ಅಯೋಧ್ಯೆಯಲ್ಲಿ ನವವಿವಾಹಿತ ಜೋಡಿ ಮೊದಲ ರಾತ್ರಿಯಂದೇ ಅನುಮಾನಾಸ್ಪದವಾಗಿ ಸಾವು ಕಂಡಿದೆ. ವಧುವಿನ ಮೃತ ದೇಹ ಬೆಡ್ ಮೇಲೆ ಪತ್ತೆಯಾಗಿದ್ದರೆ, ವರನ ಮೃತದೇಹ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಯೋಧ್ಯೆ (ಮಾ.11): ಮದುವೆಯ ನಂತರ ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ, ಆದರೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದ ಘಟನೆಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಮದುವೆಯಾದ ಬಳಿಕ ಮೊದಲ ರಾತ್ರಿ ದಿನವೇ ನವವಿವಾಹಿತ ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ವಧು ಹಾಸಿಗೆ ಮೇಲೆ ಶವವಾಗಿ ಪತ್ತೆಯಾಗಿದ್ದಾಳೆ, ಇನ್ನೊಂದೆಡೆ ವರ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ದುರಂತ ಘಟನೆ ಇಡೀ ಗ್ರಾಮವನ್ನೇ ಆಘಾತಕ್ಕೆ ದೂಡಿದೆ. ಆದರೆ, ಸಾವಿಗೆ ಕಾರಣವೇನು ಅನ್ನೋದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ಯಾವ ಕಾರಣಕ್ಕೆ ಹೀಗೆ ಮಾಡಿಕೊಂಡಿದ್ದಾರೆ ಅನ್ನೋದು ಇನ್ನೂ ಗೊತ್ತಾಗಿಲ್ಲ.
ಅಯೋಧ್ಯೆಯ ಕ್ಯಾಂಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಹದತ್‌ಗಂಜ್ ಮುರಾವನ್ ಟೋಲಾ ಗ್ರಾಮದ ನಿವಾಸಿ ಪ್ರದೀಪ್ ಕುಮಾರ್ (24) ಮಾರ್ಚ್ 7 ರಂದು ಶಿವಾನಿ (22) ಎಂಬುವವರನ್ನು ವಿವಾಹವಾಗಿದ್ದರು. ಮಾರ್ಚ್ 8 ರಂದು ವಧುವನ್ನು ಮೆರವಣಿಗೆಯಲ್ಲಿ ಕರೆತಂದ ನಂತರ ಮನೆಯಲ್ಲಿ ಸಂತೋಷದ ವಾತಾವರಣವಿತ್ತು. ಇಡೀ ಕುಟುಂಬ ಮಾರ್ಚ್ 9 ರಂದು ನಡೆಯಲಿರುವ ಆರತಕ್ಷತೆಯ ತಯಾರಿಯಲ್ಲಿತ್ತು. ಆದರೆ ಈ ಸಂತೋಷ ಕೆಲವೇ ಗಂಟೆಗಳಲ್ಲಿ ದುಃಖವಾಗಿ ಬದಲಾಗುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ.
ರಾತ್ರಿ 11 ಗಂಟೆಗೆ ಪ್ರದೀಪ್ ಮತ್ತು ಶಿವಾನಿ ಮೊದಲ ರಾತ್ರಿಗಾಗಿ ಕೋಣೆಗೆ ಹೋಗಿದ್ದರು. ಆದರೆ ಬೆಳಿಗ್ಗೆ 7 ಗಂಟೆಯವರೆಗೆ ಬಾಗಿಲು ತೆರೆಯದಿದ್ದಾಗ, ಕುಟುಂಬ ಸದಸ್ಯರು ಬಾಗಿಲು ಬಡಿದಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಕಿಟಕಿಯನ್ನು ಮುರಿದು ನೋಡಿದ್ದಾರೆ. ಈ ವೇಳೆ ಒಳಗೆ ಕಂಡ ದೃಶ್ಯ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.
ಪ್ರದೀಪ್ ಮತ್ತು ಶಿವಾನಿ ಕೊಠಡಿಯಲ್ಲಿ ಭಯಾನಕ ದೃಶ್ಯ: ಕುಟುಂಬ ಸದಸ್ಯರು ಕಿಟಕಿಯಿಂದ ಒಳಗೆ ನೋಡಿದಾಗ ವಧು ಹಾಸಿಗೆ ಮೇಲೆ ಸತ್ತು ಬಿದ್ದಿದ್ದಳು, ಆದರೆ ವರ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿದ್ದ. ಈ ದೃಶ್ಯವನ್ನು ನೋಡಿದ ಕುಟುಂಬಸ್ಥರ ಕಾಲುಗಳು ನಡುಗಲು ಪ್ರಾರಂಭಿಸಿದವು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಕೊನೆಯ ಕರೆ ಮತ್ತು ಅಪೂರ್ಣ ಸಂದೇಶದ ರಹಸ್ಯ: ತನಿಖೆಯ ಸಮಯದಲ್ಲಿ, ಪ್ರದೀಪ್ ಅವರ ಮೊಬೈಲ್ ಫೋನ್ ಪೊಲೀಸರಿಗೆ ಸಿಕ್ಕಿತು, ಆದರೆ ವಧುವಿನ ಫೋನ್ ಕಾಣೆಯಾಗಿತ್ತು. ಕರೆ ವಿವರಗಳನ್ನು ಪರಿಶೀಲಿಸಿದಾಗ, ಘಟನೆಗೆ ಸುಮಾರು ಎರಡು ಗಂಟೆಗಳ ಮೊದಲು ರಾತ್ರಿ 09:53 ಕ್ಕೆ ಪ್ರದೀಪ್ ತನ್ನ ಸೋದರಳಿಯ ಅನುಜ್‌ಗೆ ಕರೆ ಮಾಡಿದ್ದ ಎಂದು ತಿಳಿದುಬಂದಿದೆ. ಭಾನುವಾರ ಹೊಸ ಮೊಬೈಲ್ ಫೋನ್ ಖರೀದಿಸಬೇಕೆಂದು ಅವನು ಅನುಜ್‌ಗೆ ಹೇಳಿದ್ದ ಎಂದು ತಿಳಿದುಬಂದಿದೆ.
ಇದರ ಜೊತೆಗೆ, ಪೊಲೀಸರಿಗೆ ಪ್ರದೀಪ್‌ನ ಮೊಬೈಲ್‌ನಲ್ಲಿ ಅಪೂರ್ಣವಾಗಿ ಟೈಪ್ ಮಾಡಿದ ಸಂದೇಶವೂ ಸಿಕ್ಕಿದ್ದು, ಅದರಲ್ಲಿ ವಧುವಿನ ಹೆಸರನ್ನು ಮಾತ್ರ ಬರೆಯಲಾಗಿತ್ತು. ಇದರಿಂದ ಪೊಲೀಸರಿಗೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.
ಸಾವಿನ ಕಾರಣ ನಿಗೂಢ: ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ, ಪ್ರದೀಪ್ ಮೊದಲ ರಾತ್ರಿಯಂದು ಸುಮಾರು 12 ಗಂಟೆಗೆ ಮೊದಲು ಶಿವಾನಿಯನ್ನು ಕೊಲೆ ಮಾಡಿ ನಂತರ ತಾನು ನೇಣು ಹಾಕಿಕೊಂಡಿದ್ದಾನೆ. ಆದರೆ ಅವನು ಹಾಗೆ ಮಾಡಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಪೊಲೀಸರು ಪ್ರದೀಪ್‌ನ ಕರೆ ದಾಖಲೆಯನ್ನು (ಸಿಡಿಆರ್) ಪರಿಶೀಲಿಸಿದ್ದಾರೆ. ಆದರೆ ಅದರಲ್ಲಿ ಮದುವೆಗೆ ಸಂಬಂಧಿಸಿದ ಕರೆಗಳು ಮಾತ್ರ ಇದ್ದವು. ಫೋನ್‌ನಲ್ಲಿ ಯಾವುದೇ ಅನುಮಾನಾಸ್ಪದ ಚಾಟಿಂಗ್, ಫೋಟೋ ಅಥವಾ ವೀಡಿಯೊಗಳು ಕಂಡುಬಂದಿಲ್ಲ.
ಬಿಹಾರ: ಹಾಡಹಗಲೇ ತನಿಷ್ಕ್ ಜ್ಯುವೆಲ್ಲರಿಗೆ ನುಗ್ಗಿ ದರೋಡೆ: ಗನ್ ತೋರಿಸಿ 25 ಕೋಟಿಯ ಅಭರಣ ಲೂಟಿ
ಒಂದೇ ಚಿತೆಯಲ್ಲಿ ಅಂತ್ಯಕ್ರಿಯೆ: ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಎರಡೂ ಕುಟುಂಬಗಳು ಈ ವಿಷಯದಲ್ಲಿ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ನಿರಾಕರಿಸಿದರು. ಭಾನುವಾರ ಸಂಜೆ ಇಬ್ಬರ ಮೃತದೇಹಗಳನ್ನು ಒಂದೇ ಚಿತೆಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ಈ ವೇಳೆ ಎರಡೂ ಕಡೆಯ ಎಲ್ಲ ಜನರು ಉಪಸ್ಥಿತರಿದ್ದರು.
