Businessman Adikeshavulu's son in NCB custody: ಖ್ಯಾತ ಉದ್ಯಮಿ ಆದಿಕೇಶವಲು ಮಗ ಡಿ.ಕೆ. ಶ್ರೀನಿವಾಸ್‌ ಅವರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ ತಡ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರನ್ನು ವಶಕ್ಕೆ ಪಡೆಯಲಾಗಿತ್ತು, ಈಗ ಅವರನ್ನು ಬಂಧಿಸಲಾಗಿದೆ. 

ಬೆಂಗಳೂರು, ಮೇ 24: ಬೆಂಗಳೂರಿನ ಖ್ಯಾತ ಉದ್ಯಮಿ ಆದಿಕೇಶವಲು ಮಗ ಡಿ.ಕೆ. ಶ್ರೀನಿವಾಸ್‌ ಅವರನ್ನು ಮಾದಕ ವಸ್ತು ಸಂಬಂಧಿತ ಪ್ರಕರಣದಲ್ಲಿ ಎನ್‌ಸಿಬಿ ಅಧಿಕಾರಿಗಳು ನಿನ್ನೆ ತಡರಾತ್ರಿ ವಶಕ್ಕೆ ಪಡೆದಿದ್ದರು, ಇದೀಗ ವಿಚಾರಣೆಯ ನಂತರ ಅವರನ್ನು ಬಂಧಿಸಿದ್ದಾರೆ. ನಿನ್ನೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುವಾಗ ಏರ್ ಪೋರ್ಟ್ ನಲ್ಲೆ ಉದ್ಯಮಿಯನ್ನ ಎನ್‌ಸಿಬಿ ತಂಡ ಬಂಧಿಸಿದೆ. ನಗರದ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಶೇರ್ ಹೋಲ್ಡರ್ ಆಗಿರುವ ಉದ್ಯಮಿ ಶ್ರೀನಿವಾಸ್‌ ಅವರ ವಿರುದ್ಧ ಮಾದಕ ವಸ್ತು ವ್ಯಸನದ ಆರೋಪವಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಂಧಿಸಲಾಗಿದೆ ಎಂದು ಉನ್ನತ ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ. 

ರಾತ್ರಿ ಸದಾಶಿವನಗರದ ಮನೆಯಲ್ಲಿ‌‌ ಎನ್‌ಸಿಬಿ ತಂಡ ಶೋಧ ಕಾರ್ಯವನ್ನೂ ಮಾಡಿದೆ. ಸದ್ಯ ಯಲಹಂಕದ ಎನ್‌ಸಿಬಿ ಕಚೇರಿಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗುತ್ತಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿರುವ ಬಗ್ಗೆ ಎನ್‌ಸಿಬಿ ತಂಡಕ್ಕೆ ಮೊದಲೇ ಮಾಹಿತಿ ಇತ್ತು, ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ತಕ್ಷಣ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಮೂಲಗಳು ತಿಳಿಸಿವೆ. 

ಈ ಹಿಂದೆ ಆದಿಕೇಶವುಲು ಮೊಮ್ಮಗ ಆದಿ ಅಂದರೆ ಈಗ ಎನ್‌ಸಿಬಿ ವಶದಲ್ಲಿರುವ ಶ್ರೀನಿವಾಸ್‌ ಮಗ ನಾಯಿಯ ಮೇಲೆ ಕಾರು ಹತ್ತಿಸಿ ಸುದ್ದಿಯಾಗಿದ್ದ. ಸುಮ್ಮನೆ ರಸ್ತೆ ಬದಿ ಮಲಗಿದ್ದ ನಾಯಿಯ ಮೇಲೆ ಬೇಕೆಂದೇ ಕಾರು ಹತ್ತಿಸಿ ಸಾಯಿಸಿದ್ದ. ಈ ಘಟನೆಯ ಸಂಬಂಧ ಪ್ರಾಣಿ ದಯಾ ಸಂಘಟನೆಗಳು ದೂರು ನೀಡಿದ್ದರು. ಶ್ರೀನಿವಾಸ್‌ಗೆ ಇಬ್ಬರು ಮಕ್ಕಳು ಒಬ್ಬ ಆದಿ ಮತ್ತೊಬ್ಬ ಗೀತಾ ವಿಷ್ಣು. ಗೀತಾ ವಿಷ್ಣು ಕೂಡ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಆರೋಪಿಯಾಗಿದ್ದ. ಬಂಧಿಸಲು ಹೋದಾಗ ಮಲ್ಯಾ ಆಸ್ಪತ್ರೆಗೆ ಸೇರಿದ್ದ ವಿಷ್ಣು, ಅಲ್ಲಿಂದಲೇ ತಪ್ಪಿಸಿಕೊಂಡಿದ್ದ. ಒಟ್ಟಿನಲ್ಲಿ ಉದ್ಯಮಿ ಆದಿಕೇಶವುಲು ಗಳಿಸಿದ್ದ ಪ್ರಖ್ಯಾತಿಯನ್ನು ಮಗ ಮತ್ತು ಮೊಮ್ಮಕ್ಕಳು ಕುಖ್ಯಾತಿ ಮಾಡುತ್ತಿದ್ದಾರೆ.