ಬಳ್ಳಾರಿಯ ಕನಕ ದುರ್ಗಮ್ಮ ರೈಲ್ವೇ ಮೇಲ್ಸೇತುವೆ ಬಳಿ ರೈಲು ಡಿಕ್ಕಿ ಹೊಡೆದು ಸುಮಾರು 40 ವರ್ಷದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಜ್ಮೀರ್ ಎಕ್ಸ್‌ಪ್ರೆಸ್ ಡಿಕ್ಕಿಯ ರಭಸಕ್ಕೆ ದೇಹ ಛಿದ್ರಗೊಂಡಿದ್ದು, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ರೈಲ್ವೇ ಪೊಲೀಸರು ಪ್ರಕರಣ ದಾಖಲು
ಬಳ್ಳಾರಿ (ಜ.8): ಬಳ್ಳಾರಿ ಕನಕ ದುರ್ಗಮ್ಮ ರೈಲ್ವೇ ಮೇಲ್ಸೇತುವೆ ಬಳಿ ಇಂದು ಆಘಾತಕಾರಿ ಘಟನೆಯೊಂದು ನಡೆದಿದೆ. ರೈಲ್ವೇ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಸುಮಾರು 40 ವರ್ಷದ ವ್ಯಕ್ತಿಗೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಜ್ಮೀರ್ ಎಕ್ಸ್‌ಪ್ರೆಸ್ ಡಿಕ್ಕಿ: ಛಿದ್ರಗೊಂಡ ದೇಹ
ಇಂದು (ಜೂನ್ 8ರಂದು) ಅಜ್ಮೀರ್ ಎಕ್ಸ್‌ಪ್ರೆಸ್ ರೈಲು ಸಂಚರಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಯ ದೇಹ ಛಿದ್ರಗೊಂಡಿದ್ದು, ವ್ಯಕ್ತಿಯ ಕಾಲು ಕಟ್ ಆಗಿ ಮೇಲ್ಸೇತುವೆಯ ಕೆಳಗಿರುವ ಅಂಡರ್‌ಪಾಸ್ ರಸ್ತೆಗೆ ಬಿದ್ದಿದೆ. ಜನನಿಬಿಡ ರಸ್ತೆಯಲ್ಲೇ ಕಾಲು ಬಿದ್ದಿದ್ದನ್ನು ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಘಟನೆಯಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತವಾಯಿತು.
ಮೃತರ ಗುರುತು ಪತ್ತೆಯಾಗಿಲ್ಲ
ಮೃತ ವ್ಯಕ್ತಿಗೆ ಅಂದಾಜು 40 ವರ್ಷ ವಯಸ್ಸಾಗಿದ್ದು, ಅವರ ಬಗ್ಗೆ ಹೆಚ್ಚಿನ ವಿವರಗಳು ಈವರೆಗೆ ಲಭ್ಯವಾಗಿಲ್ಲ. ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರ ಬಳಿ ಯಾವುದೇ ಗುರುತಿನ ಚೀಟಿ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ವಾರಸುದಾರರ ಪತ್ತೆಗೆ ಮುಂದಾಗಿದ್ದಾರೆ.
ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಈ ಭೀಕರ ಅಪಘಾತದ ಕುರಿತು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳಿ ದಾಟುವಾಗ ಅಥವಾ ಹಳಿಯ ಮೇಲೆ ನಡೆಯುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.


