ಬೆಂಗಳೂರು, (ಆ.13)  ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಸಂಬಂಧಪಟ್ಟಂತೆ ಮ್ಯಾಜಿಸ್ಟ್ರೇಟ್ ತನಿಖೆಗೆ ರಾಜ್ಯ ಸರ್ಕಾರ  ಅಧಿಕೃತ ಆದೇಶ ಹೊರಡಿಸಿದೆ.

ಮಂಗಳವಾರ ರಾತ್ರಿ  ನಡೆದ ಗಲಭೆ ತನಿಖೆಗೆ ಸಂಬಂಧಿಸಿದಂತೆ ಬುಧವಾರ ಸಿಎಂ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ವೇಳೆ ಮ್ಯಾಜಿಸ್ಟ್ರೇಟ್ ತನಿಖೆಗೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿತ್ತು. 

ಅದರಂತೆಯೇ ಇಂದು (ಗುರುವಾರ) ರಾಜ್ಯ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ. ಪುಲಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ  ಅಖಂಡ ಶ್ರೀನಿವಾಸ್ ಮೂರ್ತಿ ತಂಗಿ ಮಗ (ಅಳಿಯ) ನವೀನ್ ಎನ್ನುವರು ಫೇಸ್‌ಬುಕ್‌ನಲ್ಲಿ ಪೈಗಂಬರ್ ಬಗ್ಗೆ ಅವಹೇಳನ ಪೋಸ್ಟ್ ಹಾಕಿದ್ದಕ್ಕೆ ಈ ಗಲಭೆ ನಡೆಯಲು ಕಾರಣ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ಮಂಗಳವಾರ ತಡರಾತ್ರಿ ನಡೆದ ಗಲಭೆ ನಿಯಂತ್ರಣಕ್ಕಾಗಿ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಯ ವ್ಯಾಪ್ತಿಯಲ್ಲಿ ಕರ್ಪ್ಯೂ ಜಾರಿಗೊಳಿಸಲಾಗಿತ್ತು.

ಕಿಡಿಕೇಡಿಗಳು ಮಂಗಳವಾರ ರಾತ್ರಿ ಏಕಾಏನಿ ಬೀದಿಗಿಳಿದು ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ಕಲ್ಲು ತೂರಿ ಬೆಂಕಿ ಹಚ್ಚಿದ್ದರು. ಅಲ್ಲದೇ ರಸ್ತೆಯಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿ  ಪುಂಡಾಟ ಮೆರೆದಿದ್ದರು. 

ಅಲ್ಲದೇ ಮಾಧ್ಯಮದವರು, ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಫೈರಿಂಗ್ ಮಾಡಬೇಕಾಯ್ತು. ಈ ಗೋಲಿಬಾರ್‌ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇನ್ನು ಹಲವರು ಗಾಯಗೊಂಡಿದ್ದು, ಪೊಲೀಸರ ಭಯದಿಂದ ಗಾಯಾಳುಗಳು ಮನೆಯಲ್ಲೇ ಅವಿತುಕೊಂಡಿದ್ದಾರೆ ಎಂದು ತಿಳಿದುಬಂದಿದೆ.