ಬಾಗಲಕೋಟೆ(ಫೆ. 10) ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಸಿಎಎ ವಿರೋಧಿಸಿ ಸೋಮವಾರ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ ಸಂದರ್ಭದಲ್ಲಿ ಬ್ಲೇಡ್ ಬಾಬಾ ಕುಖ್ಯಾತಿಯ ಅಸ್ಲಂ ಬಾಬಾ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾನೆ.

ಬಾಗಲಕೋಟೆಯಲ್ಲಿ 2 ದಶಕಗಳ ಹಿಂದೆ ತನ್ನ ಬಳಿ ಬರುವ ರೋಗಿಗಳಿಗೆ ಬ್ಲೇಡ್ ಹಾಗೂ ಕುರ್ಚಿ ಮೂಲಕ ಅಪಾಯಕಾರಿ ಚಿಕಿತ್ಸೆ ನೀಡುವ ಮೂಲಕ ಹಲವಾರು ಪ್ರಕರಣಗಳನ್ನು ಎದುರಿಸಿದ್ದ ಅಸ್ಲಂ ಬಾಬಾ ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಸೋಮವಾರ ಸಿಎಎ ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ಸಾರ್ವಜನಿಕರ ಮಧ್ಯ ಕುಳಿತಿದ್ದು ಕಂಡುಬಂತು.

ಇವನೆಂಥ ಬಾಬಾ.. ಇಂಜೆಕ್ಷನ್ ಕೊಟ್ಟು ಮಹಿಳೆಯರೊಂದಿಗೆ!

18 ವರ್ಷಗಳ ಹಿಂದೆ ಬಾಗಲಕೋಟೆಯ ರೈಲ್ವೆ ನಿಲ್ದಾಣದ ಬಳಿ ಇರುವ ಸ್ಥಳದಲ್ಲಿ ಎಲ್ಲ ರೋಗಗಳಿಗೆ ಚಿಕಿತ್ಸೆ ನೀಡುವುದಾಗಿ ಹಾಗೂ ಅಪಾಯಕಾರಿ ರೋಗಗಳನ್ನು ತನ್ನ ಕೈಚಳಕದ ಮೂಲಕ ಬ್ಲೇಡ್ ಅನ್ನು ಬಳಸಿ ಚಿಕಿತ್ಸೆ ನೀಡುವ ನೆಪದಲ್ಲಿ ಹಲವರ ಬದುಕಿನ ಜೊತೆ ಚೆಲ್ಲಾಟವಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಬಾಗಲಕೋಟೆ ಪೊಲೀಸರು ಅಸ್ಲಂ ಬಾಬಾಗೆ ಸಂಬಂಧಿಸಿದ ಹಲವಾರು ಆಸ್ತಿಗಳನ್ನು ಸಹ ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದರು.

ನಟಿ ಶಿಲ್ಪಾ ಶೆಟ್ಟಿ ಭೇಟಿ: ವಿಚಿತ್ರ ಹಾಗೂ ಅಪಾಯಕಾರಿ ಚಿಕಿತ್ಸೆ ಮೂಲಕ ದೇಶದ ಗಮನ ಸೆಳೆದಿದ್ದ ಅಸ್ಲಂ ಬಾಬಾ ಭೇಟಿಗೆ 2002ರಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತನ್ನ ತಾಯಿಯೊಂದಿಗೆ ಬಾಗಲಕೋಟೆಗೆ ಬಂದಿದ್ದರು. ಅಲ್ಲದೆ ಚಿಕಿತ್ಸೆ ನೀಡುವ ಸ್ಥಳದಲ್ಲಿ 3 ಗಂಟೆಗಳ ಕಾಲ ಅಸ್ಲಂ ಬಾಬಾ ಜೊತೆ ಚರ್ಚೆ ನಡೆಸಿದ್ದರು. ಇವರಲ್ಲದೆ ಇನ್ನೂ ಅನೇಕ ಹಿಂದಿ ಚಿತ್ರ ನಟರು ಹಾಗೂ ರಾಜ್ಯದ ಪ್ರಮುಖ ರಾಜಕಾರಣಿಗಳು ಭೇಟಿ ನೀಡಿದ್ದರು.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ಗುಜರಾತ ಸೇರಿದಂತೆ ವಿವಿಧ ರಾಜ್ಯಗಳಿಂದ ರೋಗಿಗಳು ಈತನ ಬಳಿ ಚಿಕಿತ್ಸೆಗೆಂದು ಬಂದಿದ್ದರು. ನಂತರದ ದಿನಗಳಲ್ಲಿ ಸಾರ್ವಜನಿಕವಾಗಿ ಚಿಕಿತ್ಸೆ ನೀಡಬೇಕೆಂಬ ವಿವಿಧ ಸಂಘಟನೆಗಳ ಸವಾಲು ಹಾಗೂ ಪೊಲೀಸ್ ಪ್ರಕರಣ ದಾಖಲಾದ ನಂತರ ಕೆಲವು ದಿನಗಳ ಕಾರಾಗೃಹ ವಾಸವನ್ನು ಸಹ ಅನುಭವಿಸಿದ್ದ ಅಸ್ಲಂ ಬಾಬಾ ಮತ್ತೇ ತನ್ನ ಚಿಕಿತ್ಸೆಯನ್ನು ಸಾರ್ವಜನಿಕವಾಗಿ ಮುಂದುವರಿಸಲು ಅವಕಾಶ ಸಿಕ್ಕಿರಲಿಲ್ಲ. ಅಂದು ತನ್ನ ಪರವಾಗಿ ವಾದ ಮಾಡಲು ಹಿರಿಯ ನ್ಯಾಯವಾದಿಗಳಾಗಿದ್ದ ಎ.ಕೆ.ಸುಬ್ಬಯ್ಯ ಅವರನ್ನು ಬಾಗಲಕೋಟೆಗೆ ಕರೆತಂದಿದ್ದು ವಿಶೇಷವಾಗಿತ್ತು. ಇದಾದ ಬಳಿಕ ಇಂದಿನ ಪ್ರತಿಭಟನೆ ವೇಳೆ ಕಾಣಿಸಿಕೊಂಡ ಅಸ್ಲಂ ಬಾಬಾ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ್ದಾನೆ.

ದೇಶದಲ್ಲಿ ಶಾಂತಿ ಸೌಹಾರ್ದ ಬೇಕು: ಅಚ್ಚರಿಯೆಂಬಂತೆ ಮಾಧ್ಯಮದ ಜೊತೆ ಮಾತನಾಡಿದ ಅಸ್ಲಂ ಬಾಬಾ ದೇಶದಲ್ಲಿ ಶಾಂತಿ, ಸೌಹಾದರ್ತೆಯ ಅಗತ್ಯವಿದ್ದು, ಮುಸ್ಲಿಂ ಸಮುದಾಯ ಎಲ್ಲ ಹಂತದ ಕಾಯಕ ಮಾಡಿ ಬದುಕಲು ಕಲಿತಿದೆ. ನಮಗೆ ಮಹತ್ವಾಕಾಂಕ್ಷಿಗಳುಳ್ಳ ಹುದ್ದೆಗಳು ಬೇಡ ನೆಮ್ಮದಿ ಇದ್ದರೆ ಸಾಕು ಎಂಬ ಆದರ್ಶದ ಮಾತುಗಳನ್ನು ಅಸ್ಲಂ ಬಾಬಾ ಹೇಳಿದ್ದಾನೆ.