ಸಾವಿರಾರು ಕೋಟಿ ಮೌಲ್ಯದ 10 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಸತ್ವ ಗ್ರೂಪ್‌ನ ಅಶ್ವಿನ್ ಸಂಚೆಟಿಯನ್ನು ಅವಲಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 1978ರಲ್ಲಿ ಜಮೀನು ಖರೀದಿಸಿದ್ದ ಮೂಲ ಮಾಲೀಕರಾದ ರಾಧ ಎಂಬುವವರು ಇತ್ತೀಚೆಗೆ ಪರಿಶೀಲಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ.
ಬೆಂಗಳೂರು, (ನ.12): 10 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಸತ್ವ ಗ್ರೂಪ್ ನ ಅಶ್ವಿನ್ ಸಂಚೆಟಿ ಅವರನ್ನ ಅವಲಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾವಿರಾರು ಕೋಟಿ ರೂಪಾಯಿಗಳ ಬೆಲೆ ಬಾಳುವ ಈ ಜಮೀನು ಕಬಳಿಸಲು ಯತ್ನಿಸಿದ್ದ 15 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇವರ ಪೈಕಿ ಆರೋಪಿ ಅಶ್ವಿನ್ ಸಂಚೆಟಿ ಎ1 ಆರೋಪಿಯಾಗಿರುವುದರಿಂದ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ತನಿಖೆಗೆ ಸಂಪೂರ್ಣ ಸಹಕರಿಸುವುದಾಗಿ ಸತ್ವ ಗ್ರೂಪ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಆರೋಪ ಸುಳ್ಳೆಂದು ಸಾಬೀತುಪಡಿಸುವ ವಿಶ್ವಾಸ ಹೊಂದಿದೆ.
ಜಮೀನು ವಂಚನೆ ಹೇಗೆ?
ಬಂಡಾಪುರ ಗ್ರಾಮದ ಸರ್ವೇ ಸಂಖ್ಯೆ 20, 21, 44/1ರಲ್ಲಿ ಇರುವ ಈ 10 ಎಕರೆ ಜಮೀನು 1976ರಿಂದ ಖಾಲಿ ಇದ್ದು, ಮೂರು ಗ್ಯಾಂಗ್‌ಗಳು ಇದರ ಮೇಲೆ ಕಣ್ಣು ಹಾಕಿದ್ದವು. 2022ರಿಂದ ಆರೋಪಿಗಳು ವಿವಿಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆರೋಪಿಗಳು ಕೋರ್ಟ್ ಗೆ ಸಲ್ಲಿಸಿ ಕೋರ್ಟ್ ಮುಖಾಂತರ ಖಾತೆ ಮಾಡಿಸಿಕೊಂಡಿದ್ದರು. ಆದರೆ ಈ ಜಮೀನಿನ ಮೂಲ ಮಾಲೀಕರಾದ ರಾಧ ರವರು 1978ರಲ್ಲಿ ಮುದ್ದಪ್ಪ ಎಂಬವರಿಂದ ತಮ್ಮ ಗಂಡನಾದ ಕೃಷ್ಣನೊಂದಿಗೆ ಖರೀದಿಸಿದ್ದರು. 1986ರಲ್ಲಿ ಕೃಷ್ಣನ್ ಮೃತಪಟ್ಟ ನಂತರ, ಮಕ್ಕಳಿಲ್ಲದ ಕಾರಣ ರಾಧ ತಮ್ಮ ಹುಟ್ಟೂರಿಗೆ ತೆರಳಿದ್ದರು ನಂತರ ತಮಿಳುನಾಡಿಗೆ ಸ್ಥಳಾಂತರಗೊಂಡಿದ್ದರು. ಕೃಷ್ಣನ್ ಮರಣದ ನಂತರ ಜಮೀನು ಪೌತಿ ಖಾತೆಯಾಗಿ ರಾಧರ ಹೆಸರಿಗೆ ಬರೆದಾಗಿತ್ತು.
ತಮಿಳುನಾಡಿಂದ ಬಂದ ರಾಧಾಗೆ ಜಮೀನು ನೋಡಿ ಶಾಕ್:
ಇತ್ತೀಚೆಗೆ ತಮಿಳುನಾಡಿನಿಂದ ಬಂದು ಜಮೀನು ಪರಿಶೀಲಿಸಿದಾಗ, ನಕಲಿ ದಾಖಲೆಗಳು ಸೃಷ್ಟಿಯಾಗಿರುವುದು ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದು ಆಘಾತಗೊಂಡ ರಾಧ, ಜಿಪಿಎ (ಜಮೀನು ಪಟ್ಟೆ) ಸಹಿತ ಮೂಲ ದಾಖಲೆಗಳನ್ನು ರಿಜಿನಲ್ ಕಮಿಷನರ್ ಸಲ್ಲಿಸಿ ದೂರು ದಾಖಲಿಸಿದ್ದರು. ಇದೀಗ ದಾಖಲೆಗಳ ಪರಿಶೀಲನೆಯ ನಂತರ, ಜಮೀನು ಮತ್ತೆ ರಾಧರ ಹೆಸರಿಗೆ ಖಾತೆ ಮಾಡಲು ಸೂಚನೆ ನೀಡಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಈ ಜಮೀನು ಬೆಂಗಳೂರಿನ ವಿಸ್ತರಣೆಯೊಂದಿಗೆ ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯವನ್ನು ಹೊಂದಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದೊಡ್ಡ ಗ್ಯಾಂಗ್‌ಗಳು ಜಮೀನು ಕಬಳಿಸಲು ಕಣ್ಣುಹಾಕಿದ್ದವು. ಅವರ ಪೈಕಿ ಎ1 ಆರೋಪಿ ಅಶ್ವಿನ್ ಸಂಚೆಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣವು ರಾಜ್ಯದಲ್ಲಿ ಜಮೀನು ಕಬಳಿಕೆಯ ಗಂಭೀರ ಸಮಸ್ಯೆಯನ್ನು ಬಹಿರಂಗಪಡಿಸಿದೆ.
