ರಾಜಗೋಪಾಲನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಎಡ್ವಿನ್ ಎಂಬ ಗೃಹಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹಣಕಾಸಿನ ವಿಚಾರವಾಗಿ ಪತಿ ಮಣಿಯೇ ಹತ್ಯೆ ಮಾಡಿರುವುದಾಗಿ ಮೃತಳ ಕುಟುಂಬಸ್ಥರು ಆರೋಪಿಸಿದ್ದು, ಮೈಮೇಲಿನ ಗಾಯದ ಗುರುತುಗಳು ಮತ್ತು ಪುಡಿಯಾದ ಬಳೆಗಳು ಅನುಮಾನಕ್ಕೆ ಕಾರಣವಾಗಿವೆ.
ಬೆಂಗಳೂರು, (ನ.18): ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಅಪಾರ್ಟ್ ಮೆಂಟ್‌ನಲ್ಲಿ ಗೃಹಿಣಿಯೋರ್ವಳು ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತಳು ಎಡ್ವಿನ್ (28) ಎಂದು ಗುರುತಿಸಲಾಗಿದ್ದು, ಆಕೆಯೇ ಪತಿ ಮಣಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಮೈಮೇಲೆ ಗಾಯ, ಕೈಬಳೆ ಪುಡಿ ಪುಡಿ:
ಕಳೆದ 7 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದ ಈ ದಂಪತಿಗಳ ನಡುವೆ ಹಣಕಾಸು ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆಯ ದಿನವೂ ಹಣದ ವಿಷಯಕ್ಕೆ ತೀವ್ರ ಜಗಳ ನಡೆದಿದ್ದು, ಆ ಸಂದರ್ಭದಲ್ಲಿ ಪತಿ ಮಣಿಯೇ ಎಡ್ವಿನ್ ಅವರನ್ನು ಹತ್ಯೆ ಮಾಡಿ ನಂತರ ನೇಣುಗೆ ಹಾಕಿ ಆತ್ಮ೧ಹತ್ಯೆ ಎಂದು ಕತೆ ಕಟ್ಟಿರುವ ಶಂಕೆ ವ್ಯಕ್ತವಾಗಿದೆ. ಅದಕ್ಕೆ ಇಂಬು ಕೊಡುವಂತೆ ಮೃತಳ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿದ್ದು, ಆಕೆ ಧರಿಸಿದ್ದ ಕೈಯ ಬಳೆಗಳು ಸಂಪೂರ್ಣ ಪುಡಿ ಪುಡಿಯಾಗಿರುವುದು ಹತ್ಯೆಯಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಎಡ್ವಿನ್ ಸಾವು ಕೊಲೆಯೋ? ಆತ್ಮಹ೧ಹತ್ಯೆಯೋ?
ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ರಾಜಗೋಪಾಲನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆಯಿಂದ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಗೃಹಿಣಿಯ ಸಾವು ಆತ್ಮ೧ಹತ್ಯೆಯೋ, ಕೊಲೆಯೋ ಮುಂದಿನ ತನಿಖೆಯಿಂದ ಸತ್ಯ ಬಯಲಾಗಲಿದೆ.
