ಕೋಲಾರ, (ಜುಲೈ.09): ವಿವಾದಿತ ಜಮೀನಿನ ಸರ್ವೆ ಕಾರ್ಯಕ್ಕೆ ಹೋಗಿದ್ದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಳವಂಚಿ ಗ್ರಾಮದಲ್ಲಿ ತಹಶೀಲ್ದಾರ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಬಿ.ಕೆ.ಚಂದ್ರಮೌಳೇಶ್ವರ (53)  ಕೊಲೆಯಾದ ತಹಶೀಲ್ದಾರ್‌. ದೊಡ್ಡಕಳವಂಚಿ ಗ್ರಾಮ ನಿವಾಸಿ ವೆಂಕಟಪತಿ ಎಂಬಾತ ಈ ಕೃತ್ಯ ಎಸಗಿದ್ದಾನೆ. ನಿವೃತ್ತ ಶಿಕ್ಷಕನಾಗಿರುವ ಆರೋಪಿ ವೆಂಕಟಾಚಲಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಹಶೀಲ್ದಾರ್‌ ಚಂದ್ರಮೌಳೇಶ್ವರ ಬಂಗಾರಪೇಟೆ ತಾಲ್ಲೂಕಿನ ತೊಪ್ಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳವಂಚಿ ಗ್ರಾಮದ ರಾಮಮೂರ್ತಿ ಮತ್ತು ವೆಂಕಟಾಚಲಪತಿ ಎಂಬುವರ ನಡುವೆ ಸರ್ವೆ ನಂಬರ್‌ 5/4ರ ಜಮೀನಿನ ವಿಚಾರವಾಗಿ ವಿವಾದವಿತ್ತು. ಈ ಸಂಬಂಧ ರಾಮಮೂರ್ತಿ ತಹಶೀಲ್ದಾರ್‌ ಕಚೇರಿಗೆ ಅರ್ಜಿ ಸಲ್ಲಿಸಿ ಜಮೀನಿನ ಸರ್ವೆ ಮಾಡುವಂತೆ ಕೋರಿದ್ದರು.

ಬಂಧಿಸಲು ಹೋದ ಪೊಲೀಸರ ಮೇಲೆ ದರೋಡೆಕೋರರ ಹಲ್ಲೆ

ಹೀಗಾಗಿ ತಹಶೀಲ್ದಾರ್‌ ಚಂದ್ರಮೌಳೇಶ್ವರ ಸಿಬ್ಬಂದಿಯೊಂದಿಗೆ ಸರ್ವೆ ಮಾಡಲು ಕಳವಂಚಿ ಗ್ರಾಮದ ವಿವಾದಿತ ಜಮೀನಿಗೆ ಹೋಗಿದ್ದರು. ಸರ್ವೆ ಕಾರ್ಯಕ್ಕೆ ಅಡ್ಡಿಪಡಿಸಿದ ವೆಂಕಟಾಚಲಪತಿ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದಾನೆ. ಅಲ್ಲದೇ, ಅರ್ಜಿದಾರರು ಮತ್ತು ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ವಿರೋಧದ ನಡುವೆಯೂ ಅಧಿಕಾರಿಗಳು ಪೊಲೀಸ್‌ ಭದ್ರತೆಯಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಿದರು.

ಬಳಿಕ ತಹಶೀಲ್ದಾರ್‌ ತಮ್ಮ ವಾಹನದ ಬಳಿ ಹೋಗಿ ಸ್ಥಳದಿಂದ ನಿರ್ಗಮಿಸುವ ಯತ್ನದಲ್ಲಿದ್ದರು. ಆಗ ಜಮೀನಿನ ದಾಖಲೆಪತ್ರ ತೋರಿಸುವ ನೆಪದಲ್ಲಿ ವಾಹನದ ಬಳಿಗೆ ಹೋದ ವೆಂಕಟಾಚಲಪತಿ ದಾಖಲೆಪತ್ರಗಳ ಜತೆ ಪ್ಲಾಸ್ಟಿಕ್‌ ಕವರ್‌ನಲ್ಲಿ ಅಡಗಿಸಿ ಇಟ್ಟಿಕೊಂಡಿದ್ದ ಚಾಕು ಹೊರ ತೆಗೆದು ತಹಶೀಲ್ದಾರ್‌ ಎದೆಗೆ ಇರಿದಿದ್ದಾನೆ.

ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದ ತಹಶೀಲ್ದಾರ್‌ನನ್ನು ಆಂಬುಲೆನ್ಸ್‌ನಲ್ಲಿ ಜಾಲಪ್ಪ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದರು.  ಈ ಬಗ್ಗೆ ಕಾಮಸಮುದ್ರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

 ಸಿಎಂ ಖಂಡನೆ
ತಹಶೀಲ್ದಾರ್‌ ಚಂದ್ರಮೌಳೇಶ್ವರ ಕೊಲೆ ಟ್ವಿಟ್ಟರ್‌ನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಈ ಘಟನೆಯನ್ನು ಖಂಡಿಸಿದ್ದಾರೆ.  ಬಂಗಾರಪೇಟೆ ತಾಲ್ಲೂಕಿನ ಕಳವಂಚಿ ಗ್ರಾಮದ ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ, ತಹಶೀಲ್ದಾರರಾದ ಶ್ರೀ ಚಂದ್ರಮೌಳೇಶ್ವರ್ ಅವರು ಸರ್ವೇ ಕಾರ್ಯಕ್ಕೆ ಹೋದ ಸಂದರ್ಭದಲ್ಲಿ  ವ್ಯಕ್ತಿಯೊಬ್ಬ ಅವರನ್ನು ಚಾಕುವಿನಿಂದ ಇರಿದು ಸಾಯಿಸಿರುವುದು ಅತ್ಯಂತ ವಿಷಾದನೀಯ ಎಂದಿದ್ದಾರೆ. ಅಲ್ಲದೇ ಆರೋಪಿಗಳ ಮೇಲೆ ಕಾನೂನು ಅಡಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ತಹಶೀಲ್ದಾರ್‌ಗೆ  ಸಿಎಂ ಸಂತಾಪ
ದೇವರು, ಚಂದ್ರಮೌಳೇಶ್ವರ್ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ಆದ ಹಾನಿ ಮತ್ತು ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ. ಮೃತರ ಅಂತ್ಯ ಕ್ರಿಯೆಯನ್ನು ಪೊಲೀಸ್ ಗೌರವಗಳೊಂದಿಗೆ ನೆರವೇರಿಸಲು, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಲು ಸೂಚಿಸಲಾಗಿದೆ ಎಂದು ಸಿಎಂ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಫೋಟೋ: ಕೊಲೆಯಾದ ತಹಶೀಲ್ದಾರ್