ಡ್ರಗ್ಸ್ ಮಾಫಿಯಾ: ಕೊರೋನಾ ನೆಪ ಹೇಳಿ ಎಸ್ಕೇಪ್ ಆಗಿದ್ದ ಮತ್ತೊಬ್ಬ ಅರೆಸ್ಟ್
ಡ್ರಗ್ಸ್ ಜಾಲದ ಇನ್ನೊಬ್ಬ ಅಂದರ್| ರಾಗಿಣಿ ಸ್ನೇಹಿತ ರವಿಶಂಕರ್‌ನ ಆಪ್ತ ವೈಭವ್ ಜೈನ್ ಸೆರೆ| ನಾಲ್ಕೈದು ವರ್ಷಗಳಿಂದ ರಾಗಿಣಿ ಸ್ನೇಹಿತ ರವಿಶಂಕರ್ ಜತೆ ವೈಭವ್ ಸ್ನೇಹವಿತ್ತು| ಇದೇ ಗೆಳೆತನದಲ್ಲಿ ಪಬ್, ಕ್ಲಬ್, ರೆಸಾರ್ಟ್ ಹಾಗೂ ಹೋಟೆಲ್‌ಗಳಲ್ಲಿ ನಡೆದಿದ್ದ ಹಲವು ಪಾರ್ಟಿಗಳಿಗೆ ರವಿಶಂಕರ್‌ನೊಂದಿಗೆ ಪಾಲ್ಗೊಂಡಿದ್ದ ವೈಭವ್|
ಬೆಂಗಳೂರು(ಸೆ.13): ಕನ್ನಡ ಚಲನಚಿತ್ರ ರಂಗಕ್ಕೆ ಮಾದಕ ವಸ್ತು ಮಾರಾಟ ಜಾಲದ ನಂಟು ಪ್ರಕರಣ ಸಂಬಂಧ ಸಿಸಿಬಿ ಕಾರ್ಯಾಚರಣೆ ಮುಂದುವರೆದಿದ್ದು, ನಗರದ ಚಿನ್ನಾಭರಣ ವ್ಯಾಪಾರಿಯೊಬ್ಬ ಶನಿವಾರ ಬಲೆಗೆ ಬಿದ್ದಿದ್ದಾನೆ.
ವೈಯಾಲಿಕಾವಲ್ ನಿವಾಸಿ ವೈಭವ್ ಜೈನ್ ಬಂಧಿತನಾಗಿದ್ದು, ಚಲನಚಿತ್ರ ನಟಿ ರಾಗಿಣಿ ದ್ವಿವೇದಿಯ ಸ್ನೇಹಿತನೂ ಆಗಿರುವ ಸಾರಿಗೆ ಇಲಾಖೆ ಉದ್ಯೋಗಿ ರವಿಶಂಕರ್ ಜತೆ ವೈಭವ್ ಸ್ನೇಹ ಹೊಂದಿದ್ದ. ಪೇಜ್ ತ್ರಿ ಪಾರ್ಟಿಗಳ ಆಯೋಜನೆ, ಡ್ರಗ್ಸ್ ಸೇವನೆ ಮತ್ತು ಮಾರಾಟದ ಆರೋಪದ ಮೇರೆಗೆ ಬಂಧಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಡ್ರಗ್ಸ್ ಕೇಸಲ್ಲಿ ತಗಲಾಕೊಂಡಿರೋ ನಟಿಮಣಿಯರಿಗೆ ಮತ್ತೊಂದು ಸಂಕಷ್ಟ
ಕೊರೋನಾ ನೆಪ ಹೇಳಿ ಎಸ್ಕೇಪ್ ಆಗಿದ್ದ:
ವೈಯಾಲಿಕಾವಲ್‌ನ ವೈಭವ್, ಮಲ್ಲೇಶ್ವರದಲ್ಲಿ ಚಿನ್ನಾಭರಣ ಮಾರಾಟ ಮಳಿಗೆ ನಡೆಸುತ್ತಿದ್ದ. ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ವೈಭವ್ ದಂಪತಿ ದೂರವಾಗಿದ್ದರು. ಕೌಟುಂಬಿಕ ಕಲಹ ಸಂಬಂಧ ಆತನ ಮೇಲೆ ವೈಯಾಲಿಕಾವಲ್ ಠಾಣೆಯಲ್ಲಿ ವೈಭವ್ ಪತ್ನಿ ದೂರು ಸಹ ದಾಖಲಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ನಾಲ್ಕೈದು ವರ್ಷಗಳಿಂದ ರಾಗಿಣಿ ಸ್ನೇಹಿತ ರವಿಶಂಕರ್ ಜತೆ ವೈಭವ್ ಸ್ನೇಹವಿತ್ತು. ಇದೇ ಗೆಳೆತನದಲ್ಲಿ ಪಬ್, ಕ್ಲಬ್, ರೆಸಾರ್ಟ್ ಹಾಗೂ ಹೋಟೆಲ್‌ಗಳಲ್ಲಿ ನಡೆದಿದ್ದ ಹಲವು ಪಾರ್ಟಿಗಳಿಗೆ ರವಿಶಂಕರ್‌ನೊಂದಿಗೆ ವೈಭವ್ ಪಾಲ್ಗೊಂಡಿದ್ದ. ಅಲ್ಲದೆ, ಕೆಲ ಪಾರ್ಟಿಗಳನ್ನು ಸಹ ವೈಭವ್ ಆಯೋಜಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ರವಿಶಂಕರ್ ಮಾಹಿತಿ ಮೇರೆಗೆ ವೈಭವ್‌ನನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ತನಗೆ ಕೊರೋನಾ ಪಾಸಿಟಿವ್ ಇದೆ ಎಂದು ಅಧಿಕಾರಿಗಳಿಗೆ ಸುಳ್ಳು ಹೇಳಿ ಆರೋಪಿ ತಪ್ಪಿಸಿಕೊಂಡಿದ್ದ. ಬಳಿಕ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮಾಹಿತಿ ಪಡೆದು ಬಂಧಿಸಲಾಯಿತು ಎಂದು ಮೂಲಗಳು ಹೇಳಿವೆ.