ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗೆ ಆಯ್ಕೆ ಮಾಡದ ಕಾರಣಕ್ಕೆ ಪುದುಚೇರಿ ಅಂಡರ್-19 ತಂಡದ ಕೋಚ್ ಎಸ್. ವೆಂಕಟರಮನ್ ಮೇಲೆ ಮೂವರು ಕ್ರಿಕೆಟಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ತಲೆಗೆ ಗಂಭೀರ ಗಾಯಗಳಾಗಿದ್ದು, ಕೋಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪುದುಚೇರಿ: ಕ್ರಿಕೆಟ್ ಒಂದು ಜಂಟಲ್‌ಮನ್ಸ್ ಗೇಮ್ ಎಂದು ಕರೆಯಲಾಗುತ್ತದೆ. ಆದರೆ ಅದಕ್ಕೆ ಅಪವಾದ ಎನ್ನುವಂತೆ ಕೆಲವೊಮ್ಮೆ ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವಂತ ಘಟನೆಗಳು ನಡೆಯುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದ್ದು, ಕ್ರಿಕೆಟ್ ಪ್ರೇಮಿಗಳು ನಿಜಕ್ಕೂ ನಾಚಿಕೆಯಿಂದ ತಲೆತಗ್ಗಿಸುವಂತೆ ಆಗಿದೆ. ಇದೀಗ ಕ್ರಿಕೆಟ್ ಅಸೋಸಿಯೇಷನ್ ಆಫ್ ಪುದುಚೆರಿಯಲ್ಲಿ ನಡೆದಂತ ಒಂದು ಘಟನೆ ದೇಶಾದ್ಯಂತ ಸದ್ದು ಮಾಡುತ್ತಿದೆ. ಪುದುಚೆರಿ ಅಂಡರ್-19 ಕ್ರಿಕೆಟ್ ತಂಡದ ಹೆಡ್ ಕೋಚ್ ಮೇಲೆ ಮೂವರು ಕ್ರಿಕೆಟಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಹೆಡ್ ಕೋಚ್ ತಲೆಯ ಭಾಗದಲ್ಲಿ 20 ಸ್ಟಿಚ್ ಹಾಕಲಾಗಿದ್ದು, ಭುಜಕ್ಕೂ ಬಲವಾದ ಪೆಟ್ಟು ಬಿದ್ದಿದೆ. ಈ ಘಟನೆಯ ಸಂಬಂಧ ಇದೀಗ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಅಷ್ಟಕ್ಕೂ ಆಗಿದ್ದೇನು?
ಹೌದು, ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಗೆ ತಮ್ಮನ್ನು ಆಯ್ಕೆ ಮಾಡಿಲ್ಲ ಎಂದು ಪುದುಚೇರಿ ಅಂಡರ್-19 ತಂಡದ ಮುಖ್ಯ ಕೋಚ್ ಎಸ್.ವೆಂಕಟರಮನ್ ಮೇಲೆ ಅಲ್ಲಿನ ಸ್ಥಳೀಯ ಕ್ರಿಕೆಟಿಗರು ಸೋಮವಾರ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ತಲೆ, ಹಣೆ ಹಾಗೂ ಭುಜದ ಗಾಯಕ್ಕೆ ತುತ್ತಾಗಿರುವ ಕೋಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹಣೆಗೆ 20 ಹೊಲಿಗೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೆಂಕಟರಮನ್ ದೂರು ಆಧರಿಸಿ ಮೂವರು ಕ್ರಿಕೆಟಿಗರಾದ ಕಾರ್ತಿಕೇಯನ್ ಜಯಸುಂದರಮ್, ಎ.ಅರವಿಂದರಾಜ್, ಸಂತೋಷ್ ಕುಮಾರನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಮೂವರೂ ಪುದುಚೇರಿ ಪರ ರಣಜಿ ಪಂದ್ಯಗಳನ್ನಾಡಿದ್ದಾರೆ.
ಈ ಘಟನೆಯು ಸೋಮವಾರ ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ನಡೆದಿದೆ. CAP ಕಾಂಪ್ಲೆಕ್ಸ್‌ನಲ್ಲಿದ್ದ್ ಕೋಚ್ ಮೇಲೆ ಈ ಮೂವರು ಕ್ರಿಕೆಟಿಗರು ಏಕಾಏಕಿ ದಾಳಿ ನಡೆಸಿದ್ದಾರೆ. ಈ ಘಟನೆಯ ಸಂಬಂಧ ಸೆದಾರ್‌ಪೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇನ್ನು ಪುದುಚೇರಿ ಅಂಡರ್-19 ತಂಡದ ಮುಖ್ಯ ಕೋಚ್ ಎಸ್.ವೆಂಕಟರಮನ್ ಅವರ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದೆ. ಆದರೆ ಚಿಕಿತ್ಸೆಯ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಸಬ್‌ಇನ್‌ಸ್ಪೆಕ್ಟರ್ ಆರ್ ರಾಜೇಶ್ ಖಚಿತಪಡಿಸಿದ್ದಾರೆ.
ಹೆಡ್‌ಕೋಚ್ ವೆಂಕಟರಾಮನ್ ಕೊಟ್ಟ ದೂರಿನಲ್ಲಿ ಏನಿದೆ?
ಪೊಲೀಸ್ ದೂರಿನಲ್ಲಿ, ಎಸ್. ವೆಂಕಟರಾಮನ್ ಮೂವರು ದಾಳಿಕೋರರು ಯಾರು ಎನ್ನುವ ಸ್ಪಷ್ಟ ಮಾಹಿತಿ ನೀಡಿದ್ದಾರೆ. ಹಿರಿಯ ಆಟಗಾರ ಕಾರ್ತಿಕೇಯನ್ ಜಯಸುಂದರಂ, ಪ್ರಥಮ ದರ್ಜೆ ಆಟಗಾರ ಎ. ಅರವಿಂದರಾಜ್ ಮತ್ತು ಎಸ್. ಸಂತೋಷ್ ಕುಮಾರನ್ ಅವರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪುದುಚೇರಿ ಕ್ರಿಕೆಟರ್ಸ್ ಫೋರಂನ ಕಾರ್ಯದರ್ಶಿ ಜಿ. ಚಂದ್ರನ್ ಅವರು ಮೂವರನ್ನು ನನ್ನ ಮೇಲೆ ಹಲ್ಲೆ ಮಾಡಲು ಪ್ರಚೋದಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ ಟಿ20 ತಂಡದಿಂದ ಹೊರಗಿಟ್ಟ ನಂತರ ಮೂವರು ಆಟಗಾರರು ತರಬೇತುದಾರರಿಗೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

