ಅಹ್ಮದಾಬಾದ್‌[ಜ.06]: ನಿಮ್ಮ ಮನೆಯ ನಾಯಿ ಬೇರೆಯವರಿಗೆ ತೊಂದರೆ ಕೊಡುತ್ತಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಇಲ್ಲದಿದ್ದರೆ ಕಂಬಿ ಎಣಿಸಬೇಕಾಗಬಹುದು. ಹೌದು ಪಕ್ಕದ ಮನೆಯ ನಾಲ್ವರಿಗೆ ಕಚ್ಚಿದ್ದಕ್ಕೆ ನಾಯಿಯ ಮಾಲೀಕರಿಗೆ ಸ್ಥಳೀಯ ನ್ಯಾಯಾಲಯವೊಂದು 1 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಇಲ್ಲಿನ ಘೋಡಾಸರ್‌ ನಿವಾಸಿ ಭರೇಶ್‌ ಪಾಂಡ್ಯಾ (49) ಎಂಬುವವರ ನಾಯಿ 2012 ಹಾಗೂ 2014ರಲ್ಲಿ ನೆರೆ ಮನೆಯ ಮೂವರು ಮಕ್ಕಳು ಸೇರಿ ನಾಲ್ಕು ಮಂದಿಗೆ ಗಾಯ ಮಾಡಿತ್ತು. ನಾಯಿ ದಾಳಿಯಿಂದ ಮೂಳೆ ಮುರಿತವಾಗಿದೆ ಎಂದು ಅವಿನಾಶ್‌ ಪಟೇಲ್‌ ಎಂಬುವವರು ಇಸಾನ್‌ಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದ.

ಮಾಲಿಕನ ಬೇಜವಾಬ್ದಾರಿಯಿಂದಾಗಿ ನಾಯಿ ದಾಳಿ ಮಾಡಿ ಜೀವಕ್ಕೆ ಅಪಾಯ ಉಂಟಾಗುವಂತೆ ದಾಳಿ ಮಾಡಿದೆ ಎಂದು ಪರಿಗಣಿಸಿ ನ್ಯಾಯಾಲಯ 1 ವರ್ಷ ಜೈಲು ಹಾಗೂ 1500ರು. ದಂಡ ವಿಧಿಸಿದೆ. 15 ಸಾಕ್ಷಿಗಳನ್ನು ವಿಚಾರಣೆ ನಡೆಸಿ ಕೋರ್ಟ್‌ ಈ ತೀರ್ಪು ನೀಡಿದೆ.