ಬೆಂಗಳೂರು(ಜ. 06) ಬೆಂಗಳೂರು ನಾಗರಿಕರಿಗೆ ಬೆಳ್ಳಂಬೆಳಗ್ಗೆ ಅದೊಂದು ಸುದ್ದಿ ಅಪ್ಪಳಿಸಿತ್ತು. ಬ್ರೇಕ್ ಫೇಲ್ ಆದ ಬಿಎಂಟಿಸಿ ಬಸ್ ಇಬ್ಬರ ಜೀವ ಬಲಿ ಪಡೆದರೆ 10 ಜನರನ್ನು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿತ್ತು.

ಈ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳ ನೋವು ಮಾತ್ರ ಯಾರಿಗೂ ಬೇಡ. ಬಾಳಿ ಬದುಕಬೇಕಾಗಿದ್ದ ಅದೆಷ್ಟೋ ಜೀವಗಳು ತಮ್ಮದಲ್ಲದ ತಪ್ಪಿಗೆ ಜೀವ ಕಳೆದುಕೊಂಡಿವೆ. ರಸ್ತೆ ಅಪಘಾತ ಪ್ರತಿನಿತ್ಯದ ವಾರ್ತೆ. ನೋವಿನ ಸಂದೇಶ ಕುಟುಂಬದವರನ್ನು, ಸ್ನೇಹಿತರನ್ನು ಸರಿ ಸ್ಥಿತಿಗೆ ತರಲು ವರ್ಷಗಳೇ ಹಿಡಿಯುವಂತೆ ಮಾಡುತ್ತದೆ.

ಬೆಂಗಳುರು ಟ್ರಾಫಿಕ್ ಪೊಲೀಸರು ಬಿಡುಗಡೆ ಮಾಡಿರುವ ಅಂಕಿ ಅಂಶ ನಿಜಕ್ಕೂ ಒಂದು ಕ್ಷಣ ನಮ್ಮ ನಗರ ಯಾವ ಸ್ಥಿತಿಯಲ್ಲಿ ಇದೆ ಎಂಬುದನ್ನು ಚರ್ಚಿಸುವಂತೆ ಮಾಡುತ್ತದೆ.  2019ರಲ್ಲಿ 698 ಜನ ಬೆಂಗಳೂರಿನ ವಿವಿಧೆಡೆ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅಂದರೆ ತಿಂಗಳಿಗೆ ಸರಿಸುಮಾರು 58 ಜನರು ದಿನವೊಂದಕ್ಕೆ ಇಬ್ಬರು ವ್ಯಕ್ತಿಗಳು!

ಅಪಘಾತ: ಕರ್ನಾಟಕಕ್ಕೆ ದೇಶದಲ್ಲಿಯೇ ಎರಡನೇ ಸ್ಥಾನ.. ಕಾರಣ

ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚಾರ ಮಾಡುವ ಸಮಯವೂ ಟ್ರಾಫಿಕ್ ಎಂಬ ಭೂತನ ಅಡಿ ಸಿಕ್ಕಿ ಜಾಸ್ತಿಯಾಗುತ್ತಲೇ ಇದೆ. ಮೆಟ್ರೋ ಬಳಸಿದರೆ ಕಡಿಮೆ ಸಮಯದಲ್ಲಿ ತಲುಪಬಹುದು ಬಿಡಿ!

18 ರಿಂದ 35 ವರ್ಷದೊಳಗಿನವರೇ ಸಾವು ಕಂಡವರಲ್ಲಿ ಸಿಂಹಪಾಲು ಪಡೆದುಕೊಳ್ಳುತ್ತಾರೆ. ಮುಂಜಾನೆ ಮತ್ತು ಲೇಟ್ ನೈಟ್ ಚಾಲನೆ, ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಇವೇ ಮೊದಲಾದವು ಪ್ರಾಣ ಕಳೆದುಕೊಳ್ಳಲು ಮುಖ್ಯ ಕಾರಣ. ಶಾರ್ಟ್ ಕಟ್ ಬಳಕೆ, ವೇಗದ ವಾಹನ ಚಾಲನೆ ಸಹ ಇದಕ್ಕೆ ಸೇರಿಕೊಳ್ಳುತ್ತದೆ.

2018 ರಲ್ಲಿ 684 ಸಾವುಗಳು ಇದ್ದ ಜಾಗದಲ್ಲಿ 2019ಕ್ಕೆ 698 ಎಂಬ ಅಂಕಿ ದಾಖಲಾಗಿದೆ. ಟ್ರಾಫಿಕ್ ನಿಯಮಗಳ ಸರಿಯಾದ ಪಾಲನೆ ನಮ್ಮೆಲ್ಲರ ಹೊಣೆ. ದಯವಿಟ್ಟು ಸುರಕ್ಷಿತ ಚಾಲನೆ ಮಾಡಿ...

ಆಂಗ್ಲ ಭಾಷೆಯಲ್ಲಿಯೂ ಓದಿ