ಮನೆ ಹೊರಗೆ ಒಣ ಹಾಕುತ್ತಿದ್ದ ಒಳ ಉಡುಪುಗಳನ್ನು ರಾತ್ರಿ ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ಇಬ್ಬರು ಯುವತಿಯರು ಪತ್ತೆ ಹಚ್ಚಿ ಇಂದಿರಾನಗರ ಠಾಣೆ ಪೊಲೀಸರಿಗೆ ಹಿಡಿದು ಕೊಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು (ಜು.16): ಮನೆ ಹೊರಗೆ ಒಣ ಹಾಕುತ್ತಿದ್ದ ಒಳ ಉಡುಪುಗಳನ್ನು ರಾತ್ರಿ ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ಇಬ್ಬರು ಯುವತಿಯರು ಪತ್ತೆ ಹಚ್ಚಿ ಇಂದಿರಾನಗರ ಠಾಣೆ ಪೊಲೀಸರಿಗೆ ಹಿಡಿದು ಕೊಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಸ್ಸಾಂ ಮೂಲದ ಅಬ್ದುಲ್ ಹುಸೇನ್ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಇಂದಿರಾನಗರ ಸಮೀಪ ಮನೆ ಹೊರಗೆ ಒಣ ಹಾಕುತ್ತಿದ್ದ ಮಹಿಳೆಯರ ಒಳ ಉಡುಪುಗಳನ್ನು ನಿರಂತರವಾಗಿ ಕಳ್ಳತನ ಮಾಡುತ್ತಿದ್ದ. ಈತನ ಕಾಟದಿಂದ ರೋಸಿ ಹೋದ ಯುವತಿಯರು, ತಾವೇ ಪತ್ತೆದಾರಿಕೆ ಮಾಡಿ ಖೆಡ್ಡಾಕ್ಕೆ ಕೆಡವಿದ್ದಾರೆ ಎಂದು ತಿಳಿದು ಬಂದಿದೆ.
ರಹಸ್ಯ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ
ಅಬ್ದುಲ್ ಹುಸೇನ್, ನಗರದಲ್ಲಿ ಆನ್‌ಲೈನ್ ಮಾರ್ಕೆಟಿಂಗ್ ಕಂಪನಿಯ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚಿಗೆ ವಿಕೃತ ಮನಸ್ಸಿನ ಆತ, ಇಂದಿರಾನಗರ ಸಮೀಪ ಯುವತಿಯರ ಒಳ ಉಡುಪು ಕಳ್ಳತನಕ್ಕಿಳಿದಿದ್ದ. ಮನೆ ಹೊರಗೆ ಒಣ ಹಾಕುತ್ತಿದ್ದ ಒಳ ಉಡುಪುಗಳು ರಾತ್ರಿ ನಾಪತ್ತೆ ಆಗುತ್ತಿದ್ದರಿಂದ ಆ ಮನೆಯ ಇಬ್ಬರು ಯುವತಿಗೆ ಅನುಮಾನ ಬಂದಿದೆ. ಒಳ ಉಡುಪು ಕಳ್ಳನ ಕಾಟದಿಂದ ಬೇಸತ್ತ ಅವರು, ಆತನನ್ನು ಹಿಡಿಯಲು ತಾವೇ ಮುಂದಾಗಿದ್ದಾರೆ. ಆನ್‌ಲೈನ್‌ನಲ್ಲಿ ಹಿಡನ್ ಕ್ಯಾಮೆರಾ ತರಿಸಿ ಮನೆ ಹೊರಗೆ ಇಟ್ಟಿದ್ದರು. ಎಂದಿನಂತೆ ಅವರ ಮನೆಗೆ ಹೊರಗೆ ಬಂದ ಕಳ್ಳ ಉಡುಪು ಕದ್ದು ಪರಾರಿಯಾಗಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕೂಡಲೇ ಇಂದಿರಾನಗರ ಠಾಣೆಗೆ ತೆರಳಿ ಸಾಕ್ಷ್ಯ ಸಮೇತ ಸಂತ್ರಸ್ತೆಯರು ದೂರು ನೀಡಿದರು. ಈ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಳಿಕ ನ್ಯಾಯಾಲಯದಲ್ಲಿ ಜಾಮೀನು ಪಡೆದು ಆತ ಬಂಧ ಮುಕ್ತನಾಗಿದ್ದಾನೆ.
ರಾತ್ರಿ ನಾಪತ್ತೆ ಬೆಳಗ್ಗೆ ಪತ್ತೆ!
ಎರಡು ಬಾರಿ ಮಾತ್ರ ಒಳ ಉಡುಪುಗಳು ನಾಪತ್ತೆಯಾಗಿದ್ದವು ಎಂದು ಸಂತ್ರಸ್ತೆಯರು ಹೇಳಿಕೆ ಕೊಟ್ಟಿದ್ದಾರೆ. ಆ ಉಡುಪುಗಳು ರಾತ್ರಿ ನಾಪತ್ತೆಯಾಗಿ ಅದೇ ಸ್ಥಳದಲ್ಲಿ ಬೆಳಗ್ಗೆ ಪತ್ತೆಯಾಗಿದ್ದವು. ಹೀಗಾಗಿ ನೆರೆಹೊರೆಯಲ್ಲಿ ನೆಲೆಸಿರುವ ವ್ಯಕ್ತಿಗಳೇ ಈ ಕೃತ್ಯ ಎಸಗಿರುವ ಬಗ್ಗೆ ಅವರಿಗೆ ಶಂಕೆ ಮೂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.


