ಚಿನ್ನದ ವ್ಯಾಪಾರಿ ಮೇಲೆ ಹಲ್ಲೆ; 2.11 ಕೋಟಿ ರೂ. ಕಸಿದು ಪರಾರಿಯಾದ ದರೋಡೆಕೋರರು!
ರಾಜ್ಯದಲ್ಲಿ ದಿನನಿತ್ಯ ಒಂದಿಲ್ಲೊಂದು ದರೋಡೆ ಪ್ರಕರಣಗಳು ದಾಖಲಾಗುತ್ತಿವೆ. ಸರ್ಕಾರ ಕಾನೂನು ಸುವ್ಯವಸ್ಥೆ ಸದೃಢವಾಗಿದೆ ಎಂದು ಹೇಳಿಕೊಂಡರೂ ರಸ್ತೆ ಮಧ್ಯೆ ವಾಹನಗಳನ್ನು ನಿಲ್ಲಿಸಿ ಚಿನ್ನಾಭರಣ, ಹಣ ದೋಚುವ ಕೃತ್ಯಗಳಿಗೆ ಕೊನೆ ಇಲ್ಲದಂತಾಗಿದೆ. ಕಳೆದ ಶನಿವಾರ ಚಿನ್ನದ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ 2.11 ಕೋಟಿ ರೂ. ದರೋಡೆ ಮಾಡಿರುವ ಘಟನೆ ನಡೆದಿದೆ.
ಕಾರವಾರ (ಅ.5) : ರಾಜ್ಯದಲ್ಲಿ ದಿನನಿತ್ಯ ಒಂದಿಲ್ಲೊಂದು ದರೋಡೆ ಪ್ರಕರಣಗಳು ದಾಖಲಾಗುತ್ತಿವೆ. ಸರ್ಕಾರ ಕಾನೂನು ಸುವ್ಯವಸ್ಥೆ ಸದೃಢವಾಗಿದೆ ಎಂದು ಹೇಳಿಕೊಂಡರೂ ರಸ್ತೆ ಮಧ್ಯೆ ವಾಹನಗಳನ್ನು ನಿಲ್ಲಿಸಿ ಚಿನ್ನಾಭರಣ, ಹಣ ದೋಚುವ ಕೃತ್ಯಗಳಿಗೆ ಕೊನೆ ಇಲ್ಲದಂತಾಗಿದೆ.
ಕೇರಳಕ್ಕೆ ತೆರಳುತ್ತಿದ್ದ ಚಿನ್ನದ ವ್ಯಾಪಾರಿಗಳಿಂದ 2.11 ಕೋಟಿ ರೂ. ದರೋಡೆ ಮಾಡಿರುವ ಕೃತ್ಯ ಕಳೆದ ಶನಿವಾರ ರಾತ್ರಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ನಿಪ್ಪಾಣಿಯಿಂದ ಮಂಗಳೂರು ಮಾರ್ಗವಾಗಿ ಕೇರಳ ಕಡೆಗೆ ಈರ್ವರು ಚಿನ್ನದ ವ್ಯಾಪಾರಿಗಳು ಕಾರಿನಲ್ಲಿ ಹೊರಟಿದ್ದರು. ಈ ವೇಳೆ ಮಾರ್ಗಮಧ್ಯೆ ಅಂದ್ರೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ ದಾಟುತ್ತಿದ್ದಂತೆ 2 ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿರುವ ಏಳೆಂಟು ಮಂದಿ ದರೋಡೆಕೋರರು ಚಿನ್ನದ ವ್ಯಾಪಾರಿಗಳು ಪ್ರಯಾಣಿಸುತ್ತಿದ್ದ ಕಾರಿಗೆ ಅಡ್ಡ ಹಾಕಿ ಹಲ್ಲೆ ನಡೆಸಿದ್ದಾರೆ. ಬಳಿಕ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ.
ಈ ಘಟನೆ ಶನಿವಾರ ನಡೆದಿದ್ದರೂ, ದರೋಡೆಗೆ ಒಳಗಾದ ಚಿನ್ನದ ವ್ಯಾಪಾರಿಗಳು ಕೆಲವು ದಾಖಲೆಗಳನ್ನು ಹೊಂದಾಣಿಸಿಕೊಂಡು ಠಾಣೆಗೆ ಬರಲು ವಿಳಂಬವಾಗಿದೆ. ನಿನ್ನೆ ದರೋಡೆ ನಡೆದ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆಹಚ್ಚಲು ಮುಂದಾಗಿರುವ ಪೊಲೀಸರು, ದರೋಡೆ ನಡೆದ ಸ್ಥಳ ಪರಿಶೀಲಿಸಿದ್ದಾರೆ. ಕಾರಿನ ವಿಂಡೋ ಗಾಜಿನ ಚೂರುಗಳು ಪತ್ತೆಯಾಗಿವೆ. ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.
ಹಾಡಹಗಲೇ 43 ಲಕ್ಷ ನಗದು, 250 ಗ್ರಾಂ ಚಿನ್ನ ದೋಚಿ ಖತರ್ನಾಕ್ ಗ್ಯಾಂಗ್ ಪರಾರಿ!