ವಿಜಯಪುರ, (ಮಾ.14): ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿದ್ದ ಯುವತಿಗೆ ಕಬ್ಬನ್​ ಪಾರ್ಕ್​ ಪೊಲೀಸರು ನೋಟಿಸ್​ ಜಾರಿ ಮಾಡಿದ್ದಾರೆ.

 ಶೀಘ್ರದಲ್ಲೇ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಯುವತಿಯ ಮನೆ, ಪಿಜಿ ಹಾಗೂ ಸ್ನೇಹಿತರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಬಸವನ ಬಾಗೇವಾಡಿಯ ಆಕೆಯ ಮನೆಗೆ, ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಪೊಲೀಸರು ನೋಟಿಸ್ ತಲುಪಿಸಿದ್ದಾರೆ.

ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ವಿಜಯಪುರದ ನಿಡಗುಂದಿಗೆ ತೆರಳಿ ಯುವತಿ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ. ಬಳಿಕ ಅಲ್ಲಿಂದ ಗುಡೂರು ಗ್ರಾಮಕ್ಕೆ ಹೋಗಿ ಯುವತಿಯ ಅಜ್ಜಿಯನ್ನು ವಿಚಾರಣೆ ನಡೆಸಿದರು.

ಸಿಡಿ ಸ್ಫೋಟ; ಯಾರನ್ನೂ ಬಂಧಿಸಿಲ್ಲ, SIT ಗುರುತಿಸಿದ ನಾಲ್ವರು ಕಿಂಗ್‌ ಪಿನ್‌!
 
ಸೆಕ್ಸ್ ಸಿಡಿ ಪ್ರಕರಣ ಸಂಬಂಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ ಕೆಲವೇ ಕ್ಷಣಗಳಲ್ಲಿ, ಆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಳು ಎನ್ನಲಾದ ಯುವತಿ ಪ್ರತ್ಯಕ್ಷಳಾಗಿದ್ದು, ಗೃಹಸಚಿವರು ರಕ್ಷಣೆ ಒದಗಿಸಬೇಕು ಎಂದು ವಿಡಿಯೋ ಮೂಲಕ ಕೋರಿದ್ದಾಳೆ.

ಅಜ್ಞಾತ ಸ್ಥಳದಿಂದ 34 ಸೆಕೆಂಡ್​ನ ವಿಡಿಯೋ ಮಾಡಿ ಹರಿ ಬಿಟ್ಟಿರುವ ಯುವತಿ, 'ರಮೇಶ್ ಜಾರಕಿಹೊಳಿ ಅವರು ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರಿಂದ ನನ್ನ ಮಾನ ಮರ್ಯಾದೆ ಊರು ತುಂಬಾ ಹರಾಜಾಗಿದೆ. ನನ್ನ ಮನೆ ಹತ್ತಿರ ಬಂದು ಯಾರೋರೊ ಏನೇನೋ ಹೇಳಿದ್ದಾರೆ. ನನ್ನ ತಂದೆ ತಾಯಿ ಹಾಗೂ ನಾನು ಮೂರ್ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇವೆ. ಆ ಅಶ್ಲೀಲ ವಿಡಿಯೋ ಹೇಗೆ ಮಾಡಿದಾರೋ ನನಗೆ ಗೊತ್ತಿಲ್ಲ. ದಯವಿಟ್ಟು ನನಗೆ ರಕ್ಷಣೆ ನೀಡಬೇಕು' ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಳು.