Asianet Suvarna News Asianet Suvarna News

Bengaluru Robbery Case: ಸಾವಿನ ಭಯ ಹುಟ್ಟಿಸಿ ಹಣ, ಚಿನ್ನ ದೋಚಿದ್ದ ಬುಡಬುಡಿಕೆದಾಸ ಬಂಧನ

ಮೊಬೈಲ್‌ ಸಿಗ್ನಲ್‌ ಆಧಾರದ ಮೇಲೆ ಆನಂದ್‌ನನ್ನು ವಶಕ್ಕೆ ಪಡೆದ ಪೊಲೀಸರು 

Accused Arrested For Robbery Cases in Bengaluru grg
Author
First Published Sep 14, 2022, 2:54 PM IST

ಬೆಂಗಳೂರು(ಸೆ.14):  ಸಾವಿನ ಮನೆಯಲ್ಲಿ ಮತ್ತೆ ಸಾವಾಗುವ ಭಯ ಹುಟ್ಟಿಸಿ ದೋಷ ಪರಿಹಾರದ ನೆಪದಲ್ಲಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಖತರ್ನಾಕ್‌ ವ್ಯಕ್ತಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ರಸ್ತೆ ಹೆಗ್ಗನಹಳ್ಳಿ ಕ್ರಾಸ್‌ ನಿವಾಸಿ ಆನಂದ ಅಲಿಯಾಸ್‌ ಬುಡಬುಡುಕೆ ಕೃಷ್ಣಪ್ಪ (36) ಬಂಧಿತ. ಈತನಿಂದ .2 ಲಕ್ಷ ಮೌಲ್ಯದ 50 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆ.13ರಂದು ಜ್ಞಾನಭಾರತಿ 2ನೇ ಹಂತ ಕೆಪಿಎಸ್‌ಸಿ ಲೇಔಟ್‌ನ ನಿವೃತ್ತ ಕೇಂದ್ರ ಸರ್ಕಾರಿ ನೌಕರ ವರದರಾಜು ಎಂಬುವವರ ಪತ್ನಿಗೆ ವಂಚಿಸಿ ಪರಾರಿ ಆಗಿದ್ದ.

ಬುಡಬುಡಿಕೆ ಹಿನ್ನೆಲೆಯ ಆರೋಪಿ ಆನಂದ್‌, ನಗರದ ವಿವಿಧೆಡೆ ಸುತ್ತಾಡುತ್ತಿದ್ದ. ದೂರುದಾರ ವರದರಾಜು ಅವರ ತಂದೆ ಆ.6ರಂದು ನಿಧನರಾಗಿದ್ದರು. ಸಾಂಪ್ರದಾಯದಂತೆ ಮನೆ ಎದುರು ದೀಪ ಹಚ್ಚಿದ್ದರು. ಆ.13ರ ಮುಂಜಾನೆ 4ಕ್ಕೆ ಬುಡಬುಡಿಕೆ ಆನಂದ್‌, ವರದರಾಜು ಮನೆ ಬಳಿ ಬಂದು ‘ಈ ಮನೆಯಲ್ಲಿ ಒಂದು ಸಾವು ಆಗಿದೆ. ಇನ್ನೂ ಮೂರು ಸಾವು ಆಗುತ್ತವೆ’ ಎಂದು ಕೂಗಿದ್ದ. ಬೆಳಗ್ಗೆ 9.30ಕ್ಕೆ ವರದರಾಜು ಮನೆ ಬಳಿ ಬಂದ ಆನಂದ, ವರದರಾಜು ಪತ್ನಿ ಒಬ್ಬರೇ ಇರುವುದನ್ನು ಗಮನಿಸಿ ಮನೆಯಲ್ಲಿ ಇನ್ನೂ ಮೂರು ಸಾವುಗಳಾಗಲಿವೆ ಎಂದು ಭಯಪಡಿಸಿದ್ದ. ಈ ಸಾವುಗಳನ್ನು ತಪ್ಪಿಸಲು ಒಂದು ಪೂಜೆ ಮಾಡಿಸಬೇಕು. ಅದಕ್ಕೆ .5 ಸಾವಿರ ಖರ್ಚಾಗಲಿದೆ ಎಂದಿದ್ದ.

ನೇಣು ಹಾಕೋದನ್ನ ತಪ್ಪಿಸೋದು ಬಿಟ್ಟು ವಿಡಿಯೋ ಮಾಡಿದ ಭೂಪರು: ಮಾನವೀಯತೆ ಮರೆತು ಬಿಟ್ರಾ ಜನ?

ಬೊಟ್ಟಿಟ್ಟು ಚಿನ್ನಾಭರಣ ಪಡೆದಿದ್ದ!

ಈತನ ಮಾತು ನಂಬಿದ್ದ ವರದರಾಜು ಪತ್ನಿ, ಪೂಜೆ ಮಾಡಿಸಲು ಒಪ್ಪಿ, ಪೂಜೆಗೆ .5 ಸಾವಿರ ಕೊಟ್ಟಿದ್ದರು. ಈ ವೇಳೆ ಆಕೆ ಹಣೆಗೆ ಕಪ್ಪು ಬೊಟ್ಟು ಇರಿಸಿ, ಆಕೆಯಿಂದ ಚಿನ್ನದ ಓಲೆ, ಚಿನ್ನದ ಸರ ಪಡೆದು, ಆ.14ರಂದು ಮಧ್ಯಾಹ್ನ 12ಕ್ಕೆ ಪೂಜೆ ಮಾಡಿ ಆಭರಣ ವಾಪಾಸ್‌ ಕೊಡುವುದಾಗಿ ಹೇಳಿ ನಕಲಿ ಮೊಬೈಲ್‌ ಸಂಖ್ಯೆ ನೀಡಿ ತೆರಳಿದ್ದ. ಬಳಿಕ ವರದರಾಜು ಮನೆಗೆ ಬಂದಾಗ ಪತ್ನಿ ವಿಷಯ ಹೇಳಿದ್ದರು.

ಮೊಬೈಲ್‌ ಸಿಗ್ನಲ್‌ ನೀಡಿದ ಸುಳಿವು

ದೂರು ಆಧರಿಸಿ ತನಿಖೆಗೆ ಇಳಿದ ಪೊಲೀಸರು, ಬುಡಬುಡಿಕೆ ಜನ ಎಲ್ಲಿ ಹೆಚ್ಚು ವಾಸ ಆಗಿದ್ದಾರೆ ಎಂದು ಸುತ್ತಮುತ್ತಲ ಪ್ರದೇಶದಲ್ಲಿ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಹೆಗ್ಗನಹಳ್ಳಿ ಕ್ರಾಸ್‌ ನೀಲಗಿರಿ ತೋಪು ಬಳಿ ಕೆಲ ಬುಡಬುಡಿಕೆ ಜನರು ವಾಸ ಆಗಿರುವ ಮಾಹಿತಿ ಸಿಕ್ಕಿದೆ. ಇದರಲ್ಲಿ ಹೆಚ್ಚು ಸಕ್ರಿಯ ಆಗಿರುವ ವ್ಯಕ್ತಿ ಯಾರೆಂದು ತಿಳಿದು ಆತನ ಫೋಟೋ ಮತ್ತು ಮೊಬೈಲ್‌ ನಂಬರ್‌ ಪಡೆದು ಪರಿಶೀಲಿಸಿದಾಗ, ಆ.13ರಂದು ಆರೋಪಿ ಆನಂದ್‌, ವರದರಾಜು ಮನೆಯ ಬಳಿ ಬಂದಿರುವ ಬಗ್ಗೆ ಮೊಬೈಲ್‌ ಸಿಗ್ನಲ್‌ ಲಭ್ಯವಾಗಿದೆ. ಇದರ ಆಧಾರದ ಮೇಲೆ ಆನಂದ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದಾನೆ.
 

Follow Us:
Download App:
  • android
  • ios