ಮೈಸೂರು(ಜ.04): ಬೆಂಗಳೂರಿನ ಖಾಸಗಿ ಹಣಕಾಸು ಕಂಪನಿಯೊಂದರ ಉದ್ಯೋಗಿ ಮೈಸೂರಿನ ಲಾಡ್ಜ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಜೊತೆಗಿದ್ದ ಅವರ ಪತ್ನಿ ನಾಪತ್ತೆಯಾಗಿದ್ದಾರೆ.

ಬೆಂಗಳೂರು ಯಶವಂತಪುರ ನಿವಾಸಿ ಉಮಾಶಂಕರ್‌(45) ಮೃತಪಟ್ಟವರು. ಇವರ ಪತ್ನಿ ಕವಿತಾ ಮೂಲತಃ ಮೈಸೂರಿನವರಾಗಿದ್ದು, ಬೆಂಗಳೂರಿನಲ್ಲಿ ನರ್ಸ್‌ ಆಗಿದ್ದರು. ಈ ದಂಪತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದು, ಇಬ್ಬರು ಸಹಿ ಹಾಕಿದ್ದಾರೆ. ಆದರೆ, ಪತಿ ಮೃತಪಟ್ಟಿದ್ದು, ಪತ್ನಿ ನಾಪತ್ತೆಯಾಗಿರುವುದು ಹಲವು ಅನುಮಾವಗಳಿಗೆ ಕಾರಣವಾಗಿದೆ.

ನಾಪತ್ತೆಯಾಗಿದ್ದ ಬಾಲಕಿ ಶವ ಕಬ್ಬಿನ ಗದ್ದೆಯಲ್ಲಿ ಪತ್ತೆ.. ಪಾಪಿ ಸಂಬಂಧಿ!

ಉಮಾಶಂಕರ್‌ ಅವರು ಪತ್ನಿ ಕವಿತಾ ಮತ್ತು ಮಗಳೊಂದಿಗೆ ಜ.1ರಂದು ಮೈಸೂರಿಗೆ ಬಂದಿದ್ದು, ಜಯನಗರದಲ್ಲಿರುವ ಕವಿತಾ ತವರು ಮನೆಗೆ ಮಗಳನ್ನು ಬಿಟ್ಟು ಬೆಂಗಳೂರಿಗೆ ಹಿಂತಿರುಗುವುದಾಗಿ ಹೇಳಿ ಹೊರಟಿದ್ದಾರೆ. ಆದರೆ, ಮೈಸೂರಿನ ಮಂಡಿ ಠಾಣೆ ವ್ಯಾಪ್ತಿಯ ಲಾಡ್ಜ್‌ವೊಂದರಲ್ಲಿ ಶುಕ್ರವಾರ ಸಂಜೆ ಬಂದು ಉಳಿದುಕೊಂಡಿದ್ದಾರೆ. ಶುಕ್ರವಾರ ರಾತ್ರಿ ರೂಮಿಗೆ ಊಟ ತರಿಸಿಕೊಂಡ ದಂಪತಿ ಮರುದಿನ ಮಧ್ಯಾಹ್ನ 2 ಗಂಟೆಯಾದರೂ ಹೊರಗೆ ಬರಲಿಲ್ಲ. ಲಾಡ್ಜ್‌ ಸಿಬ್ಬಂದಿ ಕೊಠಡಿ ಪರಿಶೀಲಿಸಿದಾಗ ಉಮಾಶಂಕರ್‌ ಮೃತಪಟ್ಟಿರುವುದು ತಿಳಿದು ಬಂದಿದೆ.

ಈ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಂಡಿ ಠಾಣೆ ಪೊಲೀಸರು ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಬರೆದ ಪತ್ರ ಸಿಕ್ಕಿದೆ. ಗಿರೀಶ್‌ ಮತ್ತು ಮಂಜುನಾಥ್‌ ಎಂಬವರು ಸಾಲ ಮರುಪಾವತಿಗೆ ಒತ್ತಾಯಿಸಿ ನಿಂದಿಸಿದ್ದು, ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಶೌಚಕ್ಕೆ ತೆರಳಿದ್ದ ವೇಳೆ ಮೈಮೇಲೆ ಬಂದ ಕಾಮುಕನ ಕೊಚ್ಚಿದ ದಿಟ್ಟೆ!

ಕವಿತಾ ಲಾಡ್ಜ್‌ನಿಂದ ಶನಿವಾರ ಬೆಳಗ್ಗೆ 5ಕ್ಕೆ ಹೊರ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಸಂಬಂಧ ಮಂಡಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.