ಬೆಂಗಳೂರು(ಏ.16): ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ತಮ್ಮ ಮೋಸದ ಬಲೆಗೆ ಬೀಳಿಸಿಕೊಂಡು ಬಳಿಕ ನಗ್ನ ವಿಡಿಯೋ ಮಾಡಿ ಬೆದರಿಸಿ ಯುವಕನ ಸಾವಿಗೆ ಕಾರಣವಾಗಿದ್ದ ಇಬ್ಬರು ಸೈಬರ್‌ ಸುಲಿಗೆಕೋರರನ್ನು ರಾಜಸ್ಥಾನದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಲ್ಲಿ ಕೆ.ಆರ್‌.ಪುರ ಪೊಲೀಸರು ಯಶ ಕಂಡಿದ್ದಾರೆ.

ರಾಜಸ್ಥಾನದ ಭರತ್‌ಪೂರ್‌ ಜಿಲ್ಲೆ ರಸೂಲಪೂರ್‌ ಗ್ರಾಮದ ರಾಬಿನ್‌ (22) ಹಾಗೂ ಜಾವೇದ್‌ (25) ಬಂಧಿತರಾಗಿದ್ದು, ಈ ಜಾಲದ ಸುಳಿಗೆ ಸಿಲುಕಿ ಸುಮಾರು 18 ಜನರು ಶೋಷಿತರಾಗಿದ್ದಾರೆ ಎಂಬ ಆತಂಕಕಾರಿ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮಾ.23ರಂದು ಬ್ಲ್ಯಾಕ್‌ಮೇಲ್‌ಗೆ ಹೆದರಿ ಎಂಬಿಎ ಪದವೀಧರ ಬಿ.ಎಸ್‌.ಅವಿನಾಶ್‌ ಅಲಿಯಾಸ್‌ ಅಭಿಗೌಡ (26) ಆತ್ಮಹತ್ಯೆ ಮಾಡಿಕೊಂಡಿದ್ದ. ಮೊಬೈಲ್‌ ಕರೆಗಳು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ರಾಜಸ್ಥಾನ ಪೊಲೀಸರ ನೆರವಿನಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವೈಟ್‌ಫೀಲ್ಡ್‌ ಠಾಣೆ ಡಿಸಿಪಿ ಡಿ.ದೇವರಾಜ್‌ ತಿಳಿಸಿದ್ದಾರೆ.

ನಗ್ನ ಬ್ಲಾಕ್‌ಮೇಲ್‌ಗೆ ಜೀವ ತೆತ್ತ ಯುವಕ..!

ನೀಲಿ ಚಿತ್ರ ತೋರಿಸಿ ಬೆತ್ತಲೆ:

ಐಎಎಸ್‌ ಅಧಿಕಾರಿ ಆಗುವ ಕನಸು ಕಂಡಿದ್ದ ಅವಿನಾಶ್‌, ಅದಕ್ಕಾಗಿ ಭಾರಿ ಸಿದ್ಧತೆ ಮಾಡಿಕೊಂಡಿದ್ದ. ಐಎಎಸ್‌ ಪ್ರಿಲಿಮ್ಸ್‌ ಪಾಸ್‌ ಆಗಿತ್ತು. ಈ ನಡುವೆ ಆತನಿಗೆ ಫೇಸ್‌ಬುಕ್‌ನಲ್ಲಿ ನೇಹಾ ಶರ್ಮಾ ಎಂಬಾಕೆ ಹೆಸರಿನ ಯುವತಿ ಹೆಸರಿನಲ್ಲಿ ರಾಬಿನ್‌ ಹಾಗೂ ಜಾವೇದ್‌ ಬಲೆಗೆ ಬೀಳಿಸಿಕೊಂಡಿದ್ದರು. ತಾವಾಗಿಯೇ ಅವಿನಾಶ್‌ಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ ಆರೋಪಿಗಳು ಸ್ನೇಹ ಮಾಡಿಕೊಂಡಿದ್ದರು. ಬಳಿಕ ಮೆಸೆಂಜರ್‌ನಲ್ಲಿ ಚಾಟ್‌ ಶುರು ಮಾಡಿದ ಆರೋಪಿಗಳು, ನಾಜೂಕಿನ ಮಾತಿನ ಮೂಲಕ ಅವಿನಾಶ್‌ನನ್ನು ಖೆಡ್ಡಾಕ್ಕೆ ಕೆಡವಿದ್ದರು. ಹೀಗೆ ಆತ್ಮೀಯತೆ ಬಳಿಕ ಪರಸ್ಪರ ಮೊಬೈಲ್‌ ಸಂಖ್ಯೆಗಳು ವಿನಿಮಿಯವಾಗಿ ವಿಡಿಯೋ ಕಾಲಿಂಗ್‌ ಸಂಭಾಷಣೆ ಆರಂಭವಾಯಿತು. ಖುಲ್ಲಂ ಖುಲ್ಲಾ ಮಾತುಕತೆ ನಡೆದಿತ್ತು.

ಈ ‘ಮುಕ್ತ’ ಸಂದೇಶಗಳಿಂದ ಆತನನ್ನು ಅವರು ಮತ್ತಷ್ಟು ಮೋಡಿ ಮಾಡಿದ್ದರು. ಆದರೆ ಸಂತ್ರಸ್ತನಿಗೆ ವಿಡಿಯೋ ಕಾಲ್‌ ಮಾಡಿದಾಗ ಆರೋಪಿಗಳು ಮಾತನಾಡುತ್ತಿರಲಿಲ್ಲ. ವಿಡಿಯೋ ಕಾಲ್‌ ಮಾಡಿ ಮತ್ತೊಂದು ಮೊಬೈಲ್‌ನಲ್ಲಿ ನೀಲಿ ಚಲನಚಿತ್ರಗಳನ್ನು ತೋರಿಸುತ್ತಿದ್ದರು. ಆ ಚಿತ್ರದಲ್ಲಿರುವ ಯುವತಿಯೇ ತನ್ನ ಫೇಸ್‌ಬುಕ್‌ ಗೆಳತಿ ಎಂದು ಭಾವಿಸಿ ಅವಿನಾಶ್‌ ಸಹ ನಗ್ನವಾಗಿದ್ದ. ಬೆತ್ತಲೆಯಾದ ಯುವತಿ ಸೂಚನೆಯಂತೆ ಆತ ನಗ್ನವಾಗಿದ್ದ. ಈ ದೃಶ್ಯವನ್ನು ಮತ್ತೊಂದು ಮೊಬೈಲ್‌ನಲ್ಲಿ ಆರೋಪಿಗಳು ಚಿತ್ರೀಕರಿಸಿಕೊಂಡಿದ್ದರು.

ಬಳಿಕ ಈ ನಗ್ನ ವಿಡಿಯೋವನ್ನು ಅವಿನಾಶ್‌ಗೆ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಕಳುಹಿಸಿ ಆರೋಪಿಗಳು ಬ್ಲ್ಯಾಕ್‌ಮೇಲ್‌ ಆರಂಭಿಸಿದ್ದರು. ಹಣ ಕೊಡದೆ ಹೋದರೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿ ಮರ್ಯಾದೆ ಕಳೆಯುತ್ತೇವೆ ಎಂದು ಬೆದರಿಸುತ್ತಿದ್ದರು. ಈ ಬ್ಲ್ಯಾಕ್‌ಮೇಲ್‌ಗೆ ಹೆದರಿ ತನ್ನ ಸ್ನೇಹಿತರ ಬಳಿ ಸಾಲ ಪಡೆದು 36,680 ಅನ್ನು ಆರೋಪಿಗಳ ಬ್ಯಾಂಕ್‌ ಖಾತೆಗೆ ಹಂತ ಹಂತವಾಗಿ ಆತ ಜಮೆ ಮಾಡಿದ್ದ. ಹೀಗಿದ್ದರೂ ಮತ್ತೆ ಮತ್ತೆ ಹಣಕ್ಕೆ ಸುಲಿಗೆಕೋರರು ಪೀಡಿಸುತ್ತಿದ್ದರಿಂದ ಬೇಸತ್ತು ಮಾ.23ರಂದು ಅವಿನಾಶ್‌ ಆತ್ಮಹತ್ಯೆಗೆ ಶರಣಾಗಿದ್ದರು. ಮೂರು ದಿನಗಳ ಬಳಿಕ ಮೃತನ ಸೋದರಿಗೆ ಬಂದ ಮೆಸೇಜ್‌ ಆತ್ಮಹತ್ಯೆ ಹಿಂದಿನ ರಹಸ್ಯ ಬಯಲುಗೊಳಿಸಿತು.

ಈ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಡಿ.ದೇವರಾಜ್‌ ಅವರು, ಆರೋಪಿಗಳ ಪತ್ತೆಗೆ ಕೆ.ಆರ್‌.ಪುರ ಇನ್‌ಸ್ಪೆಕ್ಟರ್‌ ಎಂ.ಅಂಬರೀಷ್‌, ಸಬ್‌ ಇನ್‌ಸ್ಪೆಕ್ಟರ್‌ ಎಸ್‌.ರಂಜಿತ್‌ ತಂಡ ರಚಿಸಿದರು. ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ಸುಲಿಗೆಕೋರರನ್ನು ಸೆರೆ ಹಿಡಿದಿದ್ದಾರೆ.

ಯುವತಿಗೆ ಬೆದರಿಸಿ ಅಶ್ಲೀಲ ವಿಡಿಯೋ ತೆಗೆದು ಬ್ಲಾಕ್‌ಮೇಲ್‌

ಸೋದರಿಗೆ ಸಂದೇಶ ಕಳುಹಿಸಿ ಸಿಕ್ಕಿಬಿದ್ದ ಆರೋಪಿಗಳು

ಅವಿನಾಶ್‌ ಮೃತಪಟ್ಟ ಎರಡು ದಿನಗಳ ಬಳಿಕ ಮಾ.25ರ ಸಂಜೆ 4ಕ್ಕೆ ಆತನ ಸಹೋದರಿ ಫೇಸ್‌ಬುಕ್‌ ಖಾತೆಗೆ ನೇಹಾ ಶರ್ಮಾ ಹೆಸರಿನಲ್ಲಿ ಆರೋಪಿಗಳು ಸಂದೇಶ ಕಳುಹಿಸಿ ವಿಚಾರಿಸಿದ್ದರು. ತನಗೆ ಅವಿನಾಶ್‌ನ ಮೊಬೈಲ್‌ ನಂಬರ್‌ ಬೇಕಿತ್ತು ಎಂದು ಕೇಳಿದ್ದರು. ತನ್ನ ಸೋದರ ಮೃತಪಟ್ಟಿರುವ ವಿಷಯ ಬಹುತೇಕ ಆತನ ಗೆಳೆಯರಿಗೆ ಗೊತ್ತಾಗಿದೆ. ಹೀಗಿದ್ದರೂ ಆತನ ಸ್ನೇಹಿತೆ ಯಾಕೆ ಮೊಬೈಲ್‌ ನಂಬರ್‌ ಕೇಳುತ್ತಿದ್ದಾಳೆ ಎಂಬ ಗುಮಾನಿ ಮೂಡಿದೆ.

ತಕ್ಷಣವೇ ಜಾಗ್ರತರಾದ ಅವಿನಾಶ್‌ ಸಹೋದರಿ, ಅವಿನಾಶ್‌ ನಂಬರ್‌ ಎಂದು ಅಕ್ಕನ ಮಗ ಅನಿಲ್‌ ಮೊಬೈಲ್‌ ನಂಬರ್‌ ಕೊಟ್ಟಿದ್ದರು. ಇದಾದ ಕೆಲವೇ ಸೆಕಂಡ್‌ಗಳಲ್ಲಿ ಅನಿಲ್‌ ಮೊಬೈಲ್‌ಗೆ, ನಿನ್ನ ವಿಡಿಯೋ ನನ್ನ ಬಳಿ ಇದೆ. ಹಣ ಕೊಡದೆ ಹೋದರೆ ನಿನ್ನ ಕುಟುಂಬ ಸದಸ್ಯರಿಗೆ ಕಳುಹಿಸುತ್ತೇನೆ. ನೀನು ಹಣ ಕೊಟ್ಟರೆ ವಿಡಿಯೋ ನಾಶ ಮಾಡುತ್ತೇನೆ ಎಂದು ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿದೆ. ಕೊನೆಗೆ ಬ್ಲಾಕ್‌ಮೇಲ್‌ ಸಂಗತಿ ಬಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ರಸೂಲ್‌ಪುರ್‌ ಗ್ರಾಮ ಸೈಬರ್‌ ವಂಚಕರ ನೆಲ

ಜಾರ್ಖಂಡ್‌ ರಾಜ್ಯದ ಜಮಂತರ ಜಿಲ್ಲೆಯ ನಂತರ ಅತಿ ಹೆಚ್ಚು ಸೈಬರ್‌ ವಂಚಕರು ನೆಲೆ ಅಂದರೆ ರಾಜಸ್ಥಾನದ ಭರತ್‌ಪುರ್‌ ಜಿಲ್ಲೆಯ ರಸೂಲ್‌ಪುರ್‌ ಗ್ರಾಮ. ಪ್ರಾಥಮಿಕ ಶಿಕ್ಷಣ ಪಡೆದಿದ್ದರೂ ಸೈಬರ್‌ ವಂಚನೆಯಲ್ಲಿ ಇಲ್ಲಿನ ಬಹುತೇಕ ಮಂದಿ ನಿಪುಣರು. ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಮೊಬೈಲ್‌ ಇಟ್ಟುಕೊಂಡು ಜನರನ್ನು ಆನ್‌ಲೈನ್‌ನಲ್ಲಿ ಸುಲಿದು ಮೋಜಿನ ಜೀವನ ನಡೆಸುತ್ತಾರೆ. ಯುವತಿ ಹೆಸರಿನಲ್ಲಿ ಸ್ನೇಹ ಬೆಳೆಸಿ ಅಶ್ಲೀಲ ವಿಡಿಯೋ ತೋರಿಸಿ ಯುವಕರ ನಗ್ನ ವಿಡಿಯೋ ಸೆರೆಹಿಡಿದು ಬ್ಲ್ಯಾಕ್‌ಮೇಲ್‌ ಮೂಲಕ ಹಣ ಸಂಪಾದನೆಯನ್ನೇ ವೃತ್ತಿಯಾಗಿಸಿಕೊಂಡಿದ್ದರು. ವಿಶೇಷ ಅಂದರೆ ಸೈಬರ್‌ ವಂಚನೆಗೆ ಆ ಊರಿನ ತರಬೇತುದಾರರು ಇದ್ದಾರೆ. ಆ ಊರಿನ ಮಕ್ಕಳಿಗೆ ಅವರೇ ಗುರುಗಳು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರಿಗೆ ಕಲ್ಲೇಟು

ತಮ್ಮನ್ನು ಬಂಧಿಸಲು ಬಂದ ಕೆ.ಆರ್‌.ಪುರ ಪಿಎಸ್‌ಐ ರಂಜಿತ್‌ ಹಾಗೂ ಇಬ್ಬರು ಕಾನ್‌ಸ್ಟೇಬಲ್‌ಗಳ ಮೇಲೆ ಆರೋಪಿಗಳು ಕಲ್ಲು ತೂರಿ ತಪ್ಪಿಸಿಕೊಂಡಿದ್ದಾರೆ. ಈ ವಿಚಾರ ತಿಳಿದ ಡಿಸಿಪಿ ದೇವರಾಜ್‌ ಅವರು, ಕೂಡಲೇ ರಾಜಸ್ಥಾನದ ಪೊಲೀಸರನ್ನು ಸಂಪರ್ಕಿಸಿ ನೆರವು ಕೋರಿದ್ದಾರೆ. ಬಳಿಕ ಭರತ್‌ಪುರದ ಎಸ್ಪಿ ಅವರು, 50 ಪೊಲೀಸರ ತಂಡವನ್ನು ಕಳುಹಿಸಿ ಆರೋಪಿಗಳನ್ನು ಸೆರೆ ಹಿಡಿಸಿ ಬೆಂಗಳೂರಿಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಗರದಲ್ಲಿ 18 ಕೇಸ್‌ ಬೆಳಕಿಗೆ

ಅವಿನಾಶ್‌ ರೀತಿ ನಗರದ 18 ಯುವಕರಿಗೆ ಆರೋಪಿಗಳು ಅಶ್ಲೀಲ ವಿಡಿಯೋ ತೋರಿಸಿ ಸುಲಿಗೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಬಗ್ಗೆ ಕೆಲವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಕೆಲ ಯುವಕರು ಹಣ ನೀಡದೆ ಆರೋಪಿಗಳಿಗೆ ಅವಾಜ್‌ ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಣಕ್ಕಾಗಿ ದುಷ್ಕರ್ಮಿಗಳ ಎಸಗುವ ಕೃತ್ಯದಿಂದ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಕೆ.ಆರ್‌.ಪುರ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರಿಗೆ ನೆರವಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಾಮಾಜಿಕ ಜಾಲ ತಾಣಗಳಲ್ಲಿ ಅಪರಿಚಿತರ ಜತೆ ಸ್ನೇಹ, ಸುಲಿಗೆ ಮಾಡುವ ಮುನ್ನ ಜನರು ಎಚ್ಚರವಹಿಸಬೇಕು ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಡಿ.ದೇವರಾಜ್‌ ತಿಳಿಸಿದ್ದಾರೆ.