ಶಾಹಜಾಂಪುರ್(ಫೆ.04): ಢೋಂಗಿ ಬಾಬಾಗಳ ಕುರಿತು ಎಚ್ಚರಿಕೆಯಿಂದ ಇರಿ ಎಂಬ ಮನವಿಯ ಹೊರತಾಗಿಯೂ, ಮಹಿಳಾ ಭಕ್ತರು ಮೋಸ ಹೋಗುವ ಘಟನೆಗಳಿಗೆ ಕಮ್ಮಿ ಏನಿಲ್ಲ.

ಅದರಂತೆ ಮಹಿಳಾ ಭಕ್ತರಿಗೆ ಮತ್ತು ತರಿಸುವ ಇಂಜೆಕ್ಷನ್ ನೀಡಿ ಅವರೊಂದಿಗೆ ಅಸಭ್ಯ ವರ್ತನೆ ತೋರುತ್ತಿದ್ದ ಢೋಂಗಿ ಬಾಬಾನೋರ್ವ ಸದ್ಯದಲ್ಲೇ ಕಂಬಿ ಎಣಿಸಲಿದ್ದಾನೆ.

ಉತ್ತರಪ್ರದೇಶದ ಶಾಹಜಾಂಪುರ್’ನ ಢೋಂಗಿ ಬಾಬಾ ಅನುಜ್ ಚೇತನ್ ಸರಸ್ವತಿಯ ಅಸಲಿ ಬಂಡವಾಳ ಬಯಲಾಗಿದ್ದು, ಸತ್ಸಂಗದ ನೆಪದಲ್ಲಿ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಿದ್ದ ಪಾಪಿಗಾಗಿ ಪೊಲೀಸರು ಹಡುಕಾಟ ಆರಂಭಿಸಿದ್ದಾರೆ.

ಈಗಾಗಲೇ ಐಧು ಮದುವೆಯಾಗಿರುವ ಢೋಂಗಿ ಅನುಜ್ ಚೇತನ್, ಸತ್ಸಂಗದ ನೆಪದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಕುರಿತು ಈತನ ಮಹಿಳಾ ಭಕ್ತರೇ ಪೊಲೀಸರಿಗೆ ದೂರು ನೀಡಿದ್ದು, ಆತನ ಅಸಭ್ಯ ವರ್ತನೆಯ ಫೋಟೋಗಳನ್ನು ಪೊಲೀಸರಿಗೆ ನೀಡಿದ್ದಾರೆ.

ಮಹಿಳಾ ಭಕ್ತರಿಗೆ ಮತ್ತು ತರಿಸುವ ಇಂಜೆಕ್ಷನ್ ನೀಡಿ ಅವರನ್ನು ಮೈ ಮಾರುವ ಧಂಧೆಗೆ ದೂಡುತ್ತಿದ್ದ ಆರೋಪ ಹೊರಿಸಲಾಗಿದ್ದು, ತಲೆಮರೆಸಿಕೊಂಡಿರುವ ಢೋಂಗಿ ಬಾಬಾನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈ ಕುರಿತು ದೂರು ಸ್ವೀಕರಿಸಿರುವ ಡಿಐಜಿ ರಾಜೇಶ್ ಕುಮಾರ್ ಪಾಂಡೆ, ಮಹಿಳಾ ಭಕ್ತರು ನೀಡಿರುವ ದೂರನ್ನು ಆಧರಿಸಿ ಢೋಂಗಿ ಬಾಬಾನ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.