೨೧ ವರ್ಷದ ಕಾರ್ತಿಕ್ ಎಂಬಾತ ಬೆಂಗಳೂರಿನ ರಾಜೀವ್ ಗಾಂಧಿ ಕಾಲೋನಿಯಲ್ಲಿ ಮಹಿಳೆಯರಿಗೆ ಖಾಸಗಿ ಅಂಗ ತೋರಿಸಿ ಕಿರುಕುಳ ನೀಡುತ್ತಿದ್ದ. ವಿರೋಧಿಸಿದವರ ಮೇಲೆ ಹಲ್ಲೆ ನಡೆಸುತ್ತಿದ್ದ ಈತನನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ. ಈತನ ಮೇಲೆ ಹಲವು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ರೌಡಿಶೀಟ್ ತೆರೆಯಲು ಮುಂದಾಗಿದ್ದಾರೆ.

ವರದಿ: ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಏ.18): ಆತ ಇನ್ನೂ 21 ವರ್ಷ ಪ್ರಾಯದ ಯುವಕ.. ಆದರೆ, ಅವನು ಸಮಾಜದಲ್ಲಿ ವಿಕೃತ ಕಾಮಿಯಾಗಿದ್ದ. ಕಂಡ ಕಂಡ ಮಹಿಳೆಯರಿಗೆ ಖಾಸಗಿ ಅಂಗ ತೋರಿಸಿ ಲೈಂಗಿಕ ಕ್ರಿಯೆಗೆ ಕರಿತಿದ್ದ. ಬೆಂಗಳೂರಿನ ಕೆಲವು ಏರಿಯಾದಲ್ಲಿ ಏರಿಯಾದಲ್ಲಿ ಈತನ ಆಟಾಟೋಪ ಮಿತಿ ಮೀರಿತ್ತು. ಇದರಿಂದ ಬೇಸೆತ್ತು ಬುದ್ಧಿ ಹೇಳಲು ಬಂದವರ ಮೇಲೆಯೇ ಅಟ್ಟಹಾಸ ಮೆರೆಯುತ್ತಿದ್ದನು. ಜನರು ಪ್ರಶ್ನೆ ಮಾಡಿ ಹಿಡಿದುಕೊಳ್ಳಲು ಬಂದರೆ ಅವರ ಮೇಲೆಯೇ ಕಲ್ಲು, ದೊಣ್ಣೆ ಹಾಲೋಬ್ಲಾಕ್ ನಿಂದ ಹಲ್ಲೆ ಮಾಡಿದ್ದನು. ಇಂತಹ ವಿಕೃತ ಕಾಮಿಯನ್ನು ಪೊಲೀಸರು ಹಿಡಿದು ತಕ್ಕ ಶಾಸ್ತಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿದ್ದ ವಿಕೃತ ಕಾಮಿಯ ಹೆಸರು ಕಾರ್ತಿಕ್. ಸಿಲಿಕಾನ್ ಸಿಟಿಯ ಅತ್ಯಂತ ಜನಸಂದಣಿ ಹಾಗೂ ಬಹುತೇಕ ಯುವಜನರೇ ಹೆಚ್ಚಾಗಿ ಓಡಾಡುವಂತಹ ಕ್ವೀನ್ಸ್ ರಸ್ತೆಯಲ್ಲಿರುವ ರಾಜೀವ್ ಗಾಂಧಿ ಕಾಲೋನಿ ನಿವಾಸಿ. ಒಳ್ಳೆ ರೀತಿ ಬದುಕೊ ದಾರಿ ಕಂಡುಕೊಳ್ಳೊ ವಯಸ್ಸಲ್ಲಿ ವಿಕೃತ ಕಾಮಿಯಾಗಿ ಸಮಾಜದಲ್ಲಿ ಮಹಿಳೆಯರು ತಲೆ ಎತ್ತಿಕೊಂಡು ನಡೆಯಲೂ ಆಗದಂತೆ ಕಾಟ ಕೊಡುತ್ತಿದ್ದಾರೆ. ಈತನ ಕಾಟಕ್ಕೆ ಏರಿಯಾ ಮಹಿಳೆಯರೇ ನಲುಗಿ ಹೋಗಿದ್ದು, ಇದೀಗ ಪೊಲೀಸರು ಅವನನ್ನು ಬಂಧಿಸಿದ ನಂತರ ನಿಟ್ಟುಸಿರು ಬಿಟ್ಟಿದ್ದಾರೆ‌‌.

ಹೌದು..ಇತ್ತೀಚೆಗೆ ಅಂದ್ರೆ ಏಪ್ರಿಲ್ 13 ರಂದು ರಾತ್ರಿ 10.30 ರ ಸಮಯ. ಎದುರು ಮನೆಯ ಮಹಿಳೆ ಊಟ ಮುಗಿಸಿ ಮಲಗಲು ಎರಡನೇ ಮಹಡಿಗೆ ಹೋಗುತ್ತಿದ್ದರು. ಈ ವೇಳೆ ತನ್ನ ಮನೆಯಿಂದ ಆರೋಪಿ ಕಾರ್ತಿಕ್ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದ್ದಾನೆ. ಈ ಬಗ್ಗೆ ಮಹಿಳೆ ಹಾಗೂ ಆಕೆಯ ಪತಿ ಸೇರಿದಂತೆ ಸ್ಥಳೀಯರಾದ ರವೀಂದ್ರ ಒಳಗೊಂಡು 7ಕ್ಕೂ ಹೆಚ್ಚು ಜನರು ಪ್ರಶ್ನೆ ಮಾಡಿ ಆತನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆದರೆ, ಇಷ್ಟೆಲ್ಲಾ ಜನರು ವಿರೋಧ ಮಾಡಿದರೂ ಅವರೆಲ್ಲರ ಮೇಲೆ ಮನೆಯಲ್ಲಿದ್ದ ಹಾಲೋಬ್ಲಾಕ್ ಕಲ್ಲುಗಳು, ಹೂವಿನ ಕುಂಡಗಳನ್ನು ಎತ್ತಿ ಬೀಸಾಡಿ ಗಾಯಗೊಳಿಸಿದ್ದಾನೆ. ಜೊತೆಗೆ, ಮಚ್ಚು ಹಿಡಿದು ಬೀಸುತ್ತಾ, ಕಿಟಕಿ ಗಾಜು ಎತ್ತಿ ಹಾಕಿ ಹಲ್ಲೆ ಮಾಡಿದ್ದಾನೆ. ಇಷ್ಟಕ್ಕೆ ನಿಲ್ಲದ ಇವನ ಪುಂಡಾಟ ಅಲ್ಲ ಜಗಳ ಬಿಡಿಸಲು ಬಂದ ತನ್ನ ತಾಯಿಯನ್ನೂ ಹೊಡೆದು ಗಾಯಗೊಳಿಸಿದ್ದಾನೆ. ಇದೀಗ ಸ್ಥಳೀಯ ವ್ಯಕ್ತಿ ರವೀಂದ್ರ ಹಾಗೂ ಆರೋಪಿ ಕಾರ್ತಿಕ್ ತಾಯಿ‌ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: CET: ಆಪ್ ಮೂಲಕ ನಕಲಿ ಅಭ್ಯರ್ಥಿ ಪತ್ತೆ; ಅಕ್ರಮ ಬಯಲಾಗ್ತಿದ್ದಂತೆ ಫಾತೀಮಾ ಪರಾರಿ!

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಶಿವಾಜಿನಗರ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಾರ್ತಿಕ್ ಗೆ ತನ್ನ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗವನ್ನು ಮಹಿಳೆಯರಿಗೆ ತೋರಿಸಿದ್ದನ್ನು ಒಪ್ಪಿಕೊಂಡಿದ್ದಾನೆ. ಜೊತೆಗೆ, ಹೀಗೆ ಮಹಿಳೆಯರಿಗೆ ತನ್ನ ಖಾಸಗಿ ಅಂಗವನ್ನು ತೋರಿಸುವುದರಿಂದ ಒಂಥರಾ ವಿಕೃತ ಆನಂದ ಸಿಗುತ್ತದೆ ಎಂದು ಹೇಳಿದ್ದಾನೆ. ಇದೇ ರೀತಿ ಪದೇ ಪದೇ ಪುಂಡಾಟ ಮೆರೆತಿದ್ದವನ ಮೇಲೆ ವಿಧಾನಸೌಧ,ಶಿವಾಜಿನಗರ ಪೊಲೀಸ್ ಠಾಣೆ ಸೇರಿದಂತೆ ಹಲವೆಡೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗಿತ್ತು. ಈತನ ಕಾಟ ಮತ್ತೆ ಹೆಚ್ಚಾಗುತ್ತಿದ್ದಂತೆ ಶಿವಾಜಿನಗರ ಠಾಣೆ ಪೊಲೀಸರು ರೌಡಿ ಶೀಟ್ ಓಪನ್ ಮಾಡಿ 5 ಲಕ್ಷ ರೂ. ಬಾಂಡ್ ಬರೆಸಿಕೊಳ್ಳಲು ಮುಂದಾಗಿದ್ದಾರೆ.

ಸದ್ಯ ಈತನ ಬಂಧನದಿಂದ ಏರಿಯಾ ಮಹಿಳೆಯರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಇವನನ್ನು ಪೊಲೀಸರು ಬಂಧನದಿಂದ ಬಿಡುಗಡೆ ಮಾಡಿದ ಬಳಿಕ ಮತ್ತೆ ಬಂದು ಅದೆಷ್ಟು ಕಾಟ ಕೊಡುತ್ತಾನೋ ಎಂಬ ಆತಂಕದಿಂದ ದಿನ ಕಳೆಯುತ್ತಿದ್ದಾರೆ. ಇದೀಗ ಬಂಧನ ಮಾಡಿರುವ ಆರೋಪಿಗೆ ಪೊಲೀಸರು ಸರಿಯಾಗಿ ಬುದ್ಧಿ ಕಲಿಸಿ ಹೊರಗೆ ಕಳುಹಿಸಬೇಕು. ಮಹಿಳೆಯರನ್ನು ನೋಡಿದರೆ ಭಯ ಬೀಳುವಂತೆ ಮಾಡಿದರೆ ಮಾತ್ರ ವಿಕೃತ ಕಾಮಿ ಕಾರ್ತಿಕ್ ಬಗ್ಗೆ ಇರುವ ಮಹಿಳೆಯರಲ್ಲಿನ ಭಯವನ್ನು ಪೊಲೀಸರೇ ಹೋಗಲಾಡಿಸಬೇಕಿದೆ.

ಇದನ್ನೂ ಓದಿ: Reels ಹುಚ್ಚಿಗೆ ರಸ್ತೆಯಲ್ಲೇ ಕುರ್ಚಿ ಹಾಕಿ ಟೀ ಕುಡಿದ ಚಾಲಕ ಅರೆಸ್ಟ್!