ಬೆಸ್ಕಾಂನಲ್ಲಿ ಅಧಿಕಾರಿ ಹುದ್ದೆ ತೋರಿಸಿ 20 ಲಕ್ಷ ಟೋಪಿ ಹಾಕಿದ ಖದೀಮರು!
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ (ಬೆಸ್ಕಾಂ) ಕಾಯಂ ಉದ್ಯೋಗ ಕೊಡಿಸುವುದಾಗಿ ಯುವಕನೊಬ್ಬನನ್ನು ನಂಬಿಸಿ .20 ಲಕ್ಷ ಪಡೆದು ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿದ್ದ ಏಳು ಮಂದಿ ಆರೋಪಿಗಳನ್ನು ಹೈಗ್ರೌಂಡ್‌್ಸ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಜೂ.5) ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ (ಬೆಸ್ಕಾಂ) ಕಾಯಂ ಉದ್ಯೋಗ ಕೊಡಿಸುವುದಾಗಿ ಯುವಕನೊಬ್ಬನನ್ನು ನಂಬಿಸಿ .20 ಲಕ್ಷ ಪಡೆದು ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿದ್ದ ಏಳು ಮಂದಿ ಆರೋಪಿಗಳನ್ನು ಹೈಗ್ರೌಂಡ್‌್ಸ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಲಹಂಕದ ಅಟ್ಟೂರು ಲೇಔಟ್(Yalahanka attooru layout) ನಿವಾಸಿ ಡಿ.ಪ್ರಜ್ವಲ್ (28), ಭರತ್‌ನಗರದ ಎಂ.ಪ್ರವೀಣ್ ಅಲಿಯಾಸ್ ಸೋಮನಕಟ್ಟೆ(28), ಕುಣಿಗಲ್ ತಾಲ್ಲೂಕಿನ ಕೆಂಪನಹಳ್ಳಿಯ ಕೆ.ಪ್ರದೀಪ್ (34), ಯಶವಂತಪುರದ ಎಸ್.ಡಿ. ಪುರುಷೋತ್ತಮ್ (49), ಜಾಲಹಳ್ಳಿಯ ಲೋಹಿತ್(46) ಮತ್ತು ಬೆಳಗಾವಿಯ ಟೀಚರ್ಸ್ ಕಾಲೋನಿಯ ಶಿವಪ್ರಸಾದ್ ಚನ್ನಣ್ಣನವರ್ (28), ವಿಜಯಕುಮಾರ್ ಶಿವಲಿಂಗಪ್ಪ ಚನ್ನಣ್ಣನವರ್ (57) ಬಂಧಿತರು. ಆರೋಪಿಗಳಿಂದ ಬೆಸ್ಕಾಂ ಅಧಿಕಾರಿಗಳ ಹೆಸರಿನ ನಕಲಿ ಸೀಲ್, ಆದೇಶ ಪ್ರತಿ, ಯುವಕರ ಅಸಲಿ ಅಂಕಪಟ್ಟಿ, ನಕಲಿ ನೇಮಕಾತಿ ಪತ್ರ, ಲ್ಯಾಪ್‌ಟಾಪ್, ಪ್ರಿಂಟರ್, ಫಾರ್ಚುನರ್ ಕಾರು, .5.50 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಅಪರಿಚಿತನಿಗೆ ವಿದ್ಯುತ್ ಶಾಕ್, ರಕ್ಷಿಸಲು ಹೋದ ವ್ಯಕ್ತಿ ಸಾವು
ಈ ಆರೋಪಿಗಳು ಬೆಳಗಾವಿ ಜಿಲ್ಲೆ ಹುಕ್ಕೇರಿ ಬಳಿಯ ತಿಲಕವಾಡಿ ನಿವಾಸಿ ವೈಭವ ವೆಂಕಟೇಶ ಕುಲಕರ್ಣಿ ಎಂಬಾತನಿಗೆ ಕಿರಿಯ ಸಹಾಯಕ ಹುದ್ದೆಗೆ ನಕಲಿ ನೇಮಕಾತಿ ಪತ್ರ ಕೊಟ್ಟು .20 ಲಕ್ಷ ಪಡೆದು ವಂಚಿಸಿದ್ದರು. ಈ ಸಂಬಂಧ ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಕೆ.ಪಿ.ಸೋಮಶೇಖರ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ನಿರುದ್ಯೋಗಿಗಳಿಗೆ ಬಲೆ
ಆರೋಪಿಗಳು ಸರ್ಕಾರಿ ನೌಕರರಿಗೆ ಸೇರಲು ಬಯಸುವ ಉದ್ಯೋಗಾಂಕ್ಷಿಗಳನ್ನು ಸಂಪರ್ಕಿಸಿ ಅಡ್ಡದಾರಿಯಲ್ಲಿ ಸರ್ಕಾರಿ ನೌಕರಿ ಕೊಡಿಸುವ ಆಸೆ ಹುಟ್ಟಿಸುತ್ತಿದ್ದರು. ಬಂಧಿತ ಆರೋಪಿಗಳ ಪೈಕಿ ಪ್ರವೀಣ್, ಪ್ರದೀಪ್, ಪುರುಷೋತ್ತಮ್ ಹಾಗೂ ಲೋಹಿತ್ ಉದ್ಯೋಗಾಕಾಂಕ್ಷಿಗಳಿಗೆ ಬಲೆ ಬೀಸುತ್ತಿದ್ದರು. ಬಳಿಕ ಉದ್ಯೋಗಕ್ಕೆ ಸೇರಲು ಬಯಸುವವರ ಬಳಿ ಹಣದ ವ್ಯವಹಾರ ಕುದುರಿಸಿ, ನಕಲಿ ನೇಮಕಾತಿ ಪತ್ರ ಕೊಟ್ಟು ಹಣ ಪಡೆದು ವಂಚಿಸುತ್ತಿದ್ದರು.
ಬೆಳಗಾವಿ ಮೂಲದ ವೈಭವ ವೆಂಕಟೇಶ್‌ಗೆ ಆರೋಪಿಗಳು ಬೆಸ್ಕಾಂನಲ್ಲಿ ಗುತ್ತಿಗೆ ಆಧಾರದಡಿ ನೌಕರಿ ಕೊಡಿಸುವುದಾಗಿ ಆಸೆ ತೋರಿಸಿ .2 ಲಕ್ಷ ಪಡೆದುಕೊಂಡಿದ್ದರು. ಬಳಿಕ ಕಿರಿಯ ಸಹಾಯಕ ಹುದ್ದೆಯನ್ನು ಕಾಯಂ ಆಗಿ ಕೊಡಿಸುವುದಾಗಿ ನಂಬಿಸಿ .20 ಲಕ್ಷಕ್ಕೆ ವ್ಯವಹಾರ ಕುದುರಿಸಿದ್ದರು. ನಂತರ ಹಂತ ಹಂತವಾಗಿ ವೈಭವ್ ಕಡೆಯಿಂದ ಹಣ ಪಡೆದುಕೊಂಡು ಹಂಚಿಕೊಂಡಿದ್ದರು. ಆರೋಪಿ ಡಿ.ಪ್ರಜ್ವಲ್‌ಗೆ ಸ್ವಲ್ಪ ಹಣ ಕೊಟ್ಟು ಆತನ ಕಡೆಯಿಂದ ನಕಲಿ ನೇಮಕಾತಿ ಪ್ರಮಾಣ ಪತ್ರವನ್ನು ಸಿದ್ಧಪಡಿಸಿ ವೈಭವ್‌ಗೆ ನೀಡಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.
ಉದ್ಯೋಗಕ್ಕೆ ಸೇರ್ಪಡೆಗೆ ತೆರಳಿದ್ದಾಗ ಬೆಳಕಿಗೆ
ಕಾಯಂ ಉದ್ಯೋಗ ನೇಮಕಾತಿ ಪತ್ರ ಪಡೆದ ವೈಭವ್ ವೆಂಕಟೇಶ್, ಮೇ 22ರಂದು ಮಾಧವನಗರದ ಬೆಂಗಳೂರು ಉತ್ತರ ವೃತ್ತದ ಬೆಸ್ಕಾಂ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ನೇಮಕಾತಿ ಪತ್ರ ನೀಡಿದ್ದಾನೆ. ಈ ವೇಳೆ ನೇಮಕಾತಿ ಪತ್ರ ಪರಿಶೀಲನೆ ಮಾಡಿದಾಗ ಅದು ನಕಲಿ ನೇಮಕಾತಿ ಪತ್ರ ಎಂಬುದು ಗೊತ್ತಾಗಿದೆ. ಈ ಬಗ್ಗೆ ವೈಭವ್‌ನನ್ನು ಪ್ರಶ್ನೆ ಮಾಡಿದಾಗ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ಮಾಹಿತಿ ಆಧರಿಸಿ ಬೆಸ್ಕಾಂ ಅಧಿಕಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಟಿಂಡರ್‌ನಲ್ಲಿ ಜೊತೆಯಾದ ಸ್ನೇಹಿತ, 4.5 ಲಕ್ಷ ಕಳೆದುಕೊಂಡ ಬೆಂಗ್ಳೂರು ಯುವತಿ!
ವಂಚನೆ ಆಗಿದ್ದರೆ ದೂರು ಕೊಡಿ
ಕಾಯಂ ಉದ್ಯೋಗದ ಆಸೆಗೆ ಬಂಧಿತ ಆರೋಪಿಗಳಿಗೆ ಹಣ ಕೊಟ್ಟು ವಂಚನೆಗೆ ಒಳಗಾಗಿದವರು ಯಾರಾದರೂ ಇದ್ದಲ್ಲಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ಹೈಗ್ರೌಂಡ್‌್ಸ ಠಾಣೆ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ನಕಲಿ ನೇಮಕಾತಿ ದಂಧೆಯಲ್ಲಿ ಬೆಸ್ಕಾಂ ಅಧಿಕಾರಿಗಳ ಕೈವಾಡದ ಬಗ್ಗೆಯೂ ಸೇರಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.