ಮಂಗಳೂರು: ಜೆಸಿಬಿ ನುಗ್ಗಿಸಿ ಎಟಿಎಂ ಕಳವು ಯತ್ನ
ಪೊಲೀಸರಿಗೆ ಜೆಸಿಬಿ ಜೋಕಟ್ಟೆಯಲ್ಲಿ ಪತ್ತೆಯಾಗಿದೆ. ಪರಿಶೀಲನೆ ವೇಳೆ ಜೆಸಿಬಿ ಪಡುಬಿದ್ರಿ ಠಾಣೆ ವ್ಯಾಪ್ತಿಯಲ್ಲಿ ಕಳವಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮಂಗಳೂರು(ಆ.05): ಸುರತ್ಕಲ್ ವಿದ್ಯಾದಾಯಿನಿ ಶಾಲಾ ಮುಂಭಾಗದಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಜೆಸಿಬಿ ನುಗ್ಗಿಸಿ ಹಣ ಕಳವಿಗೆ ಯತ್ನಿಸಿದ ಘಟನೆ ಶುಕ್ರವಾರ ನಸುಕಿನ ಜಾವ ನಡೆದಿದೆ. ಈ ವೇಳೆ ಪಕ್ಕದಲ್ಲೇ ಇದ್ದ ಬ್ಯಾಂಕ್‌ನಿಂದ ಸೈರನ್ ಮೊಳಗಿದ್ದರಿಂದ ಕಳ್ಳರು ಜೆಸಿಬಿ ಸಹಿತ ಸ್ಥಳದಿಂದ ಪರಾರಿಯಾಗಿದ್ದಾರೆ.
ಎಟಿಎಂನಲ್ಲಿದ್ದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿರುವ ಪೊಲೀಸರು ಕಳ್ಳರ ಪತ್ತೆಗೆ ಕಾರ್ಯಾಚರಣೆಗೆ ಇಳಿದಿದ್ದಾರೆ. ಎಟಿಎಂ ಇರುವ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡಗಳು ಮಾತ್ರ ಇದ್ದು ಅಂಡರ್‌ಪಾಸ್ ಚಾವಣಿ ಅಡ್ಡವಿದೆ. ಹಾಗಾಗಿ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ತಕ್ಷಣಕ್ಕೆ ಈ ವಾಣಿಜ್ಯ ಕಟ್ಟಡಗಳು ಕಣ್ಣಿಗೆ ಬೀಳುವುದಿಲ್ಲ. ಇದರ ಲಾಭ ಪಡೆದ ಕಳ್ಳರು ಜೆಸಿಬಿ ಬಳಸಿ ಎಟಿಎಂ ಇದ್ದ ಕಟ್ಟಡದ ಗೋಡೆ ಒಡೆದು ಹಾಕಿದ್ದು, ಕಟ್ಟಡದ ಶಟರ್ ಲಾಕ್ ತೆಗೆದು ಎಟಿಎಂ ಯಂತ್ರ ಒಡೆಯಲೆತ್ನಿಸಿದ್ದಾರೆ.
Bengaluru: ಯೂಟ್ಯೂಬ್ ಚಾನಲ್ ಆರಂಭಿಸಿ ದಂಧೆ, ಮಾಂಸದಂಗಡಿಗಳಲ್ಲಿ ಹಫ್ತಾ ವಸೂಲಿ: 4 ಪತ್ರಕರ್ತರ ಸೆರೆ
ಆಗ ಬ್ಯಾಂಕ್ ಮ್ಯಾನೇಜರ್‌ಗೆ ಸಂದೇಶ ಹೋಗಿದ್ದು, ಸ್ವಲ್ಪ ಹೊತ್ತಿನಲ್ಲೇ ಸ್ಥಳಕ್ಕೆ ಬಂದಿದ್ದಾರೆ. ಇದೇ ವೇಳೆ ಸುರತ್ಕಲ್ ಪೊಲೀಸರು ಕೂಡ ಬಂದಿದ್ದಾರೆ. ಅಷ್ಟರಲ್ಲಿ ಜೆಸಿಬಿ ಜತೆ ಕಳ್ಳರು ಪರಾರಿಯಾಗಿದ್ದಾರೆ. ತನಿಖೆ ಮುಂದುವರಿಸಿದ ಪೊಲೀಸರಿಗೆ ಜೆಸಿಬಿ ಜೋಕಟ್ಟೆಯಲ್ಲಿ ಪತ್ತೆಯಾಗಿದೆ. ಪರಿಶೀಲನೆ ವೇಳೆ ಜೆಸಿಬಿ ಪಡುಬಿದ್ರಿ ಠಾಣೆ ವ್ಯಾಪ್ತಿಯಲ್ಲಿ ಕಳವಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.