವ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ನಾಗನಾಥಪುರ ಸಮೀಪ ನಡೆದಿದೆ.

ನಾಗನಾಥಪುರದ ಕೆನರಾ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮೂರು ದಿನಗಳ ಹಿಂದೆ ಎಟಿಎಂ ಘಟಕಕ್ಕೆ ರಾತ್ರಿ ವೇಳೆ ಪ್ರವೇಶಿಸಿರುವ ಮುಸುಕುಧಾರಿ ದುಷ್ಕರ್ಮಿಗಳು, ಎಟಿಎಂ ಕೇಂದ್ರಕ್ಕೆ ಸಂಪರ್ಕಿಸುವ ವಿದ್ಯುತ್‌ ಸ್ಥಗಿತಗೊಳಿಸಿದ್ದಾರೆ. ಬಳಿಕ ಸಿಸಿ ಕ್ಯಾಮರಾ ಹಾಗೂ ಅಲಾರಂ ಕಾರ್ಯ ಬಂದ್‌ಗೊಳಿಸಿದ ಅವರು, ಹಣ ತುಂಬಿದ್ದ ಯಂತ್ರ ಒಡೆದು .23 ಲಕ್ಷ ದೋಚಿದ್ದಾರೆ. ಮರು ದಿನ ಬೆಳಗ್ಗೆ ಎಟಿಎಂಗೆ ಗ್ರಾಹಕರು ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಎಟಿಎಂ ಘಟಕಕ್ಕೆ ಕಾವಲುಗಾರರ ನೇಮಕವಾಗಿರಲಿಲ್ಲ. ಆರೋಪಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.