ಗಣಪತಿ ಕೂರಿಸುವ ವಿಚಾರವಾಗಿ ಚರ್ಚಿಸುವ ವೇಳೆ ನಿಂದಿಸಿದ ಎಂಬ ಕಾರಣಕ್ಕೆ ಯುವಕನೊಬ್ಬ ತನ್ನ ಬಾಲ್ಯ ಸ್ನೇಹಿತನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ಆ.28): ಗಣಪತಿ ಕೂರಿಸುವ ವಿಚಾರವಾಗಿ ಚರ್ಚಿಸುವ ವೇಳೆ ನಿಂದಿಸಿದ ಎಂಬ ಕಾರಣಕ್ಕೆ ಯುವಕನೊಬ್ಬ ತನ್ನ ಬಾಲ್ಯ ಸ್ನೇಹಿತನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಬ್ಬನ್‌ಪೇಟೆ ನಿವಾಸಿ ಅಜಿತ್ (24) ಚಾಕು ಇರಿತಗೆ ಒಳಗಾದವ. ಕೃತ್ಯ ಎಸಗಿದ ಆತನ ಸ್ನೇಹಿತ ಸುಮನ್(24) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಶನಿವಾರ ರಾತ್ರಿ 11ರ ಸುಮಾರಿಗೆ ಕಬ್ಬನ್‌ಪೇಟೆಯ ಮೂರನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ.
ಬಾಲ್ಯ ಸ್ನೇಹಿತರಾಗಿರುವ ಸುಮನ್ ಮತ್ತು ಅಜಿತ್ ಮಾದಕ ವಸ್ತು ಹಾಗೂ ಮದ್ಯ ವ್ಯಸನಿಗಳಾಗಿದ್ದಾರೆ. ಗಣೇಶ ಹಬ್ಬದ ಪ್ರಯುಕ್ತ ಏರಿಯಾದಲ್ಲಿ ಗಣಪತಿ ಕೂರಿಸುವ ಸಂಬಂಧ ಸುಮನ್ ಶನಿವಾರ ರಾತ್ರಿ ಧರ್ಮರಾಯ ಸ್ವಾಮಿ ದೇವಾಲಯದ ಬಳಿ ಇತರೆ ಸ್ನೇಹಿತರೊಂದಿಗೆ ಚರ್ಚಿಸುತ್ತಿದ್ದ. ಈ ವೇಳೆ ಪಾನಮತ್ತನಾಗಿ ಅಲ್ಲಿಗೆ ಬಂದಿರುವ ಅಜಿತ್, ಸುಮನ್ ಕಡೆಗೆ ಗುರಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಸದ್ಯದಲ್ಲೇ ನಿನಗೆ ಇದೆ ಎಂದು ಎಚ್ಚರಿಕೆ ನೀಡಿದ್ದಾನೆ. ಆದರೂ ಸುಮನ್, ಬೆಳಗ್ಗೆ ಮಾತನಾಡೋಣ ಮನೆಗೆ ಹೋಗು ಎಂದು ಅಜಿತ್‌ಗೆ ಹೇಳಿದ್ದಾನೆ.
ಮುನೇನಕೊಪ್ಪ, ಚಿಕ್ಕನಗೌಡ್ರ ಕಾಂಗ್ರೆಸ್‌ಗೆ ಬರ್ತಾರೆ: ಸಚಿವ ಸಂತೋಷ್ ಲಾಡ್
ಅಷ್ಟಕ್ಕೆ ಸುಮ್ಮನಾಗದ ಅಜಿತ್, ಅವಾಚ್ಯಶಬ್ದಗಳಿಂದ ನಿಂದಿಸುವುದನ್ನು ಮುಂದುವರೆಸಿದ್ದಾನೆ. ಇದರಿಂದ ಕೋಪಗೊಂಡ ಸುಮನ್, ಚಾಕು ತೆಗೆದು ಅಜಿತ್‌ನ ಎದೆ, ಕುತ್ತಿಗೆ, ಬೆನ್ನು ಸೇರಿದಂತೆ ಹಲವೆಡೆ ಐದಾರು ಬಾರಿ ಚುಚ್ಚಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡು ಕುಸಿದು ಬಿದ್ದ ಅಜಿತ್‌ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅಜಿತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಗೇಟ್ ಠಾಣೆ ಪೊಲೀಸರು ಆರೋಪಿ ಸುಮನ್‌ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
