ರಾಜಸ್ಥಾನದ ಶ್ರೀಗಂಗಾನಗರದಲ್ಲಿ, ಆಟೋ ಚಾಲಕನೊಬ್ಬ 13 ವರ್ಷದ ಬಾಲಕಿಯನ್ನು ₹1000ಕ್ಕೆ ಹೋಟೆಲ್‌ಗೆ ಮಾರಾಟ ಮಾಡಿದ್ದಾನೆ. ಅಲ್ಲಿ ಐದು ದಿನಗಳ ಕಾಲ 30ಕ್ಕೂ ಹೆಚ್ಚು ಮಂದಿ ಆಕೆಯ ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆಸಿದ್ದಾರೆ. ಈ ಘೋರ ಕೃತ್ಯದ ನಂತರ, ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಆಡಳಿತವು ಆರೋಪಕ್ಕೆ ಗುರಿಯಾದ ಹೋಟೆಲ್‌ಗಳನ್ನು ಬುಲ್ಡೋಜರ್ ಬಳಸಿ ಕೆಡವಿದೆ.

ಏನೂ ಅರಿಯದ ಮುಗ್ಧ ಬಾಲೆ ಈ 13ರ ಬಾಲಕಿ. ಆಕೆಯ ಮೇಲೆ 30 ಮಂದಿ ನಿರಂತರ ಅತ್ಯಾ*ಚಾರ ನಡೆಸಿದ್ದಾರೆ ಎಂದರೆ ಅದನ್ನು ನೆನಪಿಸಿಕೊಳ್ಳಲೂ ಮೈಯೆಲ್ಲಾ ನಡುಗುವುದು ಇದೆ. ಆದರೆ ಇನ್ನೊಂದು ಶಾಕಿಂಗ್​ ವಿಷ್ಯ ಎಂದರೆ, ಮನೆಗೆ ಹೋಗಲು ಆಟೋರಿಕ್ಷಾ ಹತ್ತಿದ ಬಾಲಕಿಯನ್ನು ಅದರ ಡ್ರೈವರೇ ಒಂದು ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾನೆ ಎಂದರೆ ಪರಿಸ್ಥಿತಿ ಯಾವ ಹಂತಕ್ಕೆ ಹೋಗಿದೆ ಎನ್ನುವುದನ್ನು ಊಹಿಸಿಕೊಳ್ಳಲೂ ಆಗದ ಸ್ಥಿತಿ ಸದ್ಯಕ್ಕಿದೆ. ಇಂಥ ಕಾಮುಕರ ಅಟ್ಟಹಾಸದಲ್ಲಿ ಬಾಲಕಿ ನಲುಗಿದರೆ, ಅತ್ತ ಸರ್ಕಾರ, ಇಂಥವುಗಳಿಗಾಗಿಯೇ ಮೀಸಲು ಇರುವ ನಾಲ್ಕು ಹೋಟೆಲ್​ಗಳ ಮೇಲೆ ಬುಲ್ಗೋಜರ್​ ಪ್ರಹಾರ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾರಾಟ ಮಾಡಿದ ಆಟೋ ಡ್ರೈವರ್​

ಈ ಘಟನೆ ನಡೆದಿರುವುದು ರಾಜಸ್ಥಾನದ ಶ್ರೀಗಂಗಾನಗರದಲ್ಲಿ. ಜೂನ್ 18 ರಂದು, ಹುಡುಗಿ ಮನೆಗೆ ಹೋಗುವಾಗ ರಿಕ್ಷಾ ಹತ್ತಿದಳು. ರಿಕ್ಷಾ ಚಾಲಕ ಅವಳನ್ನು ಒಂದು ಸಾವಿರ ರೂಪಾಯಿಗೆ ಹೋಟೆಲ್‌ಗೆ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಹೋಟೆಲ್ ನಿರ್ವಾಹಕ ಮತ್ತು ವ್ಯವಸ್ಥಾಪಕರು ಸಂತ್ರಸ್ತೆಯನ್ನು ಒಂದು ಕೋಣೆಯಲ್ಲಿ ಇರಿಸಿಕೊಂಡು ಇತರ ಜನರನ್ನು ಸಾಮೂಹಿಕ ಅತ್ಯಾ*ಚಾರ ಮಾಡಲು ಕರೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ. ನಗರದಾದ್ಯಂತ ಹಲವಾರು ಹೋಟೆಲ್‌ಗಳಲ್ಲಿ ಐದು ದಿನಗಳಲ್ಲಿ 30 ಕ್ಕೂ ಹೆಚ್ಚು ಜನರು ಬಾಲಕಿಯ ಮೇಲೆ ಪದೇ ಪದೇ ಅತ್ಯಾ*ಚಾರ ನಡೆಸಿದ್ದಾರೆ.

ಘಟನೆ ಬೆಳಕಿಗೆ ಬಂದ ನಂತರ, ಇಡೀ ನಗರ ಉದ್ವಿಗ್ನವಾಯಿತು. ಹೋಟೆಲ್ ಅನ್ನು ಕೆಡವಲು ಮತ್ತು ಸಾಮೂಹಿಕ ಅತ್ಯಾ*ಚಾರದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜನರು ಬೀದಿಗಿಳಿದರು. ಕೆಲವು ಕಾಂಗ್ರೆಸ್ ನಾಯಕರು ಕೂಡ ಧರಣಿ ನಡೆಸಿದರು. ಈ ಮಧ್ಯೆ, ನಗರದಲ್ಲಿ ಸುಮಾರು 150 ಹೋಟೆಲ್‌ಗಳ ಕಾರ್ಯಾಚರಣೆಯನ್ನು ಪ್ರತಿಭಟನಾಕಾರರು ಪ್ರಶ್ನಿಸಿದರು. ಶ್ರೀ ಗಂಗಾನಗರ ಪ್ರವಾಸಿ ತಾಣವೂ ಅಲ್ಲ ಅಥವಾ ವಾಣಿಜ್ಯ ಕೇಂದ್ರವೂ ಅಲ್ಲ, ಹಾಗಾದರೆ ಇಷ್ಟೊಂದು ಹೋಟೆಲ್‌ಗಳು ಏಕೆ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ವಾದಿಸಿದರು. ಹೋಟೆಲ್ ನೋಂದಣಿಗಳ ಬಗ್ಗೆ ತನಿಖೆ ನಡೆಸಬೇಕೆಂದು ಜನರು ಒತ್ತಾಯಿಸಿದರು.

ಬುಲ್ಡೋಜರ್​ ಪ್ರಹಾರ

ಮಂಗಳವಾರ ತಡರಾತ್ರಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಆಡಳಿತ ತಂಡಗಳು ಜೆಸಿಬಿಗಳು ಮತ್ತು ಹೈಡ್ರಾಲಿಕ್ ಯಂತ್ರಗಳೊಂದಿಗೆ ಹೋಟೆಲ್ ಅನ್ನು ಕೆಡವಲು ಪ್ರಾರಂಭಿಸಿದವು. ಕಾರ್ಯಾಚರಣೆಯ ಸಮಯದಲ್ಲಿ ದೊಡ್ಡ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು. ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಯಾರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಹರಿಶಂಕರ್ ಹೇಳಿದ್ದಾರೆ. ಯಾವುದೇ ಆರೋಪಿಗಳನ್ನು ಬಿಡಲಾಗುವುದಿಲ್ಲ ಎಂದಿದ್ದಾರೆ.

ಬಲವಂತವಾಗಿ ಮದ್ಯ ಕುಡಿಸಿರುವ ಬಗ್ಗೆ ಬಾಲಕಿ ಹೇಳಿದ್ದಾಳೆ. ಇಲ್ಲಿಯವರೆಗೆ, ಪೊಲೀಸರು ಪ್ರಕರಣದಲ್ಲಿ 12 ಆರೋಪಿಗಳನ್ನು ಬಂಧಿಸಿದ್ದಾರೆ. ಶಂಕಿತರನ್ನು ಗುರುತಿಸಲು ಮತ್ತು ಬಂಧಿಸಲು ತನಿಖೆ ನಡೆಯುತ್ತಿದೆ.