ಕುಟುಂಬ ನಿರ್ವಹಣೆಗಾಗಿ ಕಳ್ಳತನ ಶುರು| ಬಂಧಿತನಿಂದ 4.76 ಲಕ್ಷ ಮೌಲ್ಯದ 92 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಒಂದು ದ್ವಿ ಚಕ್ರವಾಹನ ಜಪ್ತಿ| ಚಿನ್ನಾಭರಣ ಮಳಿಗೆಗಳಲ್ಲಿ ಕದಿಯಲು ಸಂಚು ರೂಪಿಸಿದ್ದ ಆರೋಪಿ| 

ಬೆಂಗಳೂರು(ಮಾ.15): ಯೂಟ್ಯೂಬ್‌ ನೋಡಿ ಮಳಿಗೆಗಳಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಯೊಬ್ಬ ಮಲ್ಲೇಶ್ವರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಾಗಡಿ ರಸ್ತೆಯ ನಿವಾಸಿ ಸಂತೋಷ್‌ ಕುಮಾರ್‌ (23) ಬಂಧಿತ. ಆರೋಪಿಯಿಂದ 4.76 ಲಕ್ಷ ಮೌಲ್ಯದ 92 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಒಂದು ದ್ವಿ ಚಕ್ರವಾಹನ ಜಪ್ತಿ ಮಾಡಿದ್ದಾರೆ. ಆರೋಪಿ ಬಂಧನದಿಂದ ನಗರದ ಎರಡು ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಜನಾರ್ದನ್‌ ಟ್ರಸ್ಟ್‌ ಫೈನಾನ್ಸ್‌ ಸವೀರ್ಸ್‌ ಆ್ಯಂಡ್‌ ಇನ್‌ವೆಸ್ಟ್‌ಮೆಂಟ್‌ ಕಂಪನಿಯಲ್ಲಿ ಫೈನ್ಯಾನ್ಸಿಯಲ್‌ ಅನಾಲಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದ. ಬೇಗ ಶ್ರೀಮಂತನಾಗಬೇಕು ಎಂಬ ಆಸೆಯಿಂದ ತಾನು ದುಡಿದ ಲಕ್ಷಾಂತರ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದ. ಆದರೆ, ಷೇರಿನಲ್ಲಿ ನಷ್ಟ ಉಂಟಾಗಿತ್ತು. ಇತ್ತ ಮನೆಯ ಜವಾಬ್ದಾರಿಯನ್ನು ತಾನೇ ನಿಭಾಯಿಸಬೇಕಿರುವುದರಿಂದ ಕಂಪನಿಯಲ್ಲಿ ಸಿಗುತ್ತಿದ್ದ ವೇತನ ಜೀವನೋಪಾಯದ ಖರ್ಚಿಗೆ ಸಾಲುತ್ತಿರಲಿಲ್ಲ. ಆಗ ಆರೋಪಿ ಸಂತೋಷ್‌ಗೆ ಹೊಳೆದಿದ್ದು ಕಳ್ಳತನದ ದಾರಿ. ಆರೋಪಿ ಕಳ್ಳತನ ಮಾಡುವುದು ಹೇಗೆ ಎಂಬುದನ್ನು ಯೂಟ್ಯೂಬ್‌ನಲ್ಲಿ ಪರಿಶೀಲಿಸಿದ್ದ. ಚಿನ್ನಾಭರಣಗಳ ಮಳಿಗೆಗಳಲ್ಲಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಚಿನ್ನ ಕದಿಯುವುದನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಿದ್ದ. ಇದೇ ಮಾದರಿಯಲ್ಲಿ ನಗರದ ಚಿನ್ನಾಭರಣ ಮಳಿಗೆಗಳಲ್ಲಿ ಕದಿಯಲು ಸಂಚು ರೂಪಿಸಿದ್ದ.

ಗಂಗಾವತಿ: ಕಳುವು ಕೇಸ್‌ ಭೇದಿಸಿದಾಗ ಕೊಲೆ ಪ್ರಕರಣ ಬೆಳಕಿಗೆ..!

ಫೆ.21ರಂದು ಸಂಜೆ ಸಂಜೆ 7ಕ್ಕೆ ಮಲ್ಲೇಶ್ವರದ ಜೋಯಾಲುಕ್ಕಾಸ್‌ ಚಿನ್ನಾಭರಣ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಸಂತೋಷ್‌, ಅಲ್ಲಿನ ಸಿಬ್ಬಂದಿ ಸೈಯ್ಯದ್‌ ಸೈಫ್‌ವುದ್ದೀನ್‌ ಅವರಿಗೆ ಬ್ರಾಸ್‌ಲೇಟ್‌ ತೋರಿಸುವಂತೆ ಸೂಚಿಸಿದ್ದ. ಅದರಂತೆ ಸಿಬ್ಬಂದಿ ಬ್ರಾಸ್‌ಲೇಟ್‌ ತೋರಿಸಿ, ಪಕ್ಕದ ಕೌಂಟರ್‌ನಲ್ಲಿದ್ದ ಬೇರೆ ಗ್ರಾಹಕರ ಬಳಿ ಹೋಗಿದ್ದರು. ಕೆಲ ಸಮಯದ ಬಳಿಕ ಸಿಬ್ಬಂದಿ ಇತ್ತ ಬಂದಾಗ ಸಂತೋಷ್‌ 42.99 ಗ್ರಾಂ ಬ್ರಾಸ್‌ಲೇಟ್‌ನೊಂದಿಗೆ ಪರಾರಿಯಾಗಿದ್ದ. ಈ ಸಂಬಂಧ ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ಮಂಕಿಕ್ಯಾಪ್‌ ಮತ್ತು ಮಾಸ್ಕ್‌ ಧರಿಸಿದ್ದರಿಂದ ಮುಖ ಚಹರೆ ಪತ್ತೆಯಾಗಿರಲಿಲ್ಲ.

ಮಾ.11ರಂದು ಮಾರ್ಗೋಸಾ ರಸ್ತೆಯಲ್ಲಿರುವ ಕಲ್ಯಾಣ್‌ ಜುವೆಲ್ಲ​ರ್ಸ್‌ ಬಳಿ ಆರೋಪಿ ಸಂತೋಷ್‌ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ. ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣವನ್ನು ಒಪ್ಪಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.