JDS leader son attacks family ಬೆಳಗಾವಿಯ ಇಟ್ನಾಳ ಗ್ರಾಮದಲ್ಲಿ ಜಮೀನು ವಿವಾದ, ಜೆಡಿಎಸ್ ಮುಖಂಡ ಪ್ರತಾಪರಾವ್ ಪಾಟೀಲ್ ಅವರ ಪುತ್ರ ಶಿವರಾಜ್ ಪಾಟೀಲ್ ನೇತೃತ್ವದ ಗುಂಪು ಡಾಂಗೆ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ. ಮಹಿಳೆ, ವೃದ್ಧರಿಗೆ ಗಂಭೀರ ಗಾಯ. 35ಕ್ಕೂ ಜನರ ವಿರುದ್ಧ ಎಫ್ಐಆರ್.
ಬೆಳಗಾವಿ, (ಅ.13) ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ್ ಪಾಟೀಲ್ ಅವರ ಪುತ್ರ ಶಿವರಾಜ್ ಪಾಟೀಲ್ ಸೇರಿದಂತೆ 35ಕ್ಕೂ ಹೆಚ್ಚು ಜನರ ವಿರುದ್ಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಘಟನೆಯ ಭಯಾನಕ ದೃಶ್ಯಗಳು ರಾಯಲ್ ಸೀಮೆಯ ಸಿನಿಮಾ ಸ್ಟೈಲ್‌ನಂತೆ ನೆನಪಿಸುವಂತಿವೆ .
ಘಟನೆ ವಿವರ:
ಅಕ್ಟೋಬರ್ 06 ರಂದು ಇಟ್ನಾಳ ಗ್ರಾಮದ ಸರ್ವೇ ನಂಬರ್ 43/6 ಮತ್ತು 202/2 ಜಮೀನು ಕಬ್ಜೆಗೆ ಸಂಬಂಧಿಸಿದ ವಿವಾದದಿಂದ ಈ ಘಟನೆ ಆರಂಭವಾಗಿದೆ. ಶಿವರಾಜ್ ಪಾಟೀಲ್ ನೇತೃತ್ವದ ಗುಂಪು ಟ್ರಾಕ್ಟರ್ ಮತ್ತು ಕ್ರೂಸರ್‌ಗಳಲ್ಲಿ ಬಂದು, ಬಡಿಗೆ, ಕೋಲುಗಳು ಹಾಗೂ ಮಾರಕಾಸ್ತ್ರಗಳೊಂದಿಗೆ ಡಾಂಗೆ ಕುಟುಂಬದ ಮೇಲೆ ದಾಳಿ ಮಾಡಿದ ಆರೋಪವಿದೆ. ಈ ದಾಳಿಯಲ್ಲಿ ವಿವಾಹಿತ ಮಹಿಳೆ ಅಶ್ವಿನಿ ಸದಾಶಿವ ಡಾಂಗೆ ಮತ್ತು ವೃದ್ಧ ರಾಮಪ್ಪ ಡಾಂಗೆ ಅವರಿಗೆ ಗಂಭೀರ ಗಾಯಗಳಾಗಿವೆ. ಅಶ್ವಿನಿಯವರ ಎರಡು ಕೈ ಮತ್ತು ಒಂದು ಕಾಲಿನ ಮೂಳೆ ಮುರಿತವಾಗಿದ್ದು, ರಾಮಪ್ಪನವರ ಎರಡೂ ಕಾಲುಗಳ ಮೂಳೆಗಳು ಮುರಿದಿವೆ. ಗಾಯಾಳುಗಳು ಪ್ರಸ್ತುತ ಗೋಕಾಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೊಬೈಲ್‌ನಲ್ಲಿ ಸೆರೆಯಾದ ದೃಶ್ಯ:
ಕಲ್ಲು ತೂರಾಟ, ಬಡಿಗೆ, ಕೋಲುಗಳೊಂದಿಗೆ ಓಡಾಡುವ ಭಯಾನಕ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ. ಈ ದೃಶ್ಯಗಳು ಸಿನಿಮಾದಲ್ಲಿನ ಹೊಡೆದಾಟದ ದೃಶ್ಯಗಳನ್ನೇ ಮೀರಿಸುವಂತಿವೆ
ಪೊಲೀಸರ ಮೇಲೆ ಆರೋಪ:
ಘಟನೆ ನಡೆದ ದಿನ ದೂರು ನೀಡಲು ಹೋದಾಗ ಹಾರೂಗೇರಿ ಪೊಲೀಸರು ಕೇಸ್ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ನೊಂದ ಕುಟುಂಬ ಆರೋಪಿಸಿದೆ. ಆದರೆ, ಸಿಎಂ ಸಿದ್ದರಾಮಯ್ಯನವರ ಭೇಟಿಯ ನಂತರ ಮತ್ತು ಅವರೇ ಸ್ವತಃ ಫೋನ್ ಮಾಡಿದ ಬಳಿಕವಷ್ಟೇ ಅಕ್ಟೋಬರ್ 07 ರಂದು ಎಫ್ಐಆರ್ ದಾಖಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಎಫ್ಐಆರ್ ವಿವರ:
ಶಿವರಾಜ್ ಪಾಟೀಲ್ ಎ1 ಆರೋಪಿಯಾಗಿದ್ದು, ಲಕ್ಷ್ಮಣ ಹೊನ್ನಳ್ಳಿ ಕುಟುಂಬದ ಸದಸ್ಯರು ಸೇರಿದಂತೆ 35ಕ್ಕೂ ಹೆಚ್ಚು ಜನರ ವಿರುದ್ಧ ದೂರು ದಾಖಲಾಗಿದೆ. ಆದರೆ, ಕೇವಲ ಇಬ್ಬರು ಆರೋಪಿಗಳನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳ ಬಂಧನಕ್ಕೆ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪವಿದೆ. ಈ ಘಟನೆಯಿಂದ ಇಟ್ನಾಳ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
