ರಾತ್ರಿ ವೇಳೆ ಏಕಾಂಗಿಯಾಗಿ ಸಂಚರಿಸುವ ಫುಡ್‌ ಡೆಲಿವರಿ ಬಾಯ್‌ಗಳನ್ನು ಗುರಿಯಾಗಿಸಿಕೊಂಡು ಮೊಬೈಲ್‌ ದೋಚುತ್ತಿದ್ದ ಮಾಜಿ ಡೆಲಿವರಿ ಬಾಯ್‌ ಸೇರಿದಂತೆ ಮೂವರನ್ನು ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಬೆಂಗಳೂರು (ಆ.3) :  ರಾತ್ರಿ ವೇಳೆ ಏಕಾಂಗಿಯಾಗಿ ಸಂಚರಿಸುವ ಫುಡ್‌ ಡೆಲಿವರಿ ಬಾಯ್‌ಗಳನ್ನು ಗುರಿಯಾಗಿಸಿಕೊಂಡು ಮೊಬೈಲ್‌ ದೋಚುತ್ತಿದ್ದ ಮಾಜಿ ಡೆಲಿವರಿ ಬಾಯ್‌ ಸೇರಿದಂತೆ ಮೂವರನ್ನು ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಹುಳಿಮಾವು ನಿವಾಸಿಗಳಾದ ದಿಲೀಪ್‌ ಮಲ್ಲಿಕ್‌, ಜಿಗಣಿಯ ರಾಕೇಶ್‌ ಪಾಸ್ವಾನ್‌ ಹಾಗೂ ಟೋನಿ ಕುಮಾರ್‌ ಬಂಧಿತರಾಗಿದ್ದು, ಆರೋಪಿಗಳಿಂದ .3.75 ಲಕ್ಷ ಮೌಲ್ಯದ 25 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಕೃತ್ಯ ಎಸಗಿ ಪರಾರಿಯಾಗಿರುವ ಮತ್ತೊಬ್ಬ ಆರೋಪಿ ಚಂದನ್‌ ಪತ್ತೆಗೆ ತನಿಖೆ ನಡೆದಿದೆ.

ಫೋನ್‌ ಕಳ್ಳತನದ ದೂರು ಕೊಡಲು ಹೋಗುವಾಗ ಬೈಕ್‌ ಕದ್ದ ಖದೀಮರು

ಇತ್ತೀಚೆಗೆ ಗುರಪ್ಪನಪಾಳ್ಯ ಸಮೀಪ ಸ್ವಿಗ್ಗಿ ಡೆಲವರಿ ಬಾಯ್‌ನನ್ನು ಅಡ್ಡಗಟ್ಟಿಕಿಡಿಗೇಡಿಗಳು ಮೊಬೈಲ್‌ ದೋಚಿದ್ದರು. ಈ ಬಗ್ಗೆ ತನಿಖೆಗಿಳಿದ ಇನ್‌ಸ್ಪೆಕ್ಟರ್‌ ಮಾರುತಿ ಜಿ.ನಾಯಕ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಶ್ರೀಕಾಂತ್‌ ನಾಯ್ಕರ್‌ ನೇತೃತ್ವದ ತಂಡವು, ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಸುಲಿಗೆಕೋರರನ್ನು ಬಲೆಗೆ ಹಾಕಿಕೊಳ್ಳುವಲ್ಲಿ ಯಶಸ್ಸು ಕಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

5 ವರ್ಷದ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಒಡಿಶಾ ಮೂಲದ ದಿಲೀಪ್‌, ಹುಳಿಮಾವು ಸಮೀಪ ತನ್ನ ಸ್ನೇಹಿತನ ಜತೆ ನೆಲೆಸಿದ್ದ. ಝೋಮ್ಯಾಟೋದಲ್ಲಿ ಡೆಲಿವರಿ ಬಾಯ್‌ ಆಗಿದ್ದ. ಎಚ್‌ಎಸ್‌ಆರ್‌ ಲೇಔಟ್‌ ಸಮೀಪ ಖಾಸಗಿ ಕಂಪನಿಯಲ್ಲಿ ಕಚೇರಿ ಸಹಾಯಕನಾಗಿ ರಾಕೇಶ್‌ ಕೆಲಸ ಮಾಡುತ್ತಿದ್ದ. ಜಿಗಣಿಯಲ್ಲಿ ಆತನ ಸೋದರಿ ಕೋಳಿ ಮಾಂಸದ ಹೋಟೆಲ್‌ ನಡೆಸುತ್ತಿದ್ದರು. ಈ ಹೋಟೆಲ್‌ಗೆ ಹೋಗುತ್ತಿದ್ದಾಗ ಒಂದೇ ರಾಜ್ಯದವರಾದ ದಿಲೀಪ್‌ ಹಾಗೂ ರಾಕೇಶ್‌ ಪರಸ್ಪರ ಪರಿಚಿತರಾಗಿದ್ದರು. ಹೆಚ್ಚು ಹಣ ಗಳಿಸಲು ಮೊಬೈಲ್‌ ದೋಚಲು ಆರಂಭಿಸಿದ್ದರು. ಇದಕ್ಕೆ ಚಂದನ್‌, ರಾಕೇಶ್‌ ಸಾಥ್‌ ಕೊಟ್ಟಿದ್ದರು. ಎಚ್‌ಎಸ್‌ಆರ್‌ ಲೇಔಟ್‌ ಸಮೀಪ ಖಾಸಗಿ ಕಂಪನಿಯಲ್ಲಿ ನೌಕರಿಯಲ್ಲಿದ್ದ ಅಸ್ಸಾಂ ಮೂಲದ ಟೋನಿ ಸ್ನೇಹವಾಗಿದೆ. ಆಗ ಹಣದಾಸೆಗೆ ಆತನ ಸಹ ದಿಲೀಪ್‌ ಗ್ಯಾಂಗ್‌ ಜತೆ ಕೈಜೋಡಿಸಿದ್ದಾನೆ. ದೋಚಿದ್ದ ಮೊಬೈಲ್‌ಗಳನ್ನು ಟೋನಿ ಮೂಲಕ ಆರೋಪಿಗಳು ವಿಲೇವಾರಿ ಮಾಡಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಶಿವಮೊಗ್ಗ: ಜೆಸಿಬಿ ಬಳಸಿ ATM ಕಳ್ಳತನಕ್ಕೆ ಯತ್ನಿಸಿದ ಭೂಪ!

ಈ ಕಳವು ಮೊಬೈಲ್‌ಗಳನ್ನು ಅಸ್ಸಾಂಗೆ ತೆಗೆದುಕೊಂಡು ಹೋಗಿ ತನ್ನ ಪರಿಚಿತರಿಗೆ ಕಡಿಮೆ ಬೆಲೆಗೆ ಟೋನಿ ಮಾರಾಟ ಮಾಡುತ್ತಿದ್ದ. ಕೆಲವು ಮೊಬೈಲ್‌ಗಳನ್ನು ಬೆಂಗಳೂರಿನಲ್ಲಿ ಸಹ ಆತ ಮಾರಾಟ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.