Look Out Notice : ಬ್ಯಾಂಕ್‌ಗಳಿಗೆ 23 ಸಾವಿರ ಕೋಟಿ ವಂಚನೆ, ದೇಶ ಬಿಡದಂತೆ ಲುಕ್‌ಔಟ್ ನೋಟಿಸ್
* 23 ಸಾವಿರ ಕೋಟಿ ರು. ಬ್ಯಾಂಕ್ ವಂಚನೆ ಕೇಸ್: ಲುಕ್‌ಔಟ್ ನೋಟಿಸ್
* ಪ್ರಕರಣದ ಆರೋಪಿಗಳು ಪರಾರಿಯಾಗದಂತೆ ಈ ಕ್ರಮ
* ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣ
* 2005ರಿಂದ 2012ರವರೆಗೆ ಎಸ್‌ಬಿಐ ಸೇರಿದಂತೆ 28 ಬ್ಯಾಂಕ್‌ಗಳಿಂದ ಸಾಲ
ನವದೆಹಲಿ (ಫೆ. 16) ದೇಶದ (India) 28 ಬ್ಯಾಂಕ್‌ಗಳಿಗೆ 23000 ಕೋಟಿ ರು. ವಂಚಿಸಿದ (Fraud)ಆರೋಪ ಎದುರಿಸುತ್ತಿರುವ ಎಬಿಜಿ ಶಿಪ್‌ಯಾರ್ಡ್ ಕಂಪನಿಯ ಪ್ರಮುಖರು ದೇಶ ತೊರೆಯದಂತೆ ಲುಕೌಟ್ ನೋಟಿಸ್ (Look Out Notice) ಜಾರಿಗೊಳಿಸಲಾಗಿದೆ. ಈ ಪ್ರಕಾರ ಎಲ್ಲ ಏರ್‌ಪೋರ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ತನ್ಮೂಲಕ ತನಿಖಾ ಸಂಸ್ಥೆಗಳ ತನಿಖೆಗೆ ಬೇಕಾದ ಈ ವ್ಯಕ್ತಿಗಳು ದೇಶಬಿಟ್ಟು ಪರಾರಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ದೇಶದ ಅತಿದೊಡ್ಡ ಬ್ಯಾಂಕ್ ವಂಚನೆಯ ಈ ಪ್ರಕರಣದಲ್ಲಿ ಕಂಪನಿಯ ನಿರ್ದೇಶಕರಾದ ರಿಷಿ ಅಗರ್‌ವಾಲ್, ಸಂತಾನಂ ಮುತ್ತುಸ್ವಾಮಿ ಮತ್ತು ಅಶ್ವಿನಿ ಕುಮಾರ್ ಸೇರಿದಂತೆ ಇತರರು ಭಾಗಿಯಾಗಿದ್ದಾರೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ (CBI) ಆರೋಪಿಸಿದೆ.
2005ರಿಂದ 2012ರವರೆಗೆ ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಎಸ್‌ಬಿಐ ಸೇರಿದಂತೆ 28 ಬ್ಯಾಂಕ್‌ಗಳಿಂದ ಸಾಲವಾಗಿ ಪಡೆದಿದ್ದ ಕೋಟ್ಯಂತರ ರು.ಗಳನ್ನು ಎಬಿಜಿ ಶಿಪ್‌ಯಾರ್ಡ್ ಕಂಪನಿಯ ಅಧಿಕಾರಿಗಳು ಅನ್ಯ ಉದ್ದೇಶಗಳಿಗಾಗಿ ದುರ್ಬಳಕೆ ಮಾಡಿಕೊಂಡಿದ್ದರು. ತನ್ಮೂಲಕ ಬ್ಯಾಂಕ್‌ಗಳಿಗೆ 22,842 ಕೋಟಿ ರು. ವಂಚನೆ ಎಸಗಲಾಗಿದೆ ಎಂಬ ಆರೋಪವಿದೆ.
ಮಲ್ಯ, ನೀರವ್, ಚೋಕ್ಸಿಯ ಆಸ್ತಿ ಸೀಜ್, 9,371 ಕೋಟಿ ರೂ ಬ್ಯಾಂಕ್‌ಗೆ ಹಸ್ತಾಂತರ
ಮಲ್ಯ ಪ್ರಕರಣ: ಭಾರತದಲ್ಲಿ 9 ಸಾವಿರ ಕೋಟಿ ರು. ಸಾಲ ಮಾಡಿ ಬ್ರಿಟನ್‌ಗೆ ಪರಾರಿಯಾಗಿದ್ದ ಉದ್ಯಮಿ ವಿಜಯ ಮಲ್ಯ, ತಮ್ಮ ಬ್ರಿಟನ್ ಮನೆಯನ್ನೂ ಕಳೆದುಕೊಂಡಿದ್ದರು. ಸಾಲ ಕಟ್ಟದ ಮಲ್ಯ ಅವರ ಲಂಡನ್ ನಿವಾಸವನ್ನು ವಶಕ್ಕೆ ಪಡೆಯಲು ಸ್ವಿಸ್ ಬ್ಯಾಂಕ್ ‘ಯುಬಿಎಸ್’ ಸಲ್ಲಿಸಿದ ಅರ್ಜಿಯನ್ನು ಬ್ರಿಟನ್ ನ್ಯಾಯಾಲಯ ಮಾನ್ಯ ಮಾಡಿತ್ತು.
ಲಂಡನ್‌ನ ರೆಜಿಂಟ್ ಉದ್ಯಾನದಲ್ಲಿರುವ ಕಾರ್ನ್‌ವಾಲ್ ಟೆರೇಸ್ ಹೆಸರಿನ ಮಲ್ಯ ಅವರ ಐಷಾರಾಮಿ ನಿವಾಸವು ಸ್ವಿಸ್ ಬ್ಯಾಂಕ್ ಯುಬಿಎಸ್ ವಶವಾಗುವುದು ಪಕ್ಕಾ ಆಗಿತ್ತು. ತನ್ಮೂಲಕ ಮಲ್ಯ, ಅವರ ಪುತ್ರ ಸಿದ್ಧಾರ್ಥ ಮತ್ತು ತಾಯಿ ಲಲಿತಾ ಅವರು ಈ ಮನೆಯಿಂದ ಹೊರಬೀಳಲಿದ್ದಾರೆ.
ಬ್ರಿಟಿಷ್ ವರ್ಜಿನ್ ಐಲ್ಯಾಂಡ್‌ನಲ್ಲಿ ಮಲ್ಯ ಕುಟುಂಬದ ಹೆಸರಲ್ಲಿ ನೋಂದಣಿ ಆಗಿರುವ ರೋಸ್ ಕ್ಯಾಪಿಟಲ್ ಕಂಪನಿಯು 2012ರಲ್ಲಿ ಸ್ವಿಸ್ ಬ್ಯಾಂಕ್‌ನಿಂದ 200 ಕೋಟಿ ರು. ಸಾಲ ಪಡೆದಿತ್ತು. 5 ವರ್ಷಗಳ ಅವಧಿಯ ಈ ಸಾಲಕ್ಕೆ ಮಲ್ಯ ಅವರು ಲಂಡನ್‌ನಲ್ಲಿರುವ ಐಷಾರಾಮಿ ಮನೆಯನ್ನು ಅಡಮಾನ ಇಟ್ಟಿದ್ದರು. ಈ ಪ್ರಕಾರ 2017ರ ಮಾ.26ರ ಒಳಗೆ ಈ ಸಾಲವನ್ನು ಮರುಪಾವತಿ ಮಾಡಬೇಕಿತ್ತು. ಆದರೆ ಸಾಲ ಕಟ್ಟದ ಕಾರಣ ಮಲ್ಯ ಮನೆ ಬ್ಯಾಂಕ್ ಪಾಲಾಗಿದೆ.
ಸಾಲ ಮರುಪಾವತಿ: ಎಸ್‌ಬಿಐ ನೇತೃತ್ವದ ಒಕ್ಕೂಟದ ಪರವಾಗಿ ಸಾಲ ಮರುಪಡೆಯುವಿಕೆ ನ್ಯಾಯಮಂಡಳಿ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್‌ನ ಷೇರುಗಳನ್ನು 5824.50 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಆ ಮೂಲಕ ಜೂನ್ 25ರೊಳಗೆ ಷೇರುಗಳ ಮಾರಾಟದಿಂದ 800 ಕೋಟಿ ರೂ.ಗಳ ಹೆಚ್ಚಿನ ಪಡೆಯುವ ಬಗ್ಗೆ ನಿರೀಕ್ಷಿಸಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಈಗಾಗಲೇ ಷೇರುಗಳನ್ನು ಮಾರಾಟ ಮೂಲಕ 1357 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಿಕೊಂಡಿವೆ.
ಸುಸ್ತಿದಾರನಾಗಿ ದೇಶಭ್ರಷ್ಟ ಎನಿಸಿಕೊಂಡಿರುವ ಮಲ್ಯ ಅವರ ಆಸ್ತಿ ಹರಾಜಿಗೆ ಕೋರ್ಟ್ ಅನುಮತಿ ಸಿಕ್ಕ ಬಳಿಕ ಸರಿ ಸುಮಾರು 9 ಬಾರಿ ಈ ಹೌಸ್ ಹರಾಜಿಗೆ ಬಂದಿತ್ತು. ಆದರೆ, ಮಾರಾಟವಾಗಿರಲಿಲ್ಲ. ರಿಸರ್ವ್ಡ್ ಬೆಲೆ 135 ಕೋಟಿ ರು ಗಿಂತ ಕಡಿಮೆ ಬೆಲೆಗೆ 52.25 ಕೋಟಿ ರೂಪಾಯಿಗೆ ಮಾರಾಟವಾಗಿದೆ. ವಿಜಯ್ ಮಲ್ಯ, ಚೋಕ್ಸಿ, ನೀರವ್ ಮೋದಿ ದೇಶ ತೊರೆದಿದ್ದು ಅಂತಹುದೇ ಪ್ರಕರಣ ಮರುಕಳಿಸಬಾರದು ಎಂಬ ಕಾರಣಕ್ಕೆ ಲುಕ್ ಔಟ್ ನೋಟಿಸ್ ಜಾರಿಮಾಡಲಾಗಿದೆ.