Asianet Suvarna News Asianet Suvarna News

Whale Vomit Smuggling: 3.5 ಕೋಟಿ ಮೌಲ್ಯದ ಅಂಬರ್ಗ್ರಿಸ್ ಸಾಗಿಸುತ್ತಿದ್ದವರು ಚಾಮರಾಜನಗರದಲ್ಲಿ ಅರೆಸ್ಟ್

ಕೊಳ್ಳೇಗಾಲ ಪೊಲೀಸ್ ಅರಣ್ಯ ಸಂಚಾರಿದಳ ಕಾರ್ಯಾಚರಣೆ ನಡೆಸಿ ಬರೋಬ್ಬರಿ ಮೂರುವರೆ ಕೋಟಿ ರೂ ಮೌಲ್ಯದ ತಿಮಿಂಗಲ ವಾಂತಿ  ವಶಕ್ಕೆ ಪಡೆದಿದ್ದಾರೆ.

Ambergris smuggling  two arrested in chamarajanagara What is whale vomit gow
Author
First Published May 28, 2023, 12:20 PM IST

ಚಾಮರಾಜನಗರ (ಮೇ.28): ಕೊಳ್ಳೇಗಾಲ ಪೊಲೀಸ್ ಅರಣ್ಯ ಸಂಚಾರಿದಳ ಕಾರ್ಯಾಚರಣೆ ನಡೆಸಿ ಬರೋಬ್ಬರಿ ಮೂರುವರೆ ಕೋಟಿ ರೂ ಮೌಲ್ಯದ ತಿಮಿಂಗಲ ವಾಂತಿ (ಅಂಬರ್ಗ್ರಿಸ್) ವಶಕ್ಕೆ ಪಡೆದಿದ್ದಾರೆ. ಕೊಳ್ಳೇಗಾಲದ ಮುಡಿಗುಂಡಂ ಬಸ್ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿ , ಮೂರುವರೆ ಕೆಜಿ ಅಂಬರ್ಗ್ರಿಸ್ ಜೊತೆಗೆ ಇಬ್ಬರನ್ನು ಬಂಧಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಮೂಲದ ಸಮಿ ಅಹಮದ್ ಹಾಗು ಫೈರೋಜ್ ಖಾನ್ ಬಂಧಿತರಾಗಿದ್ದು, ಇವರು ಬಸ್‌ ನಲ್ಲಿ ತಮಿಳುನಾಡಿಗೆ ಅಂಬರ್ಗ್ರಿಸ್ ಸಾಗಿಸುತ್ತಿದ್ದರು.

ತಿಮಿಂಗಿಲ ವಾಂತಿ!: ವ್ಯಾಕ್‌... ವಾಂತಿ ಅಂದಾಕ್ಷಣ ವಾಕರಿಕೆ ಬರುತ್ತದೆ. ಆದರೆ ‘ತಿಮಿಂಗಲ ವಾಂತಿ’ (Whale Vomit) ಎಂದಾಕ್ಷಣ, ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧೀಶನನ್ನಾಗಿಸುವ ಅದೃಷ್ಟವೊಂದು ಚಕ್ಕನೆ ಬಾಗಿಲು ಬಡಿದಂತಾಗುತ್ತದೆ.  ನೂರಾರು ಕೋಟಿ ರು. ಬೆಲೆ ಬಾಳುವ ‘ತಿಮಿಂಗಲ ವಾಂತಿ’  ಮುಂಬೈ, ಬೆಂಗಳೂರಿನಂತಹ ಮಹಾನಗರಗಳು ಮಾತ್ರವೇ ಅಲ್ಲದೆ,  ಪುಟ್ಟನಗರಗಳಲ್ಲೂ ಇದರ ಕಳ್ಳ ಸಾಗಣೆ ಪತ್ತೆಯಾಗುತ್ತಿದೆ. ಸದ್ಯ 1 ಕೆ.ಜಿ. ತಿಮಿಂಗಿಲ ವಾಂತಿಗೆ ಒಂದು ಕೋಟಿ ರು.ಗಿಂತ ಅಧಿಕ ಬೆಲೆ ಇದೆ.  

ಅಸಲಿಗೆ ಇದು ವಾಂತಿಯಲ್ಲ: ‘ತಿಮಿಂಗಿಲ ವಾಂತಿ’ ಎಂಬ ಹೆಸರಿನಿಂದ ಕುಖ್ಯಾತಿಗೀಡಾಗಿರುವ ವಸ್ತುವಿನ ಹೆಸರು ‘ಆ್ಯಂಬರ್‌ಗ್ರಿಸ್‌’(Ambergris) ವಾಸ್ತವವಾಗಿ ಇದು ತಿಮಿಂಗಿಲದ ವಾಂತಿಯಲ್ಲ. ತಿಮಿಂಗಿಲದ ಹೊಟ್ಟೆಯಲ್ಲಿ ಸೃಷ್ಟಿಯಾಗಿ ಗುದದ್ವಾರದಿಂದ ಹೊರಬರುವ ಮೇಣದಂತಹ ವಸ್ತು. ಇದರ ಬಗ್ಗೆ ಹಲವು ಕತೆ-ದಂತಕತೆಗಳಿವೆ. 50 ವರ್ಷ ಸಂಶೋಧನೆ ಮಾಡಿದವರಿದ್ದಾರೆ. ಹತ್ತಾರು ವರ್ಷ ಇದನ್ನು ಸಂಗ್ರಹಿಸಲು ಹುಚ್ಚರಂತೆ ಅಲೆದವರಿದ್ದಾರೆ. ಚಂಡಮಾರುತಗಳು ಆ್ಯಂಬರ್‌ಗ್ರಿಸ್‌ (Ambergris) ಅನ್ನು ತೀರದತ್ತ ಹೊತ್ತು ತರಬಹುದು ಎಂಬ ನಿರೀಕ್ಷೆಯೊಂದಿಗೆ ಚಂಡಮಾರುತಗಳ ಮೇಲೆ ನಿಗಾ ಇಡುವ ಜಾಲಗಳೂ ಇವೆ. ಚಂಡಮಾರುತ ಅಪ್ಪಳಿಸಿದ ಬಳಿಕ ತೀರಪ್ರದೇಶದಲ್ಲಿ ಆ್ಯಂಬರ್‌ಗ್ರಿಸ್‌ಗಾಗಿ ಜಾಲಾಡುವ ತಂಡಗಳೂ ವಿಶ್ವದ ವಿವಿಧೆಡೆ ಇವೆ.

ಇಷ್ಟೆಲ್ಲಾ ನಿದ್ರೆಗೆಡಿಸಿರುವ ಆ್ಯಂಬರ್‌ಗ್ರಿಸ್‌ ಸೃಷ್ಟಿಯಾಗುವುದು ‘ಸ್ಪರ್ಮ್ ವೇಲ್‌’ (Sterm Whale) ಎಂಬ ತಿಮಿಂಗಿಲ ತಳಿಯೊಂದರಲ್ಲಿ. ಈ ಸ್ಪರ್ಮ್ ವೇಲ್‌ಗಳು ನಮ್ಮೂರಿನಲ್ಲಿ ಓಡಾಡುವ ಬಸ್‌ಗಳಿಗಿಂತ ಉದ್ದವಿರುವ (49ರಿಂದ 59 ಅಡಿ ಉದ್ದ), 35ರಿಂದ 45 ಟನ್‌ ಭಾರದ ದೈತ್ಯ ಪ್ರಾಣಿಗಳು. ಜಗತ್ತಿನ ಯಾವುದೇ ಸೃಷ್ಟಿಯಲ್ಲಿ ಕಂಡುಬರದ ಅತ್ಯಂತ ಬೃಹತ್ತಾದ ಮೆದುಳು ಇವುಗಳಲ್ಲಿದೆ. ಸ್ಪರ್ಮ್ ವೇಲ್‌ ತಲೆಯಲ್ಲಿ ಎಣ್ಣೆಯಂತಹ ದ್ರವ ಇರುತ್ತದೆ. ಪುರಾತನ ನಾಗರಿಕತೆಯ ಕಾಲದಲ್ಲಿ ದೀಪಗಳನ್ನು ಬೆಳಗಲು ಈ ಸ್ಪಮ್‌ರ್‍ ವೇಲ್‌ಗಳನ್ನು ಕೊಂದು ಅದರ ಎಣ್ಣೆ ಸಂಗ್ರಹಿಸುವ ಪದ್ಧತಿ ಇತ್ತು. ಈ ತಿಮಿಂಗಿಲಗಳ ಆಹಾರ ಮೀನು ಹಾಗೂ ‘ಸ್ಕ್ವಿಡ್'’ ಎಂಬ ಕೊಕ್ಕು ಹೊಂದಿರುವ ಸಮುದ್ರ ಜೀವಿ. ದಿನವೊಂದಕ್ಕೆ ಟನ್‌ಗಟ್ಟಲೆ ಆಹಾರ ಬೇಕು ಈ ಜೀವಿಗೆ.

ಯಾಕೆ ಇದು ಇಷ್ಟೊಂದು ದುಬಾರಿ?: ನಾವು ಬಳಸುವ ಸುಗಂಧದ್ರವ್ಯಗಳು ಸುದೀರ್ಘ ಅವಧಿಗೆ ಪರಿಮಳವನ್ನು ಹೊರಸೂಸುವುದಿಲ್ಲ. ಎಷ್ಟೇ ಸಾವಿರ, ಲಕ್ಷ ರುಪಾಯಿ ಕೊಟ್ಟು ಪರ್ಫ್ಯೂಮ್ ಖರೀದಿಸಿದರೂ ಒಂದಷ್ಟು ಸಮಯದ ಬಳಿಕ ಅದರ ಸುಗಂಧ ಕಡಮೆಯಾಗಿಬಿಡುತ್ತದೆ. ಆದರೆ ವಿಶ್ವದಲ್ಲಿ ಲಭ್ಯ ಇರುವ ಎಲ್ಲ ಸುಗಂಧದ್ರವ್ಯಗಳಿಗಿಂತ ಸುದೀರ್ಘ ಅವಧಿಗೆ ಸುವಾಸನೆಯನ್ನು ಹೊರಸೂಸುವ ವಿಶಿಷ್ಟಗುಣ ಆ್ಯಂಬರ್‌ಗ್ರಿಸ್‌ಗೆ ಇದೆ. ಸುಮಾರು 1000 ವರ್ಷಗಳಿಂದ ಇದು ಪ್ರಪಂಚದಲ್ಲಿ ಬಳಕೆಯಲ್ಲಿದೆ. ಸುಗಂಧ ದ್ರವ್ಯ ತಯಾರಿಕೆಗೆ ಆ್ಯಂಬರ್‌ಗ್ರಿಸ್‌ನ ಬಳಕೆ ಆರಂಭವಾಗಿದ್ದೇ ಅರಬ್‌ ನಾಡಿನಲ್ಲಿ. ಈಜಿಪ್ಟ್‌ನಲ್ಲಿ ಇದನ್ನು ಬಳಸಿ ಊದುಬತ್ತಿ ಉತ್ಪಾದಿಸಲಾಗುತ್ತಿತ್ತು. ಆ್ಯಂಬರ್‌ಗ್ರಿಸ್‌ನ ಉಪಯೋಗ ಅರಬ್‌ ನಾಡಿನಿಂದ ಐರೋಪ್ಯ ದೇಶಗಳಿಗೆ ಪರಿಚಯವಾಯಿತು.

13ನೇ ಶತಮಾನದಲ್ಲಿ ಪ್ಲೇಗ್‌ ಬಂದು ಯುರೋಪ್‌ನ ಜನ ಎಲ್ಲೆಂದರಲ್ಲಿ ಸಾಯತೊಡಗಿದಾಗ, ದುರ್ವಾಸನೆಯಿಂದ ಪ್ಲೇಗ್‌ ಬರುತ್ತದೆ ಎಂಬ ಮೂಢನಂಬಿಕೆಗೆ ಒಳಗಾದ ಜನರು ಕುತ್ತಿಗೆ, ಸೊಂಟಕ್ಕೆ ಆ್ಯಂಬರ್‌ಗ್ರಿಸ್‌ ಧರಿಸಿ ಪರಿಮಳ ಸೂಸುತ್ತಾ ಓಡಾಡುತ್ತಿದ್ದರು. ಬ್ರಿಟನ್‌ನ ರಾಜ 2 ನೇ ಚಾರ್ಲ್ಸ್ ಮೊಟ್ಟೆಗೆ ಆ್ಯಂಬರ್‌ಗ್ರಿಸ್‌ ಹಾಕಿಕೊಂಡು ತಿನ್ನುತ್ತಿದ್ದರು ಎಂಬೆಲ್ಲಾ ದಂತಕತೆಗಳು ಇವೆ. 19ನೇ ಶತಮಾನದಿಂದ ಕೃತಕ ಆ್ಯಂಬರ್‌ಗ್ರಿಸ್‌ ಬಳಕೆಯಲ್ಲಿದೆಯಾದರೂ, ಆದರೆ ನೈಸರ್ಗಿಕ ಆ್ಯಂಬರ್‌ಗ್ರಿಸ್‌ಗೆ ಅದು ಸಾಟಿಯೇ ಅಲ್ಲ. ಹೀಗಾಗಿ ಇವತ್ತಿಗೂ ವಿಶ್ವ ಸುಗಂಧ ದ್ರವ್ಯ ಮಾರುಕಟ್ಟೆಯಲ್ಲಿ ಆ್ಯಂಬರ್‌ಗ್ರಿಸ್‌ಗೆ ಬಲು ಬೇಡಿಕೆಯಿದೆ. ಶ್ರೀಮಂತರು ಬಳಸುವ ಅತ್ಯಂತ ದುಬಾರಿ ಪಫ್ರ್ಯೂಮ್‌ಗಳಿಗೆ ಆ್ಯಂಬರ್‌ಗ್ರಿಸ್‌ ಬೇಕೇಬೇಕು. ಹೀಗಾಗಿ ಆ್ಯಂಬರ್‌ಗ್ರಿಸ್‌ ಹುಲುಸಾದ ದಂಧೆ. ಕೆಲವೊಂದು ದೇಶಗಳಲ್ಲಿ ಆ್ಯಂಬರ್‌ಗ್ರಿಸ್‌ ಹೊಂದಿದವರು, ಅದನ್ನು ಖರೀದಿಸುವವರ ನಡುವೆ ಸಂಪರ್ಕ ಏರ್ಪಡಿಸಲು ದಲ್ಲಾಳಿ ಸಂಸ್ಥೆಗಳೇ ಇವೆ.

ತಿಮಿಂಗಿಲ ಸಾವಿನ ಬಳಿಕ ಬಿಡುಗಡೆ: ಆ್ಯಂಬರ್‌ಗ್ರಿಸ್‌ ಬಳಕೆ ಸಾವಿರ ವರ್ಷಗಳಿಂದ ಇದೆಯಾದರೂ, ಇದು ಸ್ಪಮ್‌ರ್‍ ವೇಲ್‌ನಿಂದ ಸೃಷ್ಟಿಯಾಗುತ್ತದೆ ಎಂಬುದು ನೂರಾರು ವರ್ಷಗಳ ಕಾಲ ಗೊತ್ತಿರಲಿಲ್ಲ. ಸ್ಪಮ್‌ರ್‍ ವೇಲ್‌ ತಾನು ತಿಂದ ಗಟ್ಟಿಆಹಾರವನ್ನು ಅರಗಿಸಲು ದ್ರವ ಬಿಡುಗಡೆ ಮಾಡುತ್ತದೆ. ಅದರಿಂದ ಆ್ಯಂಬರ್‌ಗ್ರಿಸ್‌ ಸೃಷ್ಟಿಯಾಗುತ್ತದೆ. ಇದು ಗುದದ್ವಾರದಿಂದ ಸಮುದ್ರಕ್ಕೆ ಬಿಡುಗಡೆಯಾಗುತ್ತದೆ ಎಂಬ ವಾದವಿದೆ. ಆದರೆ ಇದನ್ನು ಬಹುತೇಕರು ಅಲ್ಲಗಳೆಯುತ್ತಾರೆ.

ಎಲ್ಲ ಸ್ಪರ್ಮ್ ವೇಲ್‌ಗಳಿಂದಲೂ ಆ್ಯಂಬರ್‌ಗ್ರಿಸ್‌ ಸೃಷ್ಟಿಯಾಗುವುದಿಲ್ಲ. ಶೇ.1 ರಿಂದ ಶೇ.5 ರಷ್ಟುಅಥವಾ 100 ಸ್ಪರ್ಮ್ ವೇಲ್‌ಗಳ ಪೈಕಿ ಒಂದರಲ್ಲಿ ಆ್ಯಂಬರ್‌ಗ್ರಿಸ್‌ ಉತ್ಪತ್ತಿಯಾಗುತ್ತದೆ ಎಂಬ ಅಂದಾಜಿದೆ. ಟನ್‌ಗಟ್ಟಲೆ ಸ್ಕಿಡ್ವ್ ಎಂಬ ಸಮುದ್ರ ಜೀವಿಯನ್ನು ತಿಂದಾಗ ಅದರಲ್ಲಿರುವ ಕೊಕ್ಕುಗಳು ಒಮ್ಮೊಮ್ಮೆ ತಿಮಿಂಗಿಲದ ಹೊಟ್ಟೆಯಲ್ಲಿ ಸಿಲುಕಿ ಸಮಸ್ಯೆ ಉಂಟು ಮಾಡುತ್ತವೆ. ಇದರಿಂದ ಸ್ಪಮ್‌ರ್‍ ವೇಲ್‌ನಿಂದ ಮಲ ಹೊರಹೋಗುವುದಿಲ್ಲ. ಒತ್ತಡ ನಿರ್ಮಾಣವಾಗಿ ಗುದ ನಾಳವೇ ಒಡೆದುಹೋಗಿ, ಸ್ಪರ್ಮ್ ವೇಲ್‌ ಸಾವಿಗೀಡಾಗುತ್ತದೆ.

ಬಳಿಕ ಅದರಿಂದ ಆ್ಯಂಬರ್‌ಗ್ರಿಸ್‌ ಹೊರಬರುತ್ತದೆ ಎಂದು ಈ ಕುರಿತು ಸುದೀರ್ಘ 50 ವರ್ಷಗಳ ಕಾಲ ಸಂಶೋಧನೆ ನಡೆಸಿ 2011ರಲ್ಲಿ ಕಾಲವಾದ ಬ್ರಿಟನ್‌ನ ಸಮುದ್ರಜೀವಿ ಶಾಸ್ತ್ರಜ್ಞ ರಾಬರ್ಟ್‌ ಕ್ಲಾರ್ಕ್ ಪ್ರತಿಪಾದಿಸಿದ್ದಾರೆ. ಹೆಚ್ಚಾಗಿ ಈ ವಾದವನ್ನೇ ಜಗತ್ತಿನಾದ್ಯಂತ ನಂಬಲಾಗುತ್ತದೆ. ಏಕೆಂದರೆ, ಆ್ಯಂಬರ್‌ಗ್ರಿಸ್‌ನಲ್ಲಿ ಸ್ಕಿಡ್ವ್ ಇದ್ದರೆ ಮಾತ್ರ ಅದನ್ನು ನೈಜ ಎಂದು ವ್ಯಾಪಾರಿಗಳು ಪರಿಗಣಿಸುತ್ತಾರೆ. ತಿಂದ ಆಹಾರ ಜೀರ್ಣವಾಗದೆ ಸ್ಪಮ್‌ರ್‍ ವೇಲ್‌ ಅದನ್ನು ಉಗುಳಿದಾಗ ಆ್ಯಂಬರ್‌ಗ್ರಿಸ್‌ ಹೊರಬರುತ್ತದೆ ಎಂಬ ವಾದ ಕೂಡ ಜನಪ್ರಿಯವಾಗಿರುವುದರಿಂದ ಇದಕ್ಕೆ ‘ತಿಮಿಂಗಿಲ ವಾಂತಿ’ ಎಂಬ ಹೆಸರೂ ಇದೆ.

ಉದ್ಯಮಿ ಸೇರಿ ಜೋಡಿ ಕೊಲೆಗೆ ಬೆಚ್ಚಿ ಬಿದ್ದ ಧಾರವಾಡ, ರೌಡಿ ಶೀಟರ್‌ ಪುತ್ರ ಸೇರಿ 4 ಮಂದಿ

40 ದೇಶಗಳಲ್ಲಿದೆ ನಿಷೇಧ: ಸ್ಪಮ್‌ರ್‍ವೇಲ್‌ ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿರುವ ಕಾರಣ ಭಾರತ, ಅಮೆರಿಕ, ಆಸ್ಪ್ರೇಲಿಯಾ ಸೇರಿದಂತೆ 40 ದೇಶಗಳಲ್ಲಿ ಆ್ಯಂಬರ್‌ಗ್ರಿಸ್‌ ಮಾರಾಟಕ್ಕೆ ನಿಷೇಧವಿದೆ. 1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಸ್ಪಮ್‌ರ್‍ವೇಲ್‌ನ ಯಾವುದೇ ಉತ್ಪನ್ನವನ್ನು ಮಾರಾಟ ಮಾಡುವುದು ಭಾರತದಲ್ಲಿ ಅಪರಾಧ. ಹೀಗಾಗಿಯೇ ದೇಶದಲ್ಲಿ ಆ್ಯಂಬರ್‌ಗ್ರಿಸ್‌ ಹೊಂದಿದವರ ಬಂಧನವಾಗುತ್ತಿದೆ. ಮೊದಮೊದಲು ಕಳ್ಳಸಾಗಣೆದಾರರನ್ನು ವಶಕ್ಕೆ ಪಡೆದಾಗ ಅವರ ಬಳಿ ಇರುವ ಮೇಣದಂತಹ ವಸ್ತು ಏನೆಂದು ಗೊತ್ತಾಗದೆ ಪೊಲೀಸರೂ ಕಂಗಾಲಾಗಿದ್ದರು. ಅಧ್ಯಯನದ ಬಳಿಕ ಇದರ ಮಹತ್ವ ಅವರಿಗೆ ಅರಿವಾಯಿತು. ಒಂದು ವೇಳೆ ಆ್ಯಂಬರ್‌ಗ್ರಿಸ್‌ಗೆ ನಿಷೇಧ ಇಲ್ಲದೆ ಹೋದರೆ ಬೇಟೆಗಾರರು ಅಳಿವಿನಂಚಿನಲ್ಲಿರುವ ಈ ಪ್ರಾಣಿಯನ್ನು ಬೇಟೆಯಾಡಲೂ ಹೇಸುವುದಿಲ್ಲ ಎನ್ನುತ್ತಾರೆ ತಜ್ಞರು.

Bengaluru: ಒಂಟಿ ಮಹಿಳೆಯ ಕೈ-ಕಾಲು ಕಟ್ಟಿ ಉಸಿರು ಗಟ್ಟಿಸಿ ಹತ್ಯೆ, ಮನೆ ದರೋಡೆ!

ಭಾರತದಲ್ಲೂ ಇವೆ ಸ್ಪರ್ಮ್‌ ವೇಲ್‌: ಗುಜರಾತ್‌ ಹಾಗೂ ಒಡಿಶಾ ಸಮುದ್ರದಲ್ಲಿ ಸ್ಪರ್ಮ್ ವೇಲ್‌ಗಳು ಇವೆ. ಹವಾಮಾನ ಬದಲಾವಣೆಯಿಂದಾಗಿ ಇವು ದಕ್ಷಿಣದತ್ತ ಬಂದಿರಲೂಬಹುದು ಎಂಬ ಅಂದಾಜಿದೆ. ಮಹಾರಾಷ್ಟ್ರದಲ್ಲಿ ಆ್ಯಂಬರ್‌ಗ್ರಿಸ್‌ ಕಳ್ಳಸಾಗಣೆದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾವು ಅದನ್ನು ಕರ್ನಾಟಕದಿಂದ ತಂದಿದ್ದಾಗಿ ಬಂಧಿತರು ಹೇಳಿದ್ದರು. ತಮಿಳುನಾಡು ಪೊಲೀಸರು ಕೂಡ ಒಡಿಶಾದಿಂದ ಸ್ಪಮ್‌ರ್‍ವೇಲ್‌ಗಳು ತಮಿಳುನಾಡಿನತ್ತ ಬರುತ್ತಿರಬಹುದು ಎಂದು ಶಂಕಿಸಿದ್ದರು. ಆದರೆ ತೀರಾ ಅಪರೂಪಕ್ಕೆ ಸಿಗುವ ಆ್ಯಂಬರ್‌ಗ್ರಿಸ್‌ ಭಾರತದಲ್ಲಿ 2021ರಲ್ಲಿ ಈ ಪ್ರಮಾಣದಲ್ಲಿ ಪತ್ತೆಯಾಗಿದ್ದೇಕೆ? ಈ ಮೊದಲಿನಿಂದಲೂ ಇದರ ಕಳ್ಳಸಾಗಣೆ ನಡೆಯುತ್ತಿತ್ತಾ? ಈಗ ಈ ದಂಧೆ ಬಯಲಾಗಿದೆಯಾ? ಭಾರತದಿಂದ ಇದು ಎಲ್ಲಿಗೆ ಹೋಗುತ್ತದೆ? ಎಂಬುದಕ್ಕೆ ಉತ್ತರವಿಲ್ಲ.

Follow Us:
Download App:
  • android
  • ios