ಆಧಾರ್‌ ಕಾರ್ಡ್‌ನಲ್ಲಿ ಹುಟ್ಟಿದ ದಿನಾಂಕ ತಿರುಚಿ ನಕಲಿ ದಾಖಲೆ ಸೃಷ್ಟಿಸಿ ಸಂಧ್ಯಾ ಸುರಕ್ಷಾ ಯೋಜನೆಯಡಿ ಯುವಕರಿಗೂ ವೃದ್ಧಾಪ್ಯ ವೇತನ ಪ್ರಮಾಣ ಪತ್ರ ವಿತರಣೆಗೆ ನೆರವಾಗುತ್ತಿದ್ದ ಸೈಬರ್‌ ಸೆಂಟರ್‌ ಮಾಲಿಕನೊಬ್ಬನನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.

ಬೆಂಗಳೂರು (ಮಾ.21) : ಆಧಾರ್‌ ಕಾರ್ಡ್‌ನಲ್ಲಿ ಹುಟ್ಟಿದ ದಿನಾಂಕ ತಿರುಚಿ ನಕಲಿ ದಾಖಲೆ ಸೃಷ್ಟಿಸಿ ಸಂಧ್ಯಾ ಸುರಕ್ಷಾ ಯೋಜನೆಯಡಿ ಯುವಕರಿಗೂ ವೃದ್ಧಾಪ್ಯ ವೇತನ ಪ್ರಮಾಣ ಪತ್ರ ವಿತರಣೆಗೆ ನೆರವಾಗುತ್ತಿದ್ದ ಸೈಬರ್‌ ಸೆಂಟರ್‌ ಮಾಲಿಕನೊಬ್ಬನನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.

ರಾಜಾಜಿನಗರದ ಕೆ.ಎಸ್‌.ಚತುರ್‌(KS Chatur Rajajinagar) ಬಂಧಿತನಾಗಿದ್ದು, ಆರೋಪಿಯಿಂದ ಲ್ಯಾಪ್‌ಟಾಪ್‌, 6 ಕಂಪ್ಯೂಟರ್‌, ಹಾರ್ಡ್‌ಡಿಸ್‌್ಕ, 4 ಮೊಬೈಲ್‌ ಮತ್ತು 205 ವೃದ್ಧಾಪ್ಯ ವೇತನ ಮಂಜೂರಾತಿ ಪ್ರಮಾಣ ಪತ್ರಗಳನ್ನು ಜಪ್ತಿ ಮಾಡಲಾಗಿದೆ. ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಮಣ್ಣೂರು ನಾಗರಾಜು(Mannur nagaraj) ಪತ್ತೆಗೆ ತನಿಖೆ ನಡೆದಿದೆ. ಇತ್ತೀಚೆಗೆ ರಾಜಾಜಿ ನಗರದ ರಮೇಶ್‌ ಅವರಿಗೆ ವೃದ್ಧಾಪ್ಯ ವೇತನ ಕೊಡಿಸುವುದಾಗಿ ನಂಬಿಸಿ ಆರೋಪಿಗಳು ವಂಚಿಸಿದ್ದರು. ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು: ಹತ್ತಾರು ಸೋಗಿನಲ್ಲಿ ನಕಲಿ ಐಪಿಎಸ್‌ ಅಧಿಕಾರಿ ವಂಚನೆ..!

2ರಿಂದ 5 ಸಾವಿರಕ್ಕೆ ವೃದ್ಧಾಪ್ಯ ವೇತನ:

ರಾಜಾಜಿ ನಗರದ ನಾಡಕಚೇರಿ ಬಳಿ ಚತುರ್‌ ಮತ್ತು ನಾಗರಾಜು ಸೈಬರ್‌ ಸೆಂಟರ್‌(Cyber center) ನಡೆಸುತ್ತಿದ್ದು, ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಪಡಿತರ ಚೀಟಿ ಸೇರಿದಂತೆ ಸರ್ಕಾರಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಜನರಿಗೆ ನೆರವಾಗುತ್ತಿದ್ದರು. ಆಗ ಅರ್ಜಿದಾರನ ಬಳಿ ದಾಖಲೆ ಕೊರತೆ ಅಥವಾ ಸೂಕ್ತ ದಾಖಲೆ ಇಲ್ಲದೆ ಇದ್ದರೇ ಹಣ ಪಡೆದು ನಕಲಿ ಸೃಷ್ಟಿಸಿ ಕೊಡುತ್ತಿದ್ದರು. ವೃದ್ಧಾಪ್ಯ ವೇತನ ಪಡೆಯಲು 60 ವರ್ಷ ತುಂಬಿರಬೇಕು. ಆಧಾರ್‌ ಕಾರ್ಡ್‌ ಕಡ್ಡಾಯ. ಅದರಲ್ಲಿರುವ ಜನ್ಮ ದಿನಾಂಕದ ಪ್ರಕಾರ 60 ವರ್ಷರ ತುಂಬಿರಬೇಕು. ಇಲ್ಲವಾದರೆ, ಆಧಾರ್‌ ಕಾರ್ಡನ್ನು ಕಂಪ್ಯೂಟರ್‌ನಲ್ಲಿ ತಿರುಚಿ ಅನರ್ಹ ಫಲಾನುಭವಿಗಳ ಹೆಸರಿನಲ್ಲಿ ಆರೋಪಿಗಳು ಅರ್ಜಿ ಸಲ್ಲಿಸುತ್ತಿದ್ದರು. ಇದಕ್ಕೆ 2ರಿಂದ 5 ಸಾವಿರ ರುವರೆಗೆ ಆರೋಪಿಗಳು ಕಮಿಷನ್‌ ಪಡೆಯುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಅದೇ ರೀತಿ ಇತ್ತೀಚೆಗೆ ರಾಜಾಜಿ ನಗರ ನಾಡಕಚೇರಿ(Nadakacheri) ಸಮೀಪದ ಚತುರ್‌ ಸೈಬರ್‌ ಸೆಂಟರ್‌(Chatur Cyber ​​Center)ಗೆ ಹೋಗಿ ವೃದ್ಧಾಪ್ಯ ವೇತನಕ್ಕೆ ರಾಜಾಜಿ ನಗರದ ರಮೇಶ್‌ (63) ಅರ್ಜಿ ಸಲ್ಲಿಸಿದ್ದರು.ಇದೇ ವೇಳೆ 60 ವರ್ಷ ತುಂಬಿದೆ ಎಂದು ಹೇಳಿ 53 ವರ್ಷದ ಜಯರಾಮಶೆಟ್ಟಿಸೇರಿದಂತೆ ಕೆಲವರು ಅರ್ಜಿ ಸಲ್ಲಿಸಿದ್ದರು. ಹೀಗೆ ಅರ್ಜಿ ಸಲ್ಲಿಕೆಗೆ .2 ಸಾವಿರ ಪಡೆದು ಆಧಾರ್‌ನಲ್ಲಿ ಜನ್ಮ ದಿನಾಂಕ ಮತ್ತು ವಯಸ್ಸನ್ನು ತಿದ್ದುಪಡಿ ಮಾಡಿ ಸೈಬರ್‌ ಸೆಂಟರ್‌ ಮಾಲಿಕ ಚತುರ್‌ ಹಾಗೂ ನಾಗರಾಜ್‌ ಅರ್ಜಿ ಸಲ್ಲಿಸಿದ್ದರು.

1 ತಿಂಗಳ ಬಳಿಕ ಅನರ್ಹ ಜಯರಾಮಶೆಟ್ಟಿಮತ್ತು ಫೈಜಲ್‌ಗೆ ವೃದ್ಧಾಪ್ಯ ವೇತನದ ಪ್ರಮಾಣಪತ್ರ ಸಿಕ್ಕಿತು. 63 ವರ್ಷ ವಯಸ್ಸಾದ ರಮೇಶ್‌ಗೆ ವೃದ್ಧಾಪ್ಯ ವೇತನದ ಪ್ರಮಾಣಪತ್ರ ಕೊಟ್ಟಿರಲಿಲ್ಲ. ಕೇಳಿದ್ದಕ್ಕೆ ಇಂದು-ನಾಳೆ ಎಂದು ಚತುರ್‌ ಸತಾಯಿಸುತ್ತಿದ್ದ. ಇದರಿಂದ ಬೇಸತ್ತು ರಾಜಾಜಿನಗರ ಠಾಣೆಗೆ ಸಂತ್ರಸ್ತರು ದೂರು ಸಲ್ಲಿಸಿದ್ದರು. ಈ ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ ಪ್ರಕರಣವನ್ನು ಸಿಸಿಬಿಗೆ ನಗರ ಪೊಲೀಸ್‌ ಆಯುಕ್ತರು ವರ್ಗಾಯಿಸಿದ್ದರು. ಅಂತೆಯೇ ತನಿಖೆ ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು, ಚತುರ್‌ನನ್ನು ಬಂಧಿಸಿ ಆತನ ಸೈಬರ್‌ ಸೆಂಟರ್‌ ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

27 ವರ್ಷ ಯುವಕನಿಗೆ ವೃದ್ಧಾಪ್ಯ ವೇತನ!

60 ವರ್ಷದ ದಾಟಿ ವೃದ್ಧರಿಗೆ ಸಿಗಬೇಕಿದ್ದ ಸಂಧ್ಯಾ ಸುರಕ್ಷಾ ಯೋಜನೆಯ ವೃದ್ಧಾಪ್ಯ ವೇತನವು ಆರೋಪಿಗಳ ಕೈ ಚಳಕದಿಂದ 27 ವರ್ಷದ ಯುವಕನಿಗೆ ಸಹ ಲಭಿಸಿತ್ತು. ಇತ್ತೀಚೆಗೆ ಚತುರ್‌ನ ನೆರವು ಪಡೆದು ವೃದ್ಧಾಪ್ಯ ವೇತನಕ್ಕೆ 27 ವರ್ಷದ ಮಹಮ್ಮದ್‌ ಫೈಜಲ್‌ ಅರ್ಜಿ ಸಲ್ಲಿಸಿದ್ದ. ಇದಕ್ಕೆ ಆ ಯುವಕನಿಂದ ಆಧಾರ್‌ ಕಾರ್ಡ್‌ ಪಡೆದು ಅದರಲ್ಲಿನ ಜನ್ಮ ದಿನಾಂಕವನ್ನು ತಿದ್ದುಪಡಿ 60 ವರ್ಷ ವಯಸ್ಸಿನಂತೆ ಆರೋಪಿ ನಕಲಿ ಸೃಷ್ಟಿಸಿದ್ದ. ತರುವಾಯ ಒಂದೇ ತಿಂಗಳಿಗೆ ಫೈಜಲ್‌ಗೆ ವೃದ್ಧಾಪ್ಯ ವೇತನ ಪ್ರಮಾಣ ಪತ್ರ ಲಭಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಪಿಎಂಒ ಅಧಿಕಾರಿ ಎಂದು ಹೇಳಿದ್ದ ವಂಚಕನಿಗೆ Z ಪ್ಲಸ್‌ ಭದ್ರತೆ ನೀಡಿದ ಜಮ್ಮುಕಾಶ್ಮಿರ ಪೊಲೀಸ್‌!

205 ಜನರಲ್ಲಿ ನಕಲಿ ಎಷ್ಟು?

ದಾಳಿ ವೇಳೆ ಆರೋಪಿ ಚತುರ್‌ ಸೈಬರ್‌ ಸೆಂಟರ್‌ನಲ್ಲಿ 205 ವೃದ್ಧಾಪ್ಯ ವೇತನಕ್ಕೆ ಸಲ್ಲಿಸಿದ್ದ ಅರ್ಜಿಗಳು ಪತ್ತೆಯಾಗಿವೆ. ಇದರಲ್ಲಿ ಅಸಲಿ ಎಷ್ಟುನಕಲಿ ಎಷ್ಟುಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.