ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ (ಎನ್‌ಡಿಪಿಎಸ್) ಕಾಯ್ದೆಯಡಿ ಭಂಗಿಯನ್ನು(ಭಾಂಗ್) ನಿಷೇಧಿತ ಮಾದಕ ಪದಾರ್ಥ ಅಥವಾ ಪಾನೀಯ (ಡ್ರಿಂಕ್) ಎಂಬುದಾಗಿ ಘೋಷಿಸಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಬೆಂಗಳೂರು (ಆ.30): ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ (ಎನ್‌ಡಿಪಿಎಸ್) ಕಾಯ್ದೆಯಡಿ ಭಂಗಿಯನ್ನು(ಭಾಂಗ್) ನಿಷೇಧಿತ ಮಾದಕ ಪದಾರ್ಥ ಅಥವಾ ಪಾನೀಯ (ಡ್ರಿಂಕ್) ಎಂಬುದಾಗಿ ಘೋಷಿಸಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, 29 ಕೆ.ಜಿ. ಭಂಗಿ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಬಿಹಾರ ಮೂಲದ ಯುವಕನಿಗೆ ಜಾಮೀನು ನೀಡಿದೆ. ಪ್ರಕರಣ ಸಂಬಂಧ ಜಾಮೀನು ಕೋರಿ ಆರೋಪಿ ರೋಷನ್ ಕುಮಾರ್ ಮಿಶ್ರಾ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.
ಚರಸ್, ಗಾಂಜಾ ಅಥವಾ ಗಾಂಜಾ ಎಲೆಗಳಿಂದ ಭಂಗಿಯನ್ನು ಉತ್ಪಾದಿಸಲಾಗುತ್ತದೆ ಎಂಬುದನ್ನು ಸಾಬೀತುಪಡಿಸುವ ವೈಜ್ಞಾನಿಕ ಸಾಕ್ಷ್ಯಗಳು ನ್ಯಾಯಾಲಯದ ಮುಂದಿಲ್ಲ. ಎನ್‌ಡಿಪಿಎಸ್ ಕಾಯ್ದೆಯಡಿ ಗಾಂಜಾ ಎಲೆ ಮತ್ತು ಬೀಜವನ್ನು ‘ಗಾಂಜಾ’ ವ್ಯಾಖ್ಯಾನದಿಂದ ಹೊರಗಿಡಲಾಗಿದೆ. ಭಂಗಿಯು ನಿಷೇಧಿತ ಮಾದಕ ದ್ರವ್ಯ ಅಥವಾ ಪಾನೀಯ ಎಂಬುದಾಗಿ ಎನ್‌ಡಿಪಿಎಸ್ ಕಾಯ್ದೆಯಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಬೆಂಗಳೂರು: ಚಾಮರಾಜಪೇಟೆಯ ವಿವಾದಿತ ಈದ್ಗಾದಲ್ಲಿ ಗಣೇಶೋತ್ಸವ ಬಹುತೇಕ ಖಚಿತ
ಪ್ರಕರಣದ ವಿವರ: ಮಸ್ತಿ ಮುನಕ ಕಂಪನಿ ಹೆಸರಿನ 10 ಕೆ.ಜಿ ಮತ್ತು ತರಂಗ ಕಂಪನಿ ಹೆಸರಿನ 14 ಕೆ.ಜಿ ಸೇರಿದಂತೆ 63 ಪಾಕೆಟ್‌ನಲ್ಲಿ 29 ಕೆ.ಜಿ. ಭಂಗಿ ಮತ್ತು 400 ಗ್ರಾಂ ಗಾಂಜಾವನ್ನು ತೆಗೆದುಕೊಂಡು ಹೋಗುವಾಗ ರೋಷನ್‌ಕುಮಾರ್ ಮಿಶ್ರಾನನ್ನು ಬೇಗೂರು ಠಾಣಾ ಪೊಲೀಸರು 2022ರ ಜು.1ರಂದು ಬಂಧಿಸಿದ್ದರು. ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದ ರೋಷನ್, ಜಾಮೀನು ಕೋರಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ಆತ ಹೈಕೋರ್ಟ್ ಮೊರೆ ಹೋಗಿದ್ದ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್.ಮನೋಜ್ ಕುಮಾರ್ ವಾದಿಸಿ, ಭಂಗಿಯು ಪಾನೀಯ ಪದಾರ್ಥವಾಗಿದೆ. ಅದನ್ನು ಉತ್ತರ ಭಾರತದಲ್ಲಿ ಮಾರಾಟ ಮಾಡುವುದು ಸಾಮಾನ್ಯ. ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಈ ಪಾನೀಯ ಸೇವಿಸಲಾಗುತ್ತದೆ. ಎನ್‌ಡಿಪಿಎಸ್ ಕಾಯ್ದೆಯಡಿ ಭಂಗಿ ನಿಷೇಧಿತ ಪದಾರ್ಥವಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು. ಇದಕ್ಕೆ ಪ್ರತಿಯಾಗಿ ಸರ್ಕಾರಿ ವಕೀಲರು, ಗಾಂಜಾ ಎಲೆಗಳಿಂದ ಭಂಗಿಯನ್ನು ಉತ್ಪಾದಿಸಲಾಗುತ್ತದೆ. ಅದು ಗಾಂಜಾ ವ್ಯಾಖ್ಯಾನದಡಿಗೆ ಒಳಪಡುತ್ತದೆ. ಆದ್ದರಿಂದ ಆರೋಪಿಗೆ ಜಾಮೀನು ನೀಡಬಾರದು ಎಂದು ಕೋರಿದ್ದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಭಂಗಿಯು ಗಾಂಜಾವಲ್ಲ ಮತ್ತು ಎನ್‌ಡಿಪಿಎಸ್ ಕಾಯ್ದೆಯಡಿ ನಿಷೇಧಿತ ಪದಾರ್ಥ ವ್ಯಾಪ್ತಿಗೆ ಬರುವುದಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ನೀಡುವವರೆಗೂ ಭಂಗಿಯನ್ನು ಗಾಂಜಾ ಎಲೆ ಅಥವಾ ಚರಸ್‌ನಿಂದ ಉತ್ಪಾದನೆ ಮಾಡಲಾಗುತ್ತದೆ ಎಂಬುದಾಗಿ ನಿರ್ಧರಿಸಲಾಗದು. ಆರೋಪಿಯಿಂದ 400 ಗ್ರಾಂ ಗಾಂಜಾ ವಶಪಡಿಸಿಕೊಂಡಿರುವುದು ಸಣ್ಣ ಪ್ರಮಾಣದ್ದಾಗಿದ್ದು, ಜಾಮೀನು ಪಡೆಯಲು ರೋಷನ್ ಅರ್ಹನಾಗಿದ್ದಾನೆ ಎಂದು ತೀರ್ಮಾನಿಸಿ, ಎರಡು ಲಕ್ಷ ರು. ವೈಯಕ್ತಿಕ ಬಾಂಡ್ ಒದಗಿಸಬೇಕು ಎಂದು ಷರತ್ತು ವಿಧಿಸಿ ರೋಷನ್‌ಗೆ ಜಾಮೀನು ನೀಡಿ ಆದೇಶಿಸಿದೆ.
ಲಸ್ಸಿ ಮಳಿಗೆಯಲ್ಲಿ ಭಂಗಿ ಲಭ್ಯ: ಭಂಗಿಯು ಸಾಂಪ್ರದಾಯಿಕ ಪಾನೀಯವಾಗಿದ್ದು, ಉತ್ತರ ಭಾರತದಲ್ಲಿ ಅದರಲ್ಲೂ ಶಿವ ದೇವಸ್ಥಾನದ ಸಮೀಪದಲ್ಲಿ ಅದನ್ನು ಬಹುತೇಕ ಜನ ಸೇವಿಸುವುದು ಸಾಮಾನ್ಯವಾಗಿದೆ. ಅಲ್ಲದೆ, ಲಸ್ಸಿ ಮಳಿಗೆಗಳಲ್ಲಿ ಇತರೆ ಪಾನೀಯಗಳಂತೆ ಭಂಗಿ ಲಭ್ಯವಾಗುತ್ತದೆ. ವಿವಿಧ ಬ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಅದನ್ನು ಮಾರಾಟ ಮಾಡಲಾಗುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಸರ್ಕಾರ ಅವಕಾಶ ಕೊಡುತ್ತಾ? ಸಿಎಂ ಹೇಳಿದ್ದೇನು?
ಹೈಕೋರ್ಟ್ ಹೇಳಿದ್ದೇನು?
- ಮಾದಕ ದ್ರವ್ಯ ಕಾಯ್ದೆಯಡಿ ಭಂಗಿ/ ಭಾಂಗ್ ನಿಷೇಧಿತ ಮಾದಕ ಪದಾರ್ಥ ಎಂದು ಹೇಳಿಲ್ಲ
- ಚರಸ್, ಗಾಂಜಾದಿಂದ ಭಂಗಿ ಉತ್ಪಾದಿಸಲಾಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲ
- ಎನ್‌ಡಿಪಿಎಸ್ ಕಾಯ್ದೆಯಡಿ ಗಾಂಜಾ ಎಲೆ ಮತ್ತು ಬೀಜ ‘ಗಾಂಜಾ’ ವ್ಯಾಖ್ಯಾನದಿಂದ ಹೊರಗಿದೆ
- ಉತ್ತರ ಭಾರತದಲ್ಲಿ ಭಾಂಗ್ ಸೇವಿಸುವುದು ಸಾಮಾನ್ಯ, ಲಸ್ಸಿ ಮಳಿಗೆಯಲ್ಲೂ ಅದು ಸಿಗುತ್ತದೆ
- ಹೀಗಾಗಿ ಭಂಗಿ ಸಾಗಿಸುತ್ತಿದ್ದ ವ್ಯಕ್ತಿಗೆ ಜಾಮೀನು ನೀಡಬಹುದು
