ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಬಳಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬುಲೆರೋ ವಾಹನ ಮರಕ್ಕೆ ಡಿಕ್ಕಿಯಾಗಿ ನಾಲ್ವರು ದಾರುಣವಾಗಿ ಮೃತಪಟ್ಟಿದ್ದಾರೆ. ಈ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ (ಜ.6): ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬುಲೆರೋ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ವೇಗವಾಗಿ ಡಿಕ್ಕಿಯಾಗಿ ನಾಲ್ವರು ದಾರುಣವಾಗಿ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು ಗ್ರಾಮದ ಬಳಿ ಸಂಭವಿಸಿದೆ
ಈ ಭೀಕರ ಘಟನೆಯಲ್ಲಿ ಕಲ್ಲವ್ವ ನಾಗತಿಹಳ್ಳಿ ಗ್ರಾಮದ ಕಾರ್ಮಿಕರಾದ ಗಿರಿರಾಜ್ (46) ಮತ್ತು ಕಿರಣ್ (25) ಸ್ಥಳದಲ್ಲೇ ಕೊನೆಯುಸಿರೆಳೆದರೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅರುಣ್ (32) ಮತ್ತು ಹನುಮಂತ (32) ಅವರನ್ನು ತಕ್ಷಣವೇ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಮೃತರೆಲ್ಲರೂ ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಲ್ಲಿ ಅಡಿಕೆ ಸುಲಿಯುವ ಕೆಲಸ ಮುಗಿಸಿ ತಮ್ಮೂರಿಗೆ ಹಿಂದಿರುಗುತ್ತಿದ್ದಾಗ ಈ ವಿಧಿಲೀಲೆ ನಡೆದಿದೆ.
ಉಳಿದ ಆರು ಮಂದಿಗೆ ಗಾಯ; ಇಬ್ಬರ ಸ್ಥಿತಿ ಗಂಭೀರ
ವಾಹನದಲ್ಲಿದ್ದ ಉಳಿದ ಆರು ಜನರಿಗೂ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಇಬ್ಬರ ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹೃದಯವಿದ್ರಾವಕ ಘಟನೆ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


