ಟೆಕ್ಕಿಯೊಬ್ಬ ಪತ್ನಿಯ ಶೀಲ ಶಂಕಿಸಿ ಮಗುವನ್ನು ಕೊಂದು ಕಾಡಿಗೆ ಎಸೆದಿದ್ದಾನೆ. ತನಿಖೆ ನಡೆಸಿದ ಪೊಲೀಸರಿಗೆ ಮಗುವಿನ ದೇಹ ಕಾಡಿನಲ್ಲಿ ಪತ್ತೆಯಾಗಿದೆ.

ಪುಣೆ: ಟೆಕ್ಕಿಯೊಬ್ಬ ತನ್ನ ಪತ್ನಿ ಅನ್ಯ ವ್ಯಕ್ತಿ ಜತೆ ವಿವಾಹೇತರ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ 3 ವರ್ಷದ ಮಗನ ಕತ್ತು ಸೀಳಿ ಕೊಂದು, ನಂತರ ದೇಹವನ್ನು ಕಾಡಿನಲ್ಲಿ ಎಸೆದ ಅಮಾನವೀಯ ಘಟನೆ ಇಲ್ಲಿನ ಚಂದನ್‌ ನಗರದಲ್ಲಿ ನಡೆದಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದವರಾದ ಮಾಧವ್‌ ಟಿಕೆಟೀ ಮತ್ತು ಸ್ವರೂಪಾ ನಡುವೆ ಗುರುವಾರ ವಾಗ್ವಾದ ನಡೆದಿತ್ತು. ಸ್ವರೂಪಾ ದಾಂಪತ್ಯ ದ್ರೋಹವೆಸಗುತ್ತಿದ್ದಾಳೆ ಎಂದು ಬಗೆದ ಮಾಧವ್‌, 3 ವರ್ಷದ ಮಗ ಹಿಮ್ಮತ್‌ನೊಂದಿಗೆ ಮನೆ ಬಿಟ್ಟು ತೆರಳಿದ್ದ.ರಾತ್ರಿಯಾದರೂ ಅವರಿಬ್ಬರು ಮನೆಗೆ ಮರಳದಾಗ ಸ್ವರೂಪಾ ಪೊಲೀಸರ ನೆರವು ಯಾಚಿಸಿದ್ದಳು. ಸಿಸಿಟೀವಿ ಪರಿಶೀಲಿಸಿದಾಗ ಮಧ್ಯಾಹ್ನ 2.30ರ ಸುಮಾರಿಗೆ ಮಗನೊಂದಿಗಿದ್ದ ಮಾಧವ್‌, ಸಂಜೆ 5ಕ್ಕೆ ಒಬ್ಬನೇ ಇರುವುದು ಕಂಡುಬಂದಿದೆ. ಮೊಬೈಲ್‌ ಟ್ರೇಸ್‌ ಮಾಡಿದಾಗ ಆತ ಲಾಡ್ಜ್‌ ಒಂದರಲ್ಲಿ ಪಾನಮತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಳಿಕ ಮಾಧವ್‌ ಮಗನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಶೋಧ ಕೈಗೊಂಡ ಪೊಲೀಸರಿಗೆ ಸಮೀಪದ ಕಾಡೊಂದರಲ್ಲಿ ಮಗುವಿನ ದೇಹ ದೊರಕಿದೆ. ‘ಮಾಧವ್‌ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಠ ಮಾಡ್ತಿದೆ ಅಂತಾ ಮಗು ಕೈಮೇಲೆ ಬರೆ, ಡೈಪರ್ ಗೆ ಖಾರದ ಪುಡಿ ಹಾಕಿ ಅಂಗನವಾಡಿ ಸಹಾಯಕಿ ವಿಕೃತಿ!

ಮರ್ಚಂಟ್‌ ನೇವಿ ಅಧಿಕಾರಿ ಸೌರಭ್‌ ತಲೆ, ಕೈ ತುಂಡು ತುಂಡು ಮಾಡಿದ್ದ ಪತ್ನಿ, ಪ್ರಿಯಕರ
ಮೇರಠ್‌: ಪತ್ನಿಗೆ ಜನ್ಮದಿನದ ಸರ್‌ಪ್ರೈಸ್‌ ನೀಡಲೆಂದು ವಿದೇಶದಿಂದ ಬಂದು ಆಕೆಯ ಕೈಯ್ಯಲ್ಲೇ ಕೊಲೆಯಾದ ಮರ್ಚಂಟ್‌ ನೇವಿ ಅಧಿಕಾರಿ ಸೌರಭ್‌ ರಾಜಪೂತ್‌ ಅವರ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅವರನ್ನು ಅಮಾನವೀಯ ರೀತಿಯಲ್ಲಿ ಕೊಲೆ ಮಾಡಲಾಗಿರುವ ಬೆಚ್ಚಿಬೀಳಿಸುವ ವಿಷಯ ಬಯಲಾಗಿದೆ.

ತಾನು ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರ ಸಾಹಿಲ್‌ನೊಂದಿಗೆ ಸೇರಿಕೊಂಡು ಸೌರಭ್‌ರನ್ನು ಅವರ ಪತ್ನಿ ಮುಸ್ಕಾನ್‌ ರಸ್ತೋಗಿ ಕೊಲೆ ಮಾಡಿದ್ದರು. ಬಳಿಕ ಮೃತದೇಹವನ್ನು ಡ್ರಂನ ಒಳಗೆ ತುಂಬಲು ಅನುಕೂಲವಾಗುವಂತೆ ತಲೆ, ಮುಂಗೈ ತುಂಡು ತುಂಡು ಮಾಡಲಾಗಿತ್ತು. ಜೊತೆಗೆ ಕಾಲನ್ನು ಹಿಂಬದಿ ಮಡಿಚಲಾಗಿತ್ತು ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.

ಶವಪರೀಕ್ಷೆ ನಡೆಸಿದ ವೈದ್ಯರು, ‘ಸೌರಭ್‌ ಅವರಿಗೆ ಮತ್ತು ಬರಿಸಿ ನಂತರ ಕೊಲ್ಲಲಾಗಿದೆ. ಅವರ ಹೃದಯಕ್ಕೆ 3 ಬಾರಿ ಚಾಕುವಿನಿಂದ ಬಲವಾಗಿ ಚುಚ್ಚಲಾಗಿದೆ. ಬಳಿಕ ದೇಹವನ್ನು ಧೂಳು ಹಾಗೂ ಸಿಮೆಂಟ್‌ ಇದ್ದ ಡ್ರಮ್ಮಿನೊಳಗೆ ತುಂಬಲಾಗಿದೆ. ಒಳಗೆ ಗಾಳಿ ಆಡದ ಕಾರಣ ಶವ ಕೊಳೆತಿರಲಿಲ್ಲ ಹಾಗೂ ಅಷ್ಟಾಗಿ ದುರ್ಗಂಧ ಬರುತ್ತಿರಲಿಲ್ಲ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಭದ್ರಾ ನದಿಯಲ್ಲಿ ಸಾಲು ಸಾಲು ಅನಾಹುತ: ನದಿಗೆ ಹಾರಿ ಯುವಕ ಸಾವಿಗೆ ಶರಣು!