ರಜತ್ 'ಮಚ್ಚು ರೀಲ್ಸ್': ವಿಡಿಯೋ ಡಿಲೀಟ್ ಮಾಡದ ಪೊಲೀಸರು! 10 ಲಕ್ಷ ವೀಕ್ಷಣೆ!

Synopsis
ನಟ ರಜತ್ ಅವರ ವಿವಾದಾತ್ಮಕ 'ಮಚ್ಚು ರೀಲ್ಸ್' ವಿಡಿಯೋ ಇನ್ನೂ ಇನ್‌ಸ್ಟಾಗ್ರಾಮ್‌ನಿಂದ ಡಿಲೀಟ್ ಆಗಿಲ್ಲ. ಪೊಲೀಸರು ಜೈಲಿಗೆ ಕಳುಹಿಸಿದರೂ ವಿಡಿಯೋ ತೆಗೆಯದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.
ಬೆಂಗಳೂರು (ಏ.15): ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ನಟ ರಜತ್ ಅಲಿಯಾಸ್ ಬುಜ್ಜಿಯ ‘ಮಚ್ಚು ರೀಲ್ಸ್’ ಪ್ರಕರಣ ಇನ್ನೂ ಚರ್ಚೆಯ ಕೇಂದ್ರಬಿಂದುವಾಗಿದೆ.
ಜೈಲಿಗೆ ಹೋಗಿ ಬಂದ್ರೂ ರಜತ್ ಬುದ್ಧಿ ಕಲಿತಿಲ್ಲ ಎಂಬಂತೆ, ಅವರ ವಿವಾದಾತ್ಮಕ ರೀಲ್ಸ್ ವಿಡಿಯೋ ಇನ್ನೂ ಇನ್‌ಸ್ಟಾಗ್ರಾಮ್‌ನಿಂದ ಡಿಲೀಟ್ ಆಗಿಲ್ಲ. 10 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿರುವ ಈ ವಿಡಿಯೋವನ್ನು ಪೊಲೀಸರೂ ಸಹ ಡಿಲಿಟ್ ಮಾಡಿಸದಿರುವುದು ಇನ್ನೂ ಶಾಕಿಂಗ್ ವಿಚಾರನೇ. ರಜತ್ ಮಚ್ಚು ಪ್ರಕರಣದಲ್ಲಿ ಜೈಲಿಗೆ ಹೋಗಿಬಂದ್ರೂ ಇನ್ನೂ ವಿಡಿಯೋ ಟ್ರೆಂಡ್‌ನಲ್ಲೇ ಮುಂದುವರಿದಿದೆ.
ಬಸವೇಶ್ವರ ನಗರ ಪೊಲೀಸರು ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಿ ರಜತ್ ಸೇರಿದಂತೆ ಆರೋಪಿಗಳನ್ನು ಜೈಲಿಗಟ್ಟಿದ್ದರು. ಆದರೆ, ಇಷ್ಟಾದರೂ ವಿಡಿಯೋ ತೆಗೆದುಹಾಕಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಇದು ಪೊಲೀಸರ ಬೇಜವಾಬ್ದಾರಿತನವೋ ನಿಷ್ಕ್ರಿಯತೆಯೋ ನಿರ್ಲಕ್ಷ್ಯವೋ ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.'ಸೆಲೆಬ್ರಿಟಿಗಳಿಗೊಂದು ನ್ಯಾಯ, ಸಾಮಾನ್ಯರಿಗೊಂದು ನ್ಯಾಯವೇ?' ಎಂದು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ: ರಜತ್‌ಗೆ ಬುದ್ಧಿ ಇಲ್ಲ ಕೋಪ ಜಾಸ್ತಿ ನನ್ನ ಮಾತು ಕೇಳಲ್ಲ: ವಿನಯ್ ಗೌಡ
ರಜತ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 2.42 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಆದರೆ, ಇಷ್ಟಾದ್ರೂ ವಿಡಿಯೋ ಡೀಲಿಟ್ ಮಾಡಿಲ್ಲ, ಪೊಲೀಸರೂ ಮಾಡಿಸಿಲ್ಲ ಎಂದರೆ ಈ ವಿಡಿಯೋದಿಂದ ಯಾವ ಸಂದೇಶ ನೀಡಲು ಹೊರಟಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಇತರ ಕೆಲವು ಪ್ರಕರಣಗಳಲ್ಲಿ ಪೊಲೀಸರು ತಕ್ಷಣ ವಿಡಿಯೋ ಡಿಲೀಟ್ ಮಾಡಿಸಿ, ತಪ್ಪು ಸಂದೇಶ ಹರಡದಂತೆ ತಡೆಯುತ್ತಿದ್ದರು. ಆದರೆ, ರಜತ್ ವಿಷಯದಲ್ಲಿ ಯಾಕೆ ಇಂತಹ ನಿರ್ಲಕ್ಷ್ಯ ಎಂದು ಜನ ಕೇಳುತ್ತಿದ್ದಾರೆ.
ಪ್ರಕರಣದ ಆರಂಭದಲ್ಲಿ ರಜತ್ ಮತ್ತು ವಿನಯ್ ಫೈಬರ್ ಮಚ್ಚು ಕೊಟ್ಟು ರಾದ್ದಾಂತ ಮಾಡಿದ್ದರು. ಬಳಿಕ ಸಾಕ್ಷ್ಯಗಳನ್ನು ನಾಶಪಡಿಸಿದ್ದ ಆರೋಪವೂ ಎದುರಾಗಿತ್ತು. ಈಗ ಪೊಲೀಸರಿಂದಲೇ ಎಡವಟ್ಟಾಗಿದೆ. ದಿನ ಕಳೆದಂತೆ ವಿಡಿಯೋ ಇನ್ನಷ್ಟು ವೈರಲ್ ಆಗುತ್ತಿದ್ದರೂ, ಇದುವರೆಗೆ ಅದನ್ನು ತೆಗೆದುಹಾಕದಿರುವುದು ಆಶ್ಚರ್ಯ ಮೂಡಿಸಿದೆ.
ಇದನ್ನೂ ಓದಿ: ರಜತ್, ವಿನಯ್ ಮಚ್ಚಿನ ರೀಲ್ಸ್ ಕೇಸಿಗೂ ಉಂಟು, ರೇಣುಕಾಸ್ವಾಮಿ ಮರ್ಡರ್ ಕೇಸಿನ ನಂಟು!
'ಪೊಲೀಸರ ಈ ನಿರ್ಲಕ್ಷ್ಯದಿಂದ ಯುವಕರಿಗೆ ತಪ್ಪು ಸಂದೇಶ ಹೋಗುತ್ತದೆ' ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕಾದುನೋಡಬೇಕಿದೆ.