ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಐಷಾರಾಮಿ ಕಾರಿನ ಎರಡೂ ಬಾಗಿಲುಗಳನ್ನು ತೆರೆದು ಅಪಾಯಕಾರಿ ಸ್ಟಂಟ್ ಮಾಡಿದ ಚಾಲಕನ ವಿಡಿಯೋ ವೈರಲ್ ಆಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು, ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಿ ದಂಡ ವಿಧಿಸಿ, ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ಜ.22): ಸಿಲಿಕಾನ್ ಸಿಟಿಯ ಜನನಿಬಿಡ ರಸ್ತೆಗಳಲ್ಲಿ ಐಷಾರಾಮಿ ಕಾರುಗಳಲ್ಲಿ ಸ್ಟಂಟ್ ಮಾಡುವುದು ಇತ್ತೀಚೆಗೆ ಫ್ಯಾಷನ್ ಆಗಿಬಿಟ್ಟಿದೆ. ಇದೀಗ ಬೆಂಗಳೂರಿನ ಹೃದಯಭಾಗವಾದ ಚರ್ಚ್ ಸ್ಟ್ರೀಟ್‌ನಲ್ಲಿ ಅಪಾಯಕಾರಿ ರೀತಿಯಲ್ಲಿ ಕಾರು ಚಾಲನೆ ಮಾಡಿದ್ದ ಚಾಲಕನ ವಿರುದ್ಧ ಪೊಲೀಸರು ಎಫ್‌ಐಆರ್ (FIR) ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಎರಡು ಡೋರ್ ಓಪನ್ ಮಾಡಿ ಅಪಾಯಕಾರಿ ಸ್ಟಂಟ್!
ಬೆಂಗಳೂರಿನ ಫೇಮಸ್ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಐಷಾರಾಮಿ ಕಾರಿನ ಎರಡು ಬದಿಯ ಡೂರ್ ಸಂಪೂರ್ಣವಾಗಿ ತೆರೆದು ಚಾಲನೆ ಮಾಡಲಾಗಿತ್ತು. ರಸ್ತೆಯಲ್ಲಿ ಸಾರ್ವಜನಿಕರು ಓಡಾಡುತ್ತಿದ್ದರೂ ಅದರ ಪರಿವೆ ಇಲ್ಲದೆ, ಅತ್ಯಂತ ಬೇಜವಾಬ್ದಾರಿಯಿಂದ ಕಾರು ಚಲಾಯಿಸಿ ಇತರರ ಪ್ರಾಣಕ್ಕೆ ಸಂಚಕಾರ ತರುವಂತೆ ಚಾಲಕ ವರ್ತಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್‌ಸ್ಟಾಗ್ರಾಮ್ ವಿಡಿಯೋ ನೋಡಿ ಪೊಲೀಸರ ಎಂಟ್ರಿ
ಧನ್ವೀರ್ ಎಂಬಾತನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಅಪಾಯಕಾರಿ ಚಾಲನೆಯ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿತ್ತು. ರೀಲ್ಸ್‌ಗಾಗಿ ಪ್ರಚಾರ ಪಡೆಯಲು ಈ ಕೃತ್ಯ ಎಸಗಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಆರೋಪಿ ಚಾಲಕನ ವಿರುದ್ಧ ಎಫ್‌ಐಆರ್ ಹಾಕಿದ್ದಾರೆ.
ದಂಡದ ಜೊತೆಗೆ ವಾರ್ನಿಂಗ್ ನೀಡಿದ ಪೊಲೀಸರು
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಾಲಕನಿಗೆ ಭಾರಿ ಮೊತ್ತದ ದಂಡ ವಿಧಿಸಿದ್ದಾರೆ. ಅಷ್ಟೇ ಅಲ್ಲದೆ, ಧನ್ವೀರ್ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿದ್ದ ಅಪಾಯಕಾರಿ ವಿಡಿಯೋವನ್ನು ಡಿಲೀಟ್ ಮಾಡಿಸಲಾಗಿದೆ. ಮತ್ತೊಮ್ಮೆ ಇಂತಹ ಅತಿರೇಕದ ವರ್ತನೆ ತೋರಿದರೆ ಪರವಾನಗಿ ರದ್ದು ಮಾಡುವುದಾಗಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.


