Asianet Suvarna News Asianet Suvarna News

ಕೊಡಗು ಜಿಲ್ಲಾಸ್ಪತ್ರೆಯ 7 ವೈದ್ಯರ ಬ್ಯಾಗ್, ಬೈಕ್ ಕಳವು

ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ 7 ವೈದ್ಯರ ಬ್ಯಾಗ್ ಹಾಗೂ ಒಬ್ಬ ವೈದ್ಯರ ಬೈಕನ್ನು ಖದೀಮನೊಬ್ಬ ಎಗರಿಸಿ ಎಸ್ಕೇಪ್ ಆಗಿರುವ ಘಟನೆ ಮಡಿಕೇರಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. 
 

Bag and bike of doctors of Kodagu district hospital were stolen gvd
Author
First Published Nov 28, 2022, 11:40 PM IST

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ನ.28): ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ 7 ವೈದ್ಯರ ಬ್ಯಾಗ್ ಹಾಗೂ ಒಬ್ಬ ವೈದ್ಯರ ಬೈಕನ್ನು ಖದೀಮನೊಬ್ಬ ಎಗರಿಸಿ ಎಸ್ಕೇಪ್ ಆಗಿರುವ ಘಟನೆ ಮಡಿಕೇರಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಇದು ಆಸ್ಪತ್ರೆಯಲ್ಲಿ ಭದ್ರತೆಯ ಕೊರತೆ ಇದೆಯಾ ಎನ್ನುವ ಅನುಮಾನ ಮೂಡಲು ಕಾರಣವಾಗಿದೆ. ಭಾನುವಾರ ಸಂಜೆ 7 ಗಂಟೆ 35 ನಿಮಿಷದ ಸುಮಾರಿಗೆ ಆಸ್ಪತ್ರೆಯ ಸಿಬ್ಬಂದಿಯ ರೀತಿಯಲ್ಲಿ ಆಸ್ಪತ್ರೆಗೆ ಎಂಟ್ರಿಕೊಟ್ಟ ಖದೀಮ ಸುಮಾರು 1 ಗಂಟೆಗಳ ಕಾಲ ವೈದ್ಯರು ಇಟ್ಟ ಬ್ಯಾಗುಗಳ ಕೊಠಡಿಯ ಸುತ್ತ ಮುತ್ತ ಓಡಾಡಿದ್ದಾನೆ. ಯಾರಾದರೂ ಇದ್ದಾರಾ? ಅಥವಾ ಗಮನಿಸುತ್ತಿದ್ದಾರಾ ಎಂಬುದನ್ನು ಪರಿಶೀಲಿಸಿದ್ದಾನೆ. 

ನಂತರ ಯಾರು ಇಲ್ಲದೇ ಇರುವುದನ್ನು ಗಮನಿಸಿ ವೈದ್ಯರ ಕೊಠಡಿಗೆ ನುಗ್ಗಿ ಅಲ್ಲಿದ್ದ ಏಳು ಬ್ಯಾಗುಗಳನ್ನು ಕಳವು ಮಾಡಿದ್ದಾನೆ. ಕಳವು ಮಾಡಿದ ಭೂಪ ಆಸ್ಪತ್ರೆಯ ಹೊರಗೆ ಬಂದವನೇ ಎಲ್ಲಾ ಬ್ಯಾಗುಗಳನ್ನು ತಡಕಾಡಿದ್ದಾನೆ. ಅದರಲ್ಲಿದ್ದ ಸಾವಿರಾರು ರೂಪಾಯಿ ಹಣ ಮತ್ತು ಎಟಿಎಂ ಕಾರ್ಡುಗಳನ್ನು ದೋಚಿದ್ದಾನೆ. ಈ ವೇಳೆ ವೈದ್ಯರ ಬ್ಯಾಗುಗಳಲ್ಲಿ ಬೈಕೊಂದರ ಕೀ ದೊರೆತಿದ್ದು, ಅದನ್ನು ಬಳಸಿ ಎಲ್ಲಾ ಬೈಕುಗಳಿಗೆ ಕೀಗಳನ್ನು ಹಾಕಿ ಪರಿಶೀಲನೆ ಮಾಡಿದ್ದಾನೆ. ಕೊನೆಗೆ ಒಂದು ಬೈಕ್ ಆನ್ ಆಗಿದ್ದರಿಂದ ಆ್ಯಕ್ಟೀವ ಹೊಂಡಾ ಬೈಕನ್ನು ಕಳವು ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. 

Kodagu: ಬನಶಂಕರಿ ದೇವಿಯ ಜಾತ್ರಾ ಉತ್ಸವ ಪ್ರಯುಕ್ತ ಕೊಡಗಿನಲ್ಲಿ ರೋಚಕ ಎತ್ತಿನಗಾಡಿ ಓಟ

ಇದೇ ವೇಳೆ ವೈದ್ಯರ ಬ್ಯಾಗುಗಳಲ್ಲಿ ಇದ್ದ ಎಟಿಎಂ ಕಾರ್ಡುಗಳನ್ನೂ ದೋಚಿರುವ ಖದೀಮ ಅವುಗಳನ್ನು ಬಳಸಿ ಹಣ ತೆಗೆಯಲು ಪ್ರಯತ್ನಿಸಿದ್ಧಾನೆ. ಆದರೆ ಅದು ಸಫಲವಾಗಿಲ್ಲ. ಬಳಿಕ ಕರ್ತವ್ಯ ಮುಗಿಸಿ ವೈದ್ಯರು ಕೊಠಡಿಗೆ ಹೋಗಿ ನೋಡಿದಾಗ ಬ್ಯಾಗುಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಗೊತ್ತಾಗುತ್ತಿದ್ದಂತೆ ವೈದ್ಯರು ಮಡಿಕೇರಿ ನಗರ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ದೂರು ಆಧರಿಸಿ ಸ್ಥಳಕ್ಕೆ ಬಂದ ಮಡಿಕೇರಿ ನಗರ ಠಾಣೆ ಎಸ್‍ಐ ಶ್ರೀನಿವಾಸ್, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಬಳಿಕ ಪ್ರಕರಣ ದಾಖಲಿಸಿಕೊಂಡು ಖದೀಮನಿಗಾಗಿ ಬಲೆ ಬೀಸಿದ್ದರು. 

ವೈದ್ಯರ ಬ್ಯಾಗುಗಳನ್ನು ಕಳವು ಮಾಡಿದ ವ್ಯಕ್ತಿಯು ವೈದ್ಯರ ಕೊಠಡಿ ಸಮೀಪ ಹಲವು ಬಾರಿ ಓಡಾಡಿರುವುದು, ಬಳಿಕ ಕೊಠಡಿಗೆ ಹೋಗಿ ವೈದ್ಯರ ಬ್ಯಾಗುಗಳನ್ನು ಕಳವು ಮಾಡಿ ಹೋಗುತ್ತಿರುವ ದೃಶ್ಯಗಳು ಆಸ್ಪತ್ರೆಯಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ವ್ಯಕ್ತಿಯು ಮಾಸ್ಕ್ ಧರಿಸಿದ್ದು ಆತ ಯಾರು ಎಂಬು ಗೊತ್ತಾಗಿಲ್ಲ. ಆದರೆ ಆಸ್ಪತ್ರೆಯಲ್ಲಿ ಆಗಿಂದಾಗ್ಗೆ ಅಪರಾಧ ಪ್ರಕರಣಗಳು ನಡೆಯುತ್ತಿದ್ದು, ಆಸ್ಪತ್ರೆಯಲ್ಲಿ ಸರಿಯಾದ ಭದ್ರತಾ ವ್ಯವಸ್ಥೆ ಇಲ್ಲವೆ ಎಂಬ ಅನುಮಾನ ಮೂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಮೆಡಿಕಲ್ ಸೂಪರಿಡಿಂಟೆಂಡ್ ರೂಪೇಶ್ ಅವರು ಸಾಕಷ್ಟು ಭದ್ರತೆ ಇದೆ. ಆದರೆ ಸಿಟಿ ಸ್ಕ್ಯಾನಿಂಗ್ ಬಳಿ ಯಾರೂ ಇಲ್ಲದಿರುವುದನ್ನು ಗಮನಿಸಿ ರೋಗಿಯ ರೀತಿಯಲ್ಲಿ ವ್ಯಕ್ತಿ ಒಳಗೆ ನುಗಿದ್ದಾನೆ. 

Kodagu: ಸುಬ್ರಹ್ಮಣ್ಯ ದೇವಾಲಯದಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರ ನಿಷೇಧ: ಶಾಸಕರ ಬೆಂಬಲ

ಸಾರ್ವಜನಿಕ ಆಸ್ಪತ್ರೆ ಆಗಿರುವುದರಿಂದ ಯಾರೋ ರೋಗಿಯೋ ಅಥವಾ ರೋಗಿಯ ಸಂಬಂಧಿಯೋ ಬಂದಿದ್ದಾನೆಂದು ಅರಿತು ಯಾರು ಅಷ್ಟೊಂದು ಗಮನಿಸಿಲ್ಲ. ಈ ಪ್ರಕರಣದಿಂದಾಗಿ ಇನ್ನಷ್ಟು ಭದ್ರತೆ ಹೆಚ್ಚಿಸಲಾಗುವುದು ಎಂದಿದ್ದಾರೆ. ಒಟ್ಟಿನಲ್ಲಿ ನೆಮ್ಮದಿಯಿಂದ ಇದ್ದ ಮಂಜಿನನಗರಿ ಮಂದಿಗೆ ಇದೀಗ ವಾಹನ ಚೋರರ ಭೀತಿ ಶುವಾರುಗಿದ್ದು ಯಾವಾಗ ಎಲ್ಲಿ ಯಾರ ವಾಹನವನ್ನು ಹೊತ್ತೊಯುತ್ತಾರೋ ಎಂಬ ಆತಂಕ ಶುರುವಾಗಿದೆ. ಏನೆ ಇರಲಿ ಪೊಲೀಸರು ಮಾತ್ರ ಇದರ ಹಿಂದೆ ಯಾವುದೇ ಗ್ಯಾಂಗ್ ಇದ್ರು ಕೂಡ ಅವರ ಹೆಡೆಮುರಿ ಕಟ್ಟುವ ಮೂಲಕ ಜಿಲ್ಲೆಯ ಜನತೆ ನಿರ್ಭೀತಿಯಿಂದ ಇರುವಂತೆ ಮಾಡಬೇಕಾಗಿದೆ.

Follow Us:
Download App:
  • android
  • ios