ಹಾವೇರಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ ದಂಧೆ ಬಯಲಾಗಿದ್ದು, ಕುಖ್ಯಾತ ಅಕ್ಕಿ ಕಳ್ಳ ಸಚಿನ್ ಕಬ್ಬೂರ್‌ನಿಂದ 63 ಟನ್ ಅಕ್ಕಿ ಮತ್ತು 50 ಕ್ವಿಂಟಾಲ್ ಗೋಧಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈತನ ಮೇಲೆ ಹಲವು ಪ್ರಕರಣಗಳಿದ್ದರೂ ಕ್ರಮವಿಲ್ಲ!
ಹಾವೇರಿ (ಡಿ.26): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಅನ್ನಭಾಗ್ಯ' ಯೋಜನೆಯ ಅಕ್ಕಿ ಈಗ ಬಡವರ ಹೊಟ್ಟೆ ಸೇರುವ ಬದಲು ಅಕ್ಕಿ ಕಳ್ಳರ ಪಾಲಾಗುತ್ತಿದೆ. ಹಾವೇರಿಯಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಈ ದಂಧೆ ಮತ್ತೆ ಬಯಲಾಗಿದ್ದು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಕಾರಣ ಈಗಾಗಲೇ ಅಕ್ಕಿ ಕಳ್ಳನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದರೂ ಪೊಲೀಸರು ಯಾವುದೇ ಕಠಿಣ ಕ್ರಮಕ್ಕೆ ಮುಂದಾದಂತೆ ಕಾಣುತ್ತಿಲ್ಲ. ಹೀಗಾಗಿ 'ಅನ್ನರಾಮಯ್ಯ' ಎಂದು ಕರೆಸಿಕೊಳ್ಳುವ ಸಿಎಂ ಅವರಿಗೆ, ಈ ಅಕ್ಕಿ ಕಳ್ಳನ ವಿರುದ್ಧ ಕ್ರಮ ಜರುಗಿಸುವ ತಾಕತ್ತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
63 ಟನ್ ಅಕ್ಕಿ, 50 ಕ್ವಿಂಟಾಲ್ ಗೋಧಿ ವಶ: ಅಕ್ಕಿ ಕಳ್ಳ ಸಚಿನ್ ಕಬ್ಬೂರ್ ಅಟ್ಟಹಾಸ!
ಹಾವೇರಿಯ ಅಕ್ಕಿ ಕಳ್ಳ ಎಂದೇ ಕುಖ್ಯಾತಿ ಪಡೆದಿರುವ ಸಚಿನ್ ಕಬ್ಬೂರ್ ಎಂಬಾತ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬರೋಬ್ಬರಿ 63 ಟನ್ ಅನ್ನಭಾಗ್ಯ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಕ್ಕಿಯ ಜೊತೆಗೆ 50 ಕ್ವಿಂಟಾಲ್ ಗೋಧಿಯನ್ನು ಕೂಡ ಜಪ್ತಿ ಮಾಡಲಾಗಿದೆ. ಮೂರು ಬೃಹತ್ ಲಾರಿಗಳಲ್ಲಿ ಈ ಅಕ್ಕಿಯನ್ನು ಹೊರ ರಾಜ್ಯಕ್ಕೆ ಸಾಗಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾಗ ಸ್ಥಳೀಯರು ನೀಡಿದ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ.
ಮಾಧ್ಯಮಗಳ ಮುಂದೆ ದಾದಾಗಿರಿ; ಪೊಲೀಸರ ಸಾಥ್ ಇದೆಯೇ?
ಈ ಸಚಿನ್ ಕಬ್ಬೂರ್ ಎಂಬಾತ ಬಡವರ ಅಕ್ಕಿ ಕಳ್ಳತನವನ್ನ ಕಸಬು ಮಾಡಿಕೊಂಡಿದ್ದಾನೆ. ಈ ರೀತಿ ಅಕ್ರಮ ಹೊಸದೇನಲ್ಲ. ಕೆಲವು ತಿಂಗಳ ಹಿಂದಷ್ಟೇ ಅನ್ನಭಾಗ್ಯ ಅಕ್ಕಿ ಸಂಗ್ರಹದ ಬಗ್ಗೆ ವರದಿ ಮಾಡಲು ಹೋಗಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಸಚಿನ್ ಕಬ್ಬೂರ್ ದಾದಾಗಿರಿ ಮಾಡಿದ್ದ. ಇವನ ಮೇಲೆ ಈಗಾಗಲೇ ಅಕ್ರಮ ಅಕ್ಕಿ ಸಂಗ್ರಹದ ಹಲವು ಪ್ರಕರಣಗಳು ದಾಖಲಾಗಿದ್ದರೂ, ಇದುವರೆಗೂ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯ ಮೂಡಿಸಿದೆ. ಇಷ್ಟೊಂದು ದೊಡ್ಡ ಮಟ್ಟದ ಅಕ್ರಮ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಸುಮ್ಮನಿರುವುದು ನೋಡಿದರೆ, ಇಲಾಖೆಯೇ ಈತನಿಗೆ ಸಾಥ್ ನೀಡುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.
ಸಚಿವರ ಸೂಚನೆಗೂ ಬೆಲೆ ಇಲ್ಲವೇ?
ಹಿಂದೆ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರು ಸಚಿನ್ ಕಬ್ಬೂರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಸಚಿವರ ಆದೇಶವನ್ನೂ ಗಾಳಿಗೆ ತೂರಿ ಈ ಅಕ್ರಮ ದಂಧೆ ರಾಜಾರೋಷವಾಗಿ ನಡೆಯುತ್ತಿರುವುದು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬಡವರ ಅಕ್ಕಿಯನ್ನು ಕಳ್ಳಸಾಗಣೆ ಮಾಡುತ್ತಿರುವ ಈ ಅಕ್ಕಿ ಮಾಫಿಯಾದ ವಿರುದ್ಧ ಸರ್ಕಾರ ಇನ್ಯಾವಾಗ ಎಚ್ಚೆತ್ತುಕೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ.


