Asianet Suvarna News Asianet Suvarna News

ಪತಿ ಹತ್ಯೆಗೈದು ಮನೆಯಲ್ಲಿ ಹೂತು ಹಾಕಿದ್ದ ಪ್ರಕರಣ: 15 ವರ್ಷಗಳ ಬಳಿಕ ಆರೋಪಿಗಳು ಅರೆಸ್ಟ್‌

ಜಯನಗರದ ಕೊಲೆಯಾದ ಸ್ಥಳದಲ್ಲಿ ಮತ್ತೆ ತನಿಖೆ ಮುಂದುವರಿಕೆ| 15 ವರ್ಷ ಹಿಂದಿ​ನ ಕೊಲೆ ಪ್ರಕರಣ| ಲಕ್ಷ್ಮೀ ಸಿಂಗ್‌ ಬೇರೆಯವರ ಜೊತೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ| ತನ್ನ ಪತಿಯನ್ನು ಸಾಯಿಸಬೇಕೆಂದು ನಿರ್ಧರಿಸಿದ್ದ ಲಕ್ಷ್ಮೀ ಸಿಂಗ್‌|

Accused Arrest on Murder Case After 15 Years in Gangavati in Koppal District
Author
Bengaluru, First Published Jun 12, 2020, 12:41 PM IST

ಗಂಗಾವತಿ(ಜೂ.12): 15 ವರ್ಷದ ಹಿಂದೆ ಪತಿಯನ್ನು ಹತ್ಯೆಗೈದು ಮನೆಯಲ್ಲಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದಿರುವ ನಗರ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.

ಈ ಪ್ರಕರಣವನ್ನು ಕಳೆದ ಜೂ.2 ರಂದು 15 ವರ್ಷಗಳ ಬಳಿಕ ಪೊಲೀಸರು ಬೇಧಿಸಿದ್ದು, ಮೃತ ಪಂಪಾಪತಿ ಅಲಿಯಾಸ್‌ ಶಂಕರ ಸಿಂಗ್‌ ಅವರ ಪತ್ನಿ ಲಕ್ಷ್ಮೇಸಿಂಗ್‌ ಸೇರಿದಂತೆ ಐವರನ್ನು ಬಂಧಿಸಿದ್ದರು. ಲಕ್ಷ್ಮೇ ಸಿಂಗ್‌ ಅವರು ಅಮ್ಜದ್‌ ಖಾನ್‌, ಅಬ್ದುಲ್‌ ಹಫೀಜ್‌, ಬಾಬಾ ಜಾಕೀರ್‌, ಬಾಷಾ ಅವರ ಜೊತೆ ಸೇರಿ 2005 ರಲ್ಲಿ ಪತಿ ಶಂಕರ ಸಿಂಗ್‌ ಅವರನು ಹತ್ಯೆಗೈದು ಮನೆಯಲ್ಲಿಯೇ ಹೂತು ಹಾಕಿದ್ದರು. ಬಳಿಕ ಆ ಮನೆಯನ್ನು 2015 ರಲ್ಲಿ ಶಿವನಗೌಡ ಈಳಗನೂರು ಅವರಿಗೆ ಮಾರಾಟ ಮಾಡಿದ್ದರು.

ತ್ರಿಕೋನ ಪ್ರೇಮ ದುರಂತ; ಮಾಜಿ ಪ್ರಿಯಕರನಿಂದ ಹಲ್ಲೆಗೊಳಗಾದ ಮೋನಿಕ ಸಾವು

ಶಿವನಗೌಡ ಮನೆಯ ದುರಸ್ತಿ ಸಂದರ್ಭದಲ್ಲಿ ಶವದ ಅಸ್ತಿ ಪಂಜರ ಪತ್ತೆಯಾಗಿತ್ತು. ಇತ್ತೀ​ಚಿಗೆ ತನ್ನ ತಂದೆ ಕೊಲೆಗೆ ತಾಯಿ ಸೇರಿ ಐವರು ಕಾರಣ ಎಂದು ಶಂಕರ್‌ ಸಿಂಗ್‌ ಪುತ್ರಿ ವಿದ್ಯಾಸಿಂಗ್‌ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ಇವರನ್ನು ಬಂಧಿಸಿದ್ದರು. ಇದೀಗ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮನೆಯ ಮಾಲಿಕ ಶಿವನಗೌಡ ಈಳಗನೂರು ಸೇರಿದಂತೆ ಎಲ್ಲರನ್ನೂ ಸ್ಥಳಕ್ಕೆ ಕರೆದೊಯ್ದು ತನಿಖೆ ಕೈಗೊಂಡಿದ್ದಾರೆ.

ಏನಿದು ಪ್ರಕರಣ?

ಇಲ್ಲಿಯ ಜಯನಗರದಲ್ಲಿ ವಾಸವಾಗಿದ್ದ ಲಕ್ಷ್ಮೀ ಸಿಂಗ್‌ ಎನ್ನುವವರು ಪಂಪಾಪತಿ ಶಂಕರ ಸಿಂಗ್‌ ಜೊತೆ ವಿವಾಹವಾಗಿದ್ದರು. ಅಲ್ಲದೇ ಲಕ್ಷ್ಮೀ ಸಿಂಗ್‌ ಬೇರೆಯವರ ಜೊತೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಷಯ ಗಂಡ ಪಂಪಾಪತಿಗೆ ತಿಳಿದಿದ್ದರಿಂದ ಹಲವಾರು ಬಾರಿ ಪತ್ನಿ ಜೊತೆ ಜಗಳವಾಗಿ​ತ್ತು. ಹೀಗಾ​ಗಿ, ಲಕ್ಷ್ಮೀ ಸಿಂಗ್‌ ತನ್ನ ಪತಿಯನ್ನು ಸಾಯಿಸಬೇಕೆಂದು ನಿರ್ಧರಿಸಿದ್ದರು. ಇದಕ್ಕೆ ಪ್ಲಾನ್‌ ಮಾಡಿದ ಲಕ್ಷ್ಮೀ ಸಿಂಗ್‌ 2005ರಲ್ಲಿ ಅನೈತಿಕ ಸಂಬಂಧ ಹೊಂದಿದವರ ಜೊತೆಗೂಡಿ ಚಹಾದಲ್ಲಿ ನಿದ್ರೆ ಮಾತ್ರೆ ಹಾಕಿ ಕುತ್ತಿಗೆ ಹಿಸುಕಿ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿಕೊಲೆ ಮಾಡಿದ್ದಳಂತೆ. ಆನಂತರ ಲಕ್ಷ್ಮೀ ಸಿಂಗ್‌ ತಾನು ವಾಸವಾಗಿದ್ದ ಸ್ವಂತ ಮನೆ ಮತ್ತು ಜಾಗವನ್ನು ಶಿವನಗೌಡ ಎನ್ನುವರಿಗೆ 2015ರಲ್ಲಿ ಮಾರಾಟ ಮಾಡಿದ್ದಳು.

15 ವರ್ಷಗಳ ಹಿಂದೆ ಲಕ್ಷ್ಮೀ ಸಿಂಗ್‌ ತನ್ನ ಗಂಡ ಪಂಪಾಪತಿ ಅಲಿಯಾಸ್‌ ಶಂಕರ್‌ ಸಿಂಗ್‌ ಅವರನ್ನು ಜಯನಗರದ ಮನೆಯೊಂದರಲ್ಲಿ ಕೊಲೆ ಮಾಡಿ ಹೂತಿಟ್ಟಿದ್ದ ಸ್ಥಳಕ್ಕೆ ಐದು ಅರೋಪಿಗಳನ್ನು ಕರೆದುಕೊಂಡು ಹೋಗಿ ತನಿಖೆ ಕೈಗೊಳ್ಳಲಾಗಿದೆ. ಇದ​ಕ್ಕಾ​ಗಿ ನ್ಯಾ​ಯಾಲಯದಿಂದ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಡಿವೈಎಸ್ಪಿ ಡಾ. ಬಿ.ಪಿ. ಚಂದ್ರಶೇಖರ್‌ ಹೇಳಿದ್ದಾರೆ. 
 

Follow Us:
Download App:
  • android
  • ios