Asianet Suvarna News Asianet Suvarna News

ಮೊಬೈಲ್‌ ಅದಲು-ಬದಲು ಆಗಿದ್ದಕ್ಕೆ ಯುವಕನಿಗೆ ಬಾಟಲಿಯಿಂದ ಹಲ್ಲೆ

ಮೊಬೈಲ್ ವಿಚಾರಕ್ಕೆ ಫುಡ್‌ ಡೆಲಿವರಿ ಬಾಯ್‌ಗೆ ಬಿಯರ್‌ ಬಾಟಲಿಯಿಂದ ಹಲ್ಲೆಗೈದಿದ್ದ ಪ್ರಕರಣ ಸಂಬಂಧ ಮಂಗಳಮುಖಿ ಸೇರಿ ನಾಲ್ವರನ್ನು ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 

A young man was attacked with a bottle for exchanging mobile phones gvd
Author
First Published May 2, 2024, 6:23 AM IST

ಬೆಂಗಳೂರು (ಮೇ.02): ಮೊಬೈಲ್ ವಿಚಾರಕ್ಕೆ ಫುಡ್‌ ಡೆಲಿವರಿ ಬಾಯ್‌ಗೆ ಬಿಯರ್‌ ಬಾಟಲಿಯಿಂದ ಹಲ್ಲೆಗೈದಿದ್ದ ಪ್ರಕರಣ ಸಂಬಂಧ ಮಂಗಳಮುಖಿ ಸೇರಿ ನಾಲ್ವರನ್ನು ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅನ್ನಪೂರ್ಣೇಶ್ವರಿನಗರ ನಿವಾಸಿ ಮಂಗಳಮುಖಿ ದಾಮಿನಿ ಮತ್ತು ಆಕೆಯ ಸಹಚರರಾದ ಮರಿಯನ್, ನಾಗೇಂದ್ರ ಹಾಗೂ ಕಿರಣ್ ಬಂಧಿತರು. ಆರೋಪಿಗಳು ಏ.28ರಂದು ಫುಡ್ ಡೆಲಿವರಿ ಬಾಯ್ ಸಂಕೇತ್‌ ಎಂಬಾತನ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಬೈಲ್‌ ಅದಲು-ಬದಲು: ಫುಡ್‌ ಡೆಲಿವರಿ ಬಾಯ್‌ ಸಂಕೇತ್‌ ಏ.25ರಂದು ಕಂಠೀರವ ಸ್ಟುಡಿಯೋ ಬಳಿ ಫುಡ್‌ ಆರ್ಡರ್‌ಗಾಗಿ ಕಾಯುತ್ತಿದ್ದ. ಈ ವೇಳೆ ಸ್ಥಳಕ್ಕೆ ಬಂದ ಮಂಗಳಮುಖಿ ದಾಮಿನಿ ಪರಿಚಯವಾಗಿದೆ. ಹೀಗೆ ಇಬ್ಬರು ಕೆಲ ಹೊತ್ತು ಮಾತನಾಡುವಾಗ ಇಬ್ಬರ ಮೊಬೈಲ್‌ ಅದಲು ಬದಲಾಗಿದೆ. ಇದನ್ನು ನೋಡಿಕೊಳ್ಳದೆ ಸಂಕೇತ್‌ ಸ್ಥಳದಿಂದ ತೆರಳಿದ್ದಾನೆ. ಬಳಿಕ ಮೊಬೈಲ್‌ ಬದಲಾಗಿರುವುದು ದಾಮಿನಿ ಗಮನಕ್ಕೆ ಬಂದಿದ್ದು, ಸಂಕೇತ್‌ ಬಳಿ ಇದ್ದ ತನ್ನ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಮೊಬೈಲ್‌ ವಾಪಾಸ್ ತಂದು ಕೊಡುವಂತೆ ಹೇಳಿದ್ದಾರೆ. ಇಲ್ಲವಾದರೆ, ಹುಡುಗರನ್ನು ಕಳುಹಿಸಿ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸಂಕೇತ್‌ ತುರ್ತು ಕೆಲಸ ನಿಮಿತ್ತ ಮೂರು ದಿನ ದಾಮಿನಿಗೆ ಸಿಕ್ಕಿರಲಿಲ್ಲ.

ಮೊಬೈಲ್ ಹಿಂದಿರುಗಿಸಲುಬಂದಾಗ ನಿಂದಿಸಿ, ಹಲ್ಲೆ: ಬಳಿಕ ಏ.28ರಂದು ಮೊಬೈಲ್‌ ವಾಪಸ್ ನೀಡಲು ಸಂಕೇತ್‌ ತನ್ನ ಸ್ನೇಹಿತ ಜನತೆಗೆ ನಾಗರಬಾವಿ ಸರ್ವಿಸ್‌ ರಸ್ತೆ ಬಳಿ ಬಂದು ದಾಮಿನಿಗೆ ಕರೆ ಮಾಡಿದ್ದಾನೆ. ಆಗ ತನ್ನ ಸಹಚರರ ಜತೆಗೆ ಕಾರಿನಲ್ಲಿ ಬಂದ ದಾಮಿನಿ, ಸಂಕೇತ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಏಕಾಏಕಿ ಬಿಯರ್‌ ಬಾಟಲಿಯಿಂದ ಸಂಕೇತ್‌ ತಲೆಗೆ ಹಲ್ಲೆ ಮಾಡಿದ್ದಾರೆ. ಚಾಕುವಿನಿಂದ ಇರಿಯಲು ಮುಂದಾದಾಗ ಸಂಕೇತ್‌ ಕೈ ಅಡ್ಡ ಹಿಡಿದ ಪರಿಣಾಮ ಕೈಗೆ ಗಾಯವಾಗಿದೆ. ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.

ಸ್ತ್ರೀಯರಿಗೆ ಕರ್ನಾಟಕ ಸುರಕ್ಷಿತ ತಾಣವಲ್ಲ: ಅಮಿತ್‌ ಶಾ ಚಾಟಿ

ಇನ್ನು ಈ ಹಲ್ಲೆ ವೇಳೆ ಸಂಕೇತ್‌ ಸ್ನೇಹಿತ ಹೆದರಿ ಓಡಿ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಬಳಿಕ ಸ್ಥಳೀಯರು ಗಾಯಾಳು ಸಂಕೇತ್‌ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂಬಂಧ ಸಂಕೇತ್‌ನಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios