ಅಪಘಾತ: ಸಂತ್ರಸ್ತ ಹಿರಿಯ ನಾಗರಿಕಗೆ ದುಪ್ಪಟ್ಟು ಪರಿಹಾರ -2011ರ ಮೇ 20ರಂದು ನಡೆದಿದ್ದ ಅಪಘಾತ ಪ್ರಕರಣ ಬೈಕ ಸವಾರಗೆ ಪೆಟ್ರೋಲ್ ಟ್ಯಾಂಕರ್ ಡಿಕ್ಕಿ
ವೆಂಕಟೇಶ್ ಕಲಿಪಿ
ಬೆಂಗಳೂರು (ಸೆ.5) : ಅಪಘಾತದಿಂದ 22 ದಿನ ಪ್ರಜ್ಞಾಹೀನರಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ನೆನಪಿನ ಶಕ್ತಿ ಕೊರತೆ ಸಮಸ್ಯೆ ಹಾಗೂ ಶೇ. 75ರಷ್ಟುಅಂಗವೈಕಲ್ಯರಾಗಿರುವುದನ್ನು ಪರಿಗಣಿಸಿ, ಸಂತ್ರಸ್ತ ಹಿರಿಯ ನಾಗರಿಕರಿಗೆ ಮೋಟಾರು ವಾಹನ ನ್ಯಾಯಾಧೀಕರಣ ಪ್ರಕಟಿಸಿದ್ದ ಪರಿಹಾರದ ಮೊತ್ತವನ್ನು ಹೈಕೋರ್ಚ್ ದುಪ್ಪಟ್ಟುಗೊಳಿಸಿ ನೆರವಿನ ಹಸ್ತ ಚಾಚಿದೆ. ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಹಲವು ದಿನ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬೆಂಗಳೂರು ನಗರದ ಮಾರತಹಳ್ಳಿ ನಿವಾಸಿ ಮುನಿಯಪ್ಪ (72) ಅವರಿಗೆ ನಗರದ ಮೋಟಾರು ವಾಹನ ನ್ಯಾಯಾಧೀಕರಣ ಪ್ರಕಟಿಸಿದ್ದ 8,44,356 ರು. ಅನ್ನು 15,67,500 ರು.ಗೆ ಹೆಚ್ಚಿಸಿ ಹೈಕೋರ್ಚ್ ಆದೇಶಿಸಿದೆ.
ಸ್ವಂತ ಖರ್ಚಲ್ಲಿ ವಿಚಾರಣೆಗೆ ಬರಲು ಅಧಿಕಾರಿಗೆ ಸೂಚನೆ: ತಪ್ಪು ಮಾಹಿತಿ ನೀಡಿದ ಆಯುಕ್ತ ವಿರುದ್ಧ ಹೈಕೋರ್ಟ್ ಗರಂ
ಅಲ್ಲದೆ, ಅಪಘಾತ ಸಂಭವಿಸಿದ ದಿನದಿಂದ ಪರಿಹಾರ ಮೊತ್ತದ ಪಾವತಿಸುವ ದಿನಾಂಕದವರೆಗೆ ನ್ಯಾಯಾಲಯ ನಿಗದಿಪಡಿಸಿರುವ ಪರಿಹಾರ ಮೊತ್ತಕ್ಕೆ ಶೇ.6ರಷ್ಟುಬಡ್ಡಿದರ ಪಾವತಿಸಬೇಕು. ಮೊದಲಿಗೆ ವಿಮಾ ಕಂಪನಿ ಸಂತ್ರಸ್ತರಿಗೆ ಪರಿಹಾರ ಹಣ ಪಾವತಿಸಬೇಕು. ನಂತರ ಆ ಮೊತ್ತವನ್ನು ಪ್ರಕರಣದಲ್ಲಿ ಅಪಘಾತಕ್ಕೆ ಕಾರಣವಾದ ಪೆಟ್ರೋಲ್ ಟ್ಯಾಂಕರಿನ ಮಾಲೀಕರಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ನಿವಾಸಿ ಶಿವಣ್ಣ ಅವರಿಂದ ವಸೂಲಿ ಮಾಡಿಕೊಳ್ಳಬೇಕು ಎಂದು ಹೈಕೋರ್ಚ್ ನಿರ್ದೇಶಿಸಿದೆ.
ಪ್ರಕರಣದ ವಿವರ: ಮುನಿಯಪ್ಪ 2011ರ ಮೇ 20ರಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಶಿವಣ್ಣ ಒಡೆತನದ ಪೆಟ್ರೋಲ್ ಟ್ಯಾಂಕರ್ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಮುನಿಯಪ್ಪ ತಲೆಗೆ ತೀವ್ರವಾಗಿ ಪೆಟ್ಟಾಗಿತ್ತು. ಪ್ರಕರಣದಲ್ಲಿ ಪರಿಹಾರ ಕೋರಿ ಮುನಿಯಪ್ಪ ಮೋಟಾರು ವಾಹನ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಕರಣ ಮುನಿಯಪ್ಪಗೆ 8,44,356 ರು. ಪರಿಹಾರ ಪ್ರಕಟಿಸಿ ಆದೇಶಿಸಿತ್ತು.
ಅಪಘಾತಕ್ಕೆ ಕಾರಣವಾಗಿದ್ದ ಪೆಟ್ರೋಲ್ ಟ್ಯಾಂಕರ್ ಚಾಲಕ ಕೇವಲ ಭಾರೀ ಸರಕು ವಾಹನ ಚಾಲನಾ ಪರವಾನಗಿ ಹೊಂದಿದ್ದ. ಆದರೆ, ಪೆಟ್ರೋಲ್ ಟ್ಯಾಂಕರ್ ಚಲಾಯಿಸಲು ಹೆಚ್ಚುವರಿ ಧೃಢೀಕರಣ ಪತ್ರ ಹೊಂದಿರಬೇಕು. ಈ ಅಂಶ ಮುಂದಿಟ್ಟುಕೊಂಡು ನ್ಯಾಯಾಧೀಕರಣ ಸಂತ್ರಸ್ತರಿಗೆ ಪರಿಹಾರ ಹಣ ಪಾವತಿಯ ಹೊಣೆಯನ್ನು ಟ್ಯಾಂಕರ್ ಮಾಲೀಕ ಶಿವಣ್ಣ ಮೇಲೆ ಹೊರಿಸಿತ್ತು. ನ್ಯಾಯಾಧೀಕರಣದ ಈ ಆದೇಶ ರದ್ದು ಕೋರಿ ವಾಹನ ಮಾಲೀಕ ಹೈಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮತ್ತೊಂದೆಡೆ ಪರಿಹಾರ ಮೊತ್ತ ಹೆಚ್ಚಳಕ್ಕೆ ಕೋರಿ ಸಂತ್ರಸ್ತ ಮುನಿಯಪ್ಪ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.
ಆದೇಶವೇನು ?: ಪ್ರಕರಣದ ವಿವರ ಹಾಗೂ ದಾಖಲೆ ಪರಿಶೀಲಿಸಿದ ಹೈಕೋರ್ಚ್, ಅಪಘಾತ ನಡೆದಾಗ ಸಂತ್ರಸ್ತ ಮುನಿಯಪ್ಪಗೆ 61 ವರ್ಷವಾಗಿತ್ತು. ಆಗ ಅವರ ಮಾಸಿಕ ಆದಾಯ 4 ಸಾವಿರ ರು. ಆಗಿತ್ತು ಎಂಬುದಾಗಿ ಪರಿಗಣಿಸಿ ನ್ಯಾಯಾಧೀಕರಣವು ಒಟ್ಟು 8,44,356 ರು. ಪರಿಹಾರ ನಿಗದಿಪಡಿಸಿದೆ. ಆದರೆ, ಚಿಕಿತ್ಸೆ ಕಲ್ಪಿಸಿದ ವೈದ್ಯರು ಹೇಳಿರುವ ಪ್ರಕಾರ ಮುನಿಯಪ್ಪ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಇದರಿಂದ ಅವರು 22 ದಿನ ಪ್ರಜ್ಞಾಹೀನರಾಗಿ, ವೆಂಟಿಲೇಷನ್‌ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಚೇತರಿಕೆಯಾದ ಬಳಿಕವೂ ನೆನಪಿನ ಶಕ್ತಿ ಕೊರತೆ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ತಿಳಿಸಿದೆ.
ಜತೆಗೆ, ಕೈ-ಕಾಲು ಮತ್ತು ಬೆನ್ನುಮೂಳೆಗೂ ದೊಡ್ಡ ಪೆಟ್ಟುಬಿದ್ದು, ಅವರು ಶೇ.75ರಷ್ಟುಅಂಗವೈಕಲ್ಯಕ್ಕೆ ಗುರಿಯಾಗಿದ್ದಾರೆ. ಜೀವನಾಧಾರಕ್ಕೆ ಯಾವುದೇ ಕೆಲಸ ಮಾಡಲು ಸಹ ಅಶಕ್ತರಾಗುವ ಮೂಲಕ ಭವಿಷ್ಯದ ಆದಾಯ ಗಳಿಕೆ ಅವಕಾಶ ಕಳೆದುಕೊಂಡಿದ್ದಾರೆ. ಆದ್ದರಿಂದ ಹೆಚ್ಚಿನ ಪರಿಹಾರ ಮೊತ್ತ ಪಡೆಯಲು ಮುನಿಯಪ್ಪ ಅರ್ಹರಾಗಿದ್ದಾರೆ ಎಂದು ತೀರ್ಮಾನಿಸಿದ ಹೈಕೋರ್ಚ್, ನ್ಯಾಯಾಧೀಕರಣದ ಆದೇಶ ಮಾರ್ಪಡಿಸಿ, ಪರಿಹಾರ ಮೊತ್ತವನ್ನು 15,67,500 ರು.ಗೆ ಹೆಚ್ಚಿಸಿದೆ.
ಭಂಗಿ ನಿಷೇಧಿತ ಮಾದಕದ್ರವ್ಯ ಪಟ್ಟಿಯಲ್ಲಿ ಇಲ್ಲ: ಹೈಕೋರ್ಟ್
ಪಾವತಿ, ವಸೂಲಿ ನಿಯಮ ಬದಲಿಸಲಾಗದು:
ಅಪಘಾತಕ್ಕೆ ಕಾರಣವಾದ ವಾಹನದ ಚಾಲಕ ಸೂಕ್ತ ಚಾಲನಾ ಪರವಾನಗಿ ಹೊಂದಿರದೇ ಇದ್ದರೆ ಪ್ರಕರಣದ ಸಂತ್ರಸ್ತರಿಗೆ ಪರಿಹಾರ ಮೊತ್ತ ಪಾವತಿಸುವ ಹೊಣೆ ವಾಹನ ಮಾಲೀಕರದ್ದಾಗಿರುತ್ತದೆ. ಆದರೆ, ವಾಹನಕ್ಕೆ ವಿಮಾ ಸೌಲಭ್ಯವಿದ್ದರೆ, ವಿಮಾ ಕಂಪನಿ ಮೊದಲಿಗೆ ಸಂತ್ರಸ್ತರಿಗೆ ಪರಿಹಾರ ಹಣ ಪಾವತಿಸಿ ನಂತರ ಅದನ್ನು ವಾಹನ ಮಾಲೀಕನಿಂದ ವಸೂಲಿ ಮಾಡಬೇಕು ಎಂಬುದು ರೂಢಿಯಲ್ಲಿರುವ ನಿಯಮ. ಆದರೆ, ಶಿವಣ್ಣ ಮಾತ್ರ ಪರಿಹಾರ ಕ್ಲೇಮು ಅರ್ಜಿ ವಿಚಾರಣೆಯಲ್ಲಿ ವಾಹನ ಮಾಲೀಕ ಪಾಲ್ಗೊಂಡಿದ್ದರೆ (ಕಂಟೆಸ್ಟ್) ಅಥವಾ ಪರಿಹಾರ ನಿಗದಿ ಆದೇಶವನ್ನು ಮೇಲಿನ ಕೋರ್ಚ್‌ನಲ್ಲಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಸಂದರ್ಭದಲ್ಲಿ ಈ ‘ಪಾವತಿ ಮತ್ತು ವಸೂಲಿ’ ನಿಯಮ ಅನ್ವಯಿಸುವುದಿಲ್ಲ ಎಂದು ಪ್ರತಿಪಾದಿಸಿದ್ದರು. ಈ ವಾದ ತಪ್ಪು ಕಲ್ಪನೆಯಿಂದ ಕೂಡಿದ್ದು, ಯಾವ ರೀತಿಯಲ್ಲೂ ಒಪ್ಪಲಾಗದು. ಕಂಟೆಸ್ಟ್ ಮಾಡಿದ ಅಥವಾ ಮೇಲ್ಮನವಿ ಸಲ್ಲಿಸಿದ ಕಾರಣಕ್ಕೆ ಪಾವತಿ ಮತ್ತು ವಸೂಲಿ ನಿಯಮವನ್ನು ಬದಲಿಸಲಾಗದು ಎಂದು ಹೈಕೋರ್ಚ್ ಆದೇಶಿಸಿದೆ.
