Asianet Suvarna News Asianet Suvarna News

ಬಿಬಿಎಂಪಿ ಮಹಾ ಅಕ್ರಮ, ಅಸ್ತಿತ್ವದಲ್ಲೇ ಇಲ್ಲದ 27 ಸಹಕಾರಿ ಸಂಘಗಳಿಗೆ ₹18 ಕೋಟಿ ಹಣ ವರ್ಗಾವಣೆ!

ಅಸ್ತಿತ್ವದಲ್ಲಿ ಇಲ್ಲದಿರುವ ಸಹಕಾರಿ ಸಂಘ ಹಾಗೂ ಕೋ ಆಪರೇಟಿವ್‌ ಸೊಸೈಟಿಗಳಿಗೆ ಅಕ್ರಮವಾಗಿ ಬಿಬಿಎಂಪಿಯಿಂದ ಹಣ ವರ್ಗಾವಣೆಗೆ ಪ್ರಕರಣದಲ್ಲಿ ಪಶ್ಚಿಮ ವಲಯದ ವ್ಯಾಪ್ತಿಯಲ್ಲಿ ಬರೋಬ್ಬರಿ 18 ಕೋಟಿ ರು. ಬಿಡುಗಡೆಯಾಗಿದೆ.

BBMP big scam many Crores transferred to non existent cooperative bank gow
Author
First Published Jul 6, 2024, 2:50 PM IST

ವಿಶ್ವನಾಥ ಮಲೇಬೆನ್ನೂರು 

ಬೆಂಗಳೂರು: ನಗರದಲ್ಲಿ ಅಸ್ತಿತ್ವದಲ್ಲಿ ಇಲ್ಲದಿರುವ ಸಹಕಾರಿ ಸಂಘ ಹಾಗೂ ಕೋ ಆಪರೇಟಿವ್‌ ಸೊಸೈಟಿಗಳಿಗೆ ಅಕ್ರಮವಾಗಿ ಬಿಬಿಎಂಪಿಯಿಂದ ಹಣ ವರ್ಗಾವಣೆಗೆ ಪ್ರಕರಣದಲ್ಲಿ ಪಶ್ಚಿಮ ವಲಯದ ವ್ಯಾಪ್ತಿಯಲ್ಲಿ ಬರೋಬ್ಬರಿ 18 ಕೋಟಿ ರು. ಬಿಡುಗಡೆಯಾಗಿದೆ.

ಬಿಬಿಎಂಪಿ ಪಶ್ಚಿಮ ವಲಯದಲ್ಲಿ 2019-20 ಹಾಗೂ 2020-21ನೇ ಸಾಲಿನಲ್ಲಿ ಸೊಸೈಟಿ ಹಾಗೂ ಸಹಕಾರಿ ಸಂಘಗಳಿಗೆ ಕಲ್ಯಾಣ ಯೋಜನೆಯಡಿ ಪಾಲಿಕೆಯ ಕೋಟ್ಯಾಂತರ ರು. ಅಕ್ರಮವಾಗಿ ವರ್ಗಾವಣೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್‌ ಮಹಾ ನಿರ್ದೇಶಕರು, ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಬಿಬಿಎಂಪಿ ಪಶ್ಚಿಮ ವಲಯದಲ್ಲಿ 9 ಅಧಿಕಾರಿಗಳ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡುವಂತೆ ಕೋರಿದ್ದರು.

ಅವಿವಾಹಿತ ಯುವಕರಿಗೆ ಸಿಹಿ ಸುದ್ದಿ, ರಾಜ್ಯ ಸರ್ಕಾರದಿಂದ ಜೀವನ ಸಂಗಮ ಪೋರ್ಟಲ್‌ ಆರಂಭ!

ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ ಆಡಳಿತ ವಿಭಾಗದ ಉಪ ಆಯುಕ್ತರು, ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯದೊಂದಿಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಸೂಚಿಸಿದ್ದರು. ಜಂಟಿ ಆಯುಕ್ತರು, ಪಶ್ಚಿಮ ವಲಯದ ಉಪ ನಿಯಂತ್ರಕರಿಗೆ (ಹಣಕಾಸು) ಮಾಹಿತಿ ಒದಗಿಸುವಂತೆ ಸೂಚಿಸಿದ್ದರು. ಅದರಂತೆ ವರದಿ ಸಲ್ಲಿಕೆ ಮಾಡಲಾಗಿದೆ.

ಸೊಸೈಟಿ/ಬ್ಯಾಂಕ್‌ ಗೆ ಹಣ ಬಿಡುಗಡೆ: 2019ರ ಮೇ 21 ರಿಂದ 2021ರ ಜನವರಿ 12ರ ಅವಧಿಯಲ್ಲಿ 27 ಸೊಸೈಟಿ ಮತ್ತು ಬ್ಯಾಂಕ್‌ ಗಳಿಗೆ 18.73 ಕೋಟಿ ರು. ಬಿಡುಗಡೆ ಮಾಡಲಾಗಿದೆ. 86 ಬಾರಿ ವಿವಿಧ ಮೊತ್ತದ ಹಣವನ್ನು 27 ಸೊಸೈಟಿ ಮತ್ತು ಬ್ಯಾಂಕ್‌ ಗಳಿಗೆ ವರ್ಗಾವಣೆ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರಿಗೆ ಬರಬೇಕಿದ್ದ ವಿಮಾನ ದೆಹಲಿಯಲ್ಲಿ ಲಾಕ್, 12 ಗಂಟೆ ವಿಮಾನದೊಳಗೆ ಹಸಿವಿನಿಂದ ಪರದಾಡಿದ ಪ್ರಯಾಣಿಕರು!

4.5 ಕೋಟಿಗೆ ಫಲಾನುಭವಿಗಳೇ ಇಲ್ಲ: ಬಿಡುಗಡೆಯಾದ 18.73 ಕೋಟಿ ರು. ಹಣದ ಪೈಕಿ ಸುಮಾರು 14 ಕೋಟಿ ರು. ಸಹಾಯಧನವನ್ನು 1,574 ಫಲಾನುಭವಿಗಳಿಗೆ ಹಂಚಿಕೆ ಮಾಡಿರುವ ಅಂಕಿ ಅಂಶ ನೀಡಲಾಗಿದೆ. ಆದರೆ, ಬಾಕಿ ಉಳಿದ 4.5 ಕೋಟಿ ರು. ಎಷ್ಟು ಫಲಾನುಭವಿಗಳಿಗೆ ಬಿಡುಗಡೆಯಾಗಿದೆ ಎಂಬ ಅಂಕಿ ಅಂಶ ವರದಿಯಲ್ಲಿ ಉಲ್ಲೇಖವಾಗಿಲ್ಲ.

ಜಂಟಿ ಆಯುಕ್ತರು ಮತ್ತು ಕಲ್ಯಾಣಾಧಿಕಾರಿ ಜವಾಬ್ದಾರಿ: ಫಲಾನುಭವಿ ಪಟ್ಟಿ, ಬ್ಯಾಂಕ್‌ ವಿವರ, ಸಾಲ ನೀಡಿದ ಬ್ಯಾಂಕ್‌ ಇತ್ಯಾದಿಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಜಂಟಿ ಆಯುಕ್ತರು ಮತ್ತು ಕಲ್ಯಾಣಾಧಿಕಾರಿ ಹೊಂದಿರುತ್ತಾರೆ. ಉಪ ನಿಯಂತ್ರಕರಿಗೆ (ಹಣಕಾಸು) ಯಾವುದೇ ಫಲಾನುಭವಿ ಪಟ್ಟಿ ಮತ್ತು ಬ್ಯಾಂಕ್‌ ವಿವರ ಬದಲಾವಣೆ ಮಾಡುವ ಅವಕಾಶ ಇರುವುದಿಲ್ಲ. ಹಣ ಪಾವತಿ ಬಳಿಕ ಎಲ್ಲ ದಾಖಲೆಗಳನ್ನು ಪಶ್ಚಿಮ ವಲಯದ ಕಲ್ಯಾಣಾಧಿಕಾರಿ ಕಚೇರಿಗೆ ಹಿಂದಿರುಗಿಸಲಾಗಿರುತ್ತದೆ. ಹೆಚ್ಚಿನ ವಿವರವನ್ನು ಪಶ್ಚಿಮ ವಲಯದ ಕಲ್ಯಾಣಾಧಿಕಾರಿಯಿಂದ ಪಡೆಯಬಹುದಾಗಿರುತ್ತದೆ ಎಂದು ಪಶ್ಚಿಮ ವಲಯದ ಉಪ ನಿಯಂತ್ರಕರು (ಹಣಕಾಸು) ತಿಳಿಸಿದ್ದಾರೆ.

ಫಲಾನುಭವಿಗಳಿಗೆ ಹುಡುಕಾಟ: ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕಚೇರಿಯಿಂದ ವರದಿ ಕೇಳಿರುವ ಹಿನ್ನೆಲೆಯಲ್ಲಿ ಪಶ್ಚಿಮ ವಲಯದ ಅಧಿಕಾರಿಗಳು ಹಣ ಬಿಡುಗಡೆಯಾದ ಸೊಸೈಟಿ, ಸಹಕಾರಿ ಸಂಘಗಳು ಅಸ್ತಿತ್ವದಲ್ಲಿ ಇವೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಪರಿಶೀಲನೆ ಆರಂಭಿಸಿದ್ದಾರೆ. ಜತೆಗೆ, ಸೊಸೈಟಿ ಮತ್ತು ಬ್ಯಾಂಕ್‌ ಗಳಿಗೆ ಸಹಾಯಧನ ಪಡೆದ ಫಲಾನುಭವಿಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.

ಹಣ ವರ್ಗಾವಣೆಯಾದ ಸೊಸೈಟಿ, ಸಹಕಾರಿ ಸಂಘಗಳು ಅಸ್ತಿತ್ವದಲ್ಲಿ ಇವೆಯೇ ಎಂಬುದನ್ನು ಪರಿಶೀಲನೆ ಮಾಡಲಾಗುತ್ತಿದೆ. ಅದಕ್ಕೆ ಸಂಬಂಧಿಸಿದ ವರದಿ ಸಲ್ಲಿಕೆಯಾಗಿದೆ. ಅಗತ್ಯವಿದ್ದರೆ, ಫಲಾನುಭವಿಗಳಿಗೆ ಹಣ ತಲುಪಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು.

ಸುರಳ್ಕರ್ ವಿಕಾಸ್ ಕಿಶೋರ್, ವಿಶೇಷ ಆಯುಕ್ತರು, ಬಿಬಿಎಂಪಿ ಕಲ್ಯಾಣ ವಿಭಾಗ

Latest Videos
Follow Us:
Download App:
  • android
  • ios