ಬೆಂಗಳೂರು(ಏ.08): ಫೇಸ್‌ಬುಕ್‌ನಲ್ಲಿ ಮಯಾಂಗನೆ ಮೋಹದ ಪಾಶಕ್ಕೆ ಬಿದ್ದ ಐಎಎಸ್‌ ಅಧಿಕಾರಿಯಾಗುವ ಕನಸು ಕಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ, ಆಕೆಯ ವಯ್ಯಾರದ ಮಾತಿಗೆ ಮರುಳಾಗಿ ವಿಡಿಯೋ ಕಾಲ್‌ನಲ್ಲಿ ನಗ್ನವಾದ ತಪ್ಪಿಗೆ ಜೀವವನ್ನೇ ಕಳೆದುಕೊಂಡು ದಾರುಣ ಕತೆ ಇದು.

ಇತ್ತೀಚಿಗೆ ಕೆ.ಆರ್‌.ಪುರ ಸಮೀಪ ಭಟ್ಟರಹಳ್ಳಿಯಲ್ಲಿ ನಡೆದಿದ್ದ ಬಿ.ಎಸ್‌.ಅವಿನಾಶ್‌ ಆತ್ಮಹತ್ಯೆಗೆ ಹಿಂದಿನ ಕಾರಣ ಬಯಲಾಗಿದ್ದು, ವಿಡಿಯೋ ಕಾಲ್‌ನಲ್ಲಿ ಅಶ್ಲೀಲ ದೃಶ್ಯ ಸೆರೆ ಹಿಡಿದು ಹಣಕ್ಕಾಗಿ ಸೈಬರ್‌ ಕಿಡಿಗೇಡಿಗಳ ಬ್ಲ್ಯಾಕ್‌ಮೇಲ್‌ಗೆ ಹೆದರಿ ಆತ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.

ಐಎಎಸ್‌ ಅಧಿಕಾರಿ ಆಗುವ ಕನಸು ಕಂಡಿದ್ದ ಅವಿನಾಶ್‌ ಅಲಿಯಾಸ್‌ ಅಭಿಗೌಡ, ಇದಕ್ಕಾಗಿ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದ. ಆದರೆ ಮಾ.23 ರಂದು ಮನೆಯಲ್ಲಿ ಆತ ನಿಗೂಢವಾಗಿ ಆತ್ಮಹತ್ಯೆ ಶರಣಾಗಿದ್ದ. ಈ ಘಟನೆ ನಡೆದು ಎರಡು ದಿನಗಳ ಬಳಿಕ ಮೃತನ ಸೋದರಿಗೆ ಫೇಸ್‌ಬುಕ್‌ನಲ್ಲಿ ಅಪರಿಚಿತನಿಂದ ಬಂದ ಸಂದೇಶ ಇಡೀ ಘಟನೆ ರೋಚಕ ತಿರುವು ನೀಡಿದೆ. ಅವಿನಾಶ್‌ ಎಂದು ಭಾವಿಸಿ ಮೃತರ ಸಂಬಂಧಿಕರಿಗೆ ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ. ಈ ಸಂಬಂಧ ಮೃತನ ಸೋದರಿ ನೀಡಿದ ದೂರು ಆಧರಿಸಿ ನೇಹಾ ಶರ್ಮಾ, ತೇಜಸ್‌ ರಮೇಶ್‌, ಮೋಯಿನ್‌ ಖಾನ್‌, ರಾಬಿನ್‌ ಖಾನ್‌, ಜಾವೇದ್‌ ಮತ್ತು ಇತರರ ವಿರುದ್ಧ ಕೆ.ಆರ್‌.ಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಹುಬ್ಬಳ್ಳಿ: ಮನೆ ಪರಿಹಾರಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಫೇಸ್‌ಬುಕ್‌ನಲ್ಲಿ ಬಲೆಗೆ ಬೀಳಿಸಿ ವಂಚನೆ

ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಅವಿನಾಶ್‌ಗೆ ನೇಹಾ ಶರ್ಮಾ ಪರಿಚಯವಾಗಿದೆ. ಬಳಿಕ ಚಾಟಿಂಗ್‌ ನಡೆದು ಪರಸ್ಪರ ಮೊಬೈಲ್‌ ಸಂಖ್ಯೆಗಳು ವಿನಿಮಯವಾಗಿವೆ. ಕೊನೆಗೆ ವಿಡಿಯೋ ಕಾಲ್‌ನಲ್ಲಿ ಅವರಲ್ಲಿ ಅಶ್ಲೀಲ ಮಾತುಕತೆ ಶುರುವಾಗಿದೆ. ಆಗ ಪುಸಲಾಯಿಸಿ ಅವಿನಾಶ್‌ನನ್ನು ತಮ್ಮ ಬಲೆಗೆ ಬೀಳಿಸಿಕೊಂಡ ಆಕೆ, ನಗ್ನವಾದ ವಿಡಿಯೋ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾಳೆ. ಬಳಿಕ ಈ ಅಶ್ಲೀಲ ದೃಶ್ಯಗಳನ್ನು ಮುಂದಿಟ್ಟು ಆತನಿಂದ ಹಣ ಸುಲಿಗೆ ನೇಹಾ ಶರ್ಮಾ ಗ್ಯಾಂಗ್‌ ಶುರು ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬ್ಲ್ಯಾಕ್‌ಮೇಲ್‌ಗೆ ಬೆದರಿದ ಅವಿನಾಶ್‌, ತನ್ನ ಬಳಿಯಿದ್ದ ಹಣವನ್ನು ಫೇಸ್‌ಬುಕ್‌ ಗೆಳತಿಯ ಗ್ಯಾಂಗ್‌ನ ಖಾತೆಗೆ ಆನ್‌ಲೈನ್‌ ಮೂಲಕ ವರ್ಗಾಯಿಸಿದ್ದಾನೆ. ಪದೇ ಪದೇ ಹಣಕ್ಕೆ ಆರೋಪಿ ಒತ್ತಾಯಿಸಿದ್ದಾರೆ. ಆಗ ತನ್ನ ಸ್ನೇಹಿತರಿಂದ ಸಾಲ ಪಡೆದು ಆತ ನೀಡಿದ್ದಾನೆ. ಈ ಹಣಕ್ಕೆ ತೃಪ್ತರಾಗದೆ ದುಷ್ಕರ್ಮಿಗಳು ಮತ್ತೆ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ. ನೀನು ಹಣ ಕೊಡದೆ ಹೋದರೆ ನಿಮ್ಮ ಕುಟುಂಬ ಸದಸ್ಯರಿಗೆ ವಿಡಿಯೋ ಕಳುಹಿಸುತ್ತೇವೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಆಪ್‌ಲೋಡ್‌ ಮಾಡಿ ಮರ್ಯಾದೆ ಕಳೆಯುತ್ತೇವೆ ಎಂದು ಬೆದರಿಸಿದ್ದಾರೆ. ಈ ಕಿರುಕುಳ ಸಹಿಸಲಾರದೆ ಅವಿನಾಶ್‌, ಕೊನೆಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಮಾಚ್‌ರ್‍ 23ಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಈ ಘಟನೆ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರಿಗೆ, ಮೃತನ ಕೊಠಡಿಯಲ್ಲಿ ಮರಣ ಪತ್ರ ಪತ್ತೆಯಾಗಿಲ್ಲ. ಹೀಗಾಗಿ ಐಎಎಸ್‌ಗೆ ತಯಾರಿ ನಡೆಸಿದ್ದ ಪುತ್ರನ ದಿಢೀರ್‌ ಆತ್ಮಹತ್ಯೆ ನಿರ್ಧಾರವು ಆತನ ಕುಟುಂಬಕ್ಕೆ ಆಘಾತ ತಂದಿತ್ತು. ಕೆಲ ದಿನಗಳ ಬಳಿಕ ಮೃತನ ಸೋದರಿಗೆ ಫೇಸ್‌ಬುಕ್‌ನಲ್ಲಿ ಬಂದ ಸಂದೇಶ ಅವಿನಾಶ್‌ ಸಾವಿನ ರಹಸ್ಯವನ್ನು ಬಯಲುಗೊಳಿಸಿದೆ.

ತನ್ನ ಮನೆಗೆ ಬಂದ ಪ್ರೇಯಸಿ ಉಸಿರುಗಟ್ಟಿಸಿ ಕೊಂದ : ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

ಸಹೋದರಿಗೆ ಬಂದ ಸಂದೇಶದಿಂದ ಸುಳಿವು

ಅವಿನಾಶ್‌ ಆತ್ಮಹತ್ಯೆ ಮಾಡಿಕೊಂಡ ಎರಡು ದಿನಗಳ ಬಳಿಕ ಮೃತನ ಸೋದರಿಗೆ ಫೇಸ್‌ಬುಕ್‌ನಲ್ಲಿ ನೇಹಾ ಶರ್ಮಾ ಸಂದೇಶ ಕಳುಹಿಸಿದ್ದಳು. ನೀವು ಅವಿನಾಶ್‌ ಕುಟುಂಬದವರ ಎಂದು ಆಕೆ ವಿಚಾರಿಸಿದ್ದಳು. ಇದಕ್ಕೆ ಪ್ರತಿಕ್ರಿಯಿಸಿದ ಅವಿನಾಶ್‌ ಸೋದರಿ, ನಾನು ಕುಟುಂಬದ ಸ್ನೇಹಿತೆ ಎಂದಿದ್ದಳು. ಆಗ ನನಗೆ ಅವಿನಾಶ್‌ನ ಮೊಬೈಲ್‌ ನಂಬರ್‌ ಬೇಕಿತ್ತು ಎಂದು ಆಕೆ ಕೇಳಿದ್ದಳು. ಇದರಿಂದ ಮೃತನ ಸೋದರಿಯಲ್ಲಿ ಅನುಮಾನ ಮೂಡಿದೆ. ತನ್ನ ಸೋದರ ಮೃತಪಟ್ಟಿರುವ ವಿಷಯ ಬಹುತೇಕ ಆತನ ಗೆಳೆಯರಿಗೆ ಗೊತ್ತಾಗಿದೆ. ಹೀಗಿದ್ದರೂ ಆತನ ಸ್ನೇಹಿತೆ ಯಾಕೆ ಮೊಬೈಲ್‌ ನಂಬರ್‌ ಕೇಳುತ್ತಿದ್ದಾಳೆ ಎಂಬ ಅವರಲ್ಲಿ ಪ್ರಶ್ನೆ ಮೂಡಿದೆ.

ತಕ್ಷಣವೇ ಜಾಗ್ರತರಾದ ಅವರು, ಅವಿನಾಶ್‌ ನಂಬರ್‌ ಎಂದು ಅಕ್ಕನ ಮಗ ಅನಿಲ್‌ ಮೊಬೈಲ್‌ ನಂಬರ್‌ ಕೊಟ್ಟಿದ್ದಾರೆ. ಇದಾದ ಕೆಲವೇ ಸೆಕಂಡ್‌ಗಳಲ್ಲಿ ಅನಿಲ್‌ ಮೊಬೈಲ್‌ಗೆ ‘ನಿನ್ನ ವಿಡಿಯೋ ನನ್ನ ಬಳಿ ಇದೆ. ಹಣ ಕೊಡದೆ ಹೋದರೆ ನಿನ್ನ ಕುಟುಂಬ ಸದಸ್ಯರಿಗೆ ಕಳುಹಿಸುತ್ತೇನೆ. ನೀನು ಹಣ ಕೊಟ್ಟರೆ ವಿಡಿಯೋ ನಾಶ ಮಾಡುತ್ತೇನೆ’ ಎಂದು ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿದೆ. ಈ ಸಂದೇಶದಿಂದ ಮತ್ತಷ್ಟುಶಂಕೆಗೊಂಡ ಮೃತನ ಸಂಬಂಧಿಕರು, ಅವಿನಾಶ್‌ ಎಂದುಕೊಂಡೇ ಆಕೆಗೆ ಪ್ರತಿಕ್ರಿಯಿಸಿದ್ದಾರೆ.

‘ನೀನು ಮೊದಲು ವಿಡಿಯೋ ಡಿಲೀಟ್‌ ಮಾಡಿ ಅದರ ಸ್ಕ್ರೀನ್‌ ಶಾಟ್‌ ನನಗೆ ಕಳುಹಿಸು. ನಂತರ ಹಣ ಕೊಡುತ್ತೇನೆ’ ಎಂದು ತಾಕೀತು ಮಾಡಿದ್ದರು. ಅದಕ್ಕೆ ನೇಹಾ ಶರ್ಮಾ, ‘ಈ ಬಾರಿ ಖಂಡಿತಾ ಡಿಲೀಟ್‌ ಮಾಡುತ್ತೇನೆ. ಕೂಡಲೇ .40 ಸಾವಿರ ಕಳುಹಿಸು’ ಎಂದು ಗೂಗಲ್‌ ಪೇ ನಂಬರ್‌ ಕಳುಹಿಸಿದ್ದಾಳೆ. ಇದಾದ ಮೇಲೆ ತೇಜಸ್‌ ರಮೇಶ್‌ ಎಂಬಾತ ಕರೆ ಮಾಡಿ ನೇಹಾ ಶರ್ಮಾ ನಮ್ಮ ತಂಡದ ಮ್ಯಾನೇಜರ್‌. ನಮ್ಮ ತಂಡದಲ್ಲಿ ಮೊಯಿನ್‌ ಖಾನ್‌, ಜಾವೇದ್‌, ರಾಬಿನ್‌ ಖಾನ್‌ ಇದ್ದಾರೆ ಎಂದು ಹೇಳಿದ್ದಲ್ಲದೆ ಪದೇ ಪದೇ ಕರೆ ಮಾಡಿ ಹಣಕ್ಕೆ ಪೀಡಿಸಲಾರಂಭಿಸಿದ್ದಾರೆ. ಈ ಕರೆಗಳ ಹಿನ್ನಲೆಯಲ್ಲಿ ಎಚ್ಚೆತ್ತ ಮೃತನ ಸಂಬಂಧಿ, ಅವಿನಾಶ್‌ ಫೇಸ್‌ಬುಕ್‌ ಖಾತೆ ತೆರೆದಾಗ ನೇಹಾ ಶರ್ಮಾ ಬ್ಲ್ಯಾಕ್‌ಮೇಲ್‌ ಸಂಗತಿ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.

ಕೊಲ್ಕತ್ತಾದಿಂದ ಬ್ಲ್ಯಾಕ್‌ಮೇಲ್‌

ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ಮೃತನ ಫೇಸ್‌ಬುಕ್‌ ಮಾಹಿತಿ ಹಾಗೂ ಮೊಬೈಲ್‌ ಕರೆಗಳನ್ನು ಪರಿಶೀಲಿಸಿದಾಗ ಕೊಲ್ಕತ್ತಾದಿಂದ ಆರೋಪಿಗಳು ಬ್ಲ್ಯಾಕ್‌ಮೇಲ್‌ ನಡೆಸಿರುವುದು ಗೊತ್ತಾಗಿದೆ. ಈ ಮಾಹಿತಿ ಮೇರೆಗೆ ದೆಹಲಿ ಹಾಗೂ ಕೊಲ್ಕತ್ತಾಗೆ ಕೆ.ಆರ್‌.ಪುರ ಪೊಲೀಸರು ತೆರಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.